ಉಡುಪಿ: ಮೋಕ್ಷ ಸುಖ ಶಾಶ್ವತವಾದುದು. ಅದನ್ನು ಪಡೆಯಲು ದೇವರಿಗೆ ಶರಣಾಗಬೇಕು. ಅದಕ್ಕಾಗಿ ನಮ್ಮ ಪ್ರಾರ್ಥನೆ ಇರಬೇಕು ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಸುವರ್ಣ ಗೋಪುರ ಸಮರ್ಪಣೋತ್ಸವ ಪ್ರಯುಕ್ತ ಶುಕ್ರವಾರ ರಾಜಾಂಗಣದಲ್ಲಿ ಜರಗಿದ “ಧರ್ಮ ಗೋಪುರಂ’ನಲ್ಲಿ ಶ್ರೀಗಳು ಆಶೀರ್ವ ಚನ ನೀಡಿದರು.
ಬಾಹ್ಯ ಪ್ರಪಂಚದಲ್ಲಿ ಸಿಗುವುದು ಮಾತ್ರ ಸುಖವೆಂದು ತಿಳಿದು ಅದರ ಹಿಂದೆ ಹೋಗುತ್ತೇವೆ. ಆದರೆ ಶಾಸ್ತ್ರ ಪ್ರಕಾರ ಸುಖ ಇರುವುದು ಹೊರಗಿನಿಂದಲ್ಲ, ಒಳಗಿನಿಂದ. ಒಳಗಿನ ಸುಖ ಪಡೆಯಲು ಒಳಗಿನಿಂದಲೇ ಪ್ರಯತ್ನ ಪಡಬೇಕು. ಅದಕ್ಕೆ ದೇವರ ಅನುಗ್ರಹ ಬೇಕು. ದೇವರು ನಮಗೆ ನಿದ್ರಾವಸ್ಥೆಯನ್ನು ನೀಡಿ ಅದರಿಂದ ಅಪಾರ ಆನಂದ ನೀಡುತ್ತಾನೆ. ನಿದ್ರಾವಸ್ಥೆಯೆಂಬುದು ಮೋಕ್ಷದ ಸುಖ ಪಡೆಯುವುದಕ್ಕೆ ದೇವರು ನೀಡುವ ತರಬೇತಿ. ಈ ನಿದ್ರಾವಸ್ಥೆಯಂಥ ಸುಖವೇ ಮುಂದುವರಿದು ಮೋಕ್ಷ ಸುಖ ಪಡೆಯುವ ಪ್ರಯತ್ನ ನಮ್ಮದಾಗಬೇಕು ಎಂದು ಶ್ರೀಗಳು ಹೇಳಿದರು.
ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೆಶತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಧರ್ಮ ಸಂದೇಶ ನೀಡಿದರು. ವಿದ್ವಾಂಸರಾದ ವೆಂಕಟೇಶ ಕುಲಕರ್ಣಿ ಮತ್ತು ಲಕ್ಷ್ಮೀಶ ಆಚಾರ್ಯ ವಿಚಾರ ಮಂಡಿಸಿದರು. ತಂಜಾವೂರು ಛತ್ರಪತಿ ಮಹಾರಾಜ್ ಶ್ರೀ ರಾಜಶ್ರೀ ಬಾಬಾಜಿ ರಾಜಾ ಸಾಹೇಬ್ ಭೋಸ್ಲೆ ಮತ್ತು ಕುಟುಂಬಿಕರನ್ನು ಪರ್ಯಾಯ ಶ್ರೀಗಳು ಗೌರವಿಸಿದರು. ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಜಯರಾಮ್ ಭಟ್, ಡಾ| ರವಿಚಂದ್ರನ್ ಉಪಸ್ಥಿತರಿದ್ದರು.
“ತಾಯಿಯ ಸ್ಥಾನ ಪೂಜನೀಯ’
ಇದೇ ಸಂದರ್ಭದಲ್ಲಿ ನಡೆದ “ವನಿತಾ ಗೋಪುರಮ್’ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀ ಪಲಿಮಾರು ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಭೂಮಿಯಲ್ಲಿ ಮಹಿಳೆಯರಿಗೆ ಶ್ರೇಷ್ಠವಾದ ಸ್ಥಾನವಿದೆ. ಮಗು ಮೊದಲು ತಾಯಿಯನ್ನು ನೋಡಿ ಅನಂತರ ತಂದೆಯನ್ನು ನೋಡುವುದೇ ನಮ್ಮ ಸಂಸ್ಕೃತಿ. ಮಹಿಳೆಯರು ಮಗುವಿನ ಭವಿಷ್ಯವನ್ನು ರಕ್ಷಣೆ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ತಾಯಿಯ ಸ್ಥಾನ ಪೂಜ್ಯವಾದುದು ಎಂದರು.
ವಿದ್ವಾನ್ ಶ್ರೀ ಅರುಣಾಚಾರ್ಯ ಕಾಖಂಡಕಿ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ವಿದ್ವಾಂಸರಾದ ಸರಸ್ವತೀ ಶ್ರೀಪತಿ, ಶಾಂತಾ ಉಪಾಧ್ಯಾಯ, ಶೋಭಾ ಉಪಾಧ್ಯಾಯ, ಆಶಾ ಪೆಜತ್ತಾಯ, ಸುಲಕ್ಷಣಾ ವೆಂಕಟಾಚಾರ್ಯ, ಡಾ| ಪರಿಮಳಾ ವಿವಿಧ ವಿಚಾರ ಮಂಡನೆ ನಡೆಸಿದರು. ವೆಂಕಟೇಶ ಆಚಾರ್ಯ ಸ್ವಾಗತಿಸಿ, ವಂದಿಸಿದರು. ಸರಸ್ವತೀ ಶ್ರೀಪತಿ ಕಾರ್ಯಕ್ರಮ ನಿರೂಪಿಸಿದರು.