Advertisement

ಕಾಮಿಡಿ ಹಾದಿಯಲ್ಲಿ ಧರ್ಮ ದರ್ಶನ

10:08 AM Mar 21, 2020 | mahesh |

2016ರ ಅಕ್ಟೋಬರ್‌ನಲ್ಲಿ ತೆರೆಕಂಡ “ರಾಮಾ ರಾಮಾ ರೇ..’ ಚಿತ್ರದ ಹಾಸ್ಯ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟನಾಗಿ ಪರಿಚಯವಾದವರು ಧರ್ಮಣ್ಣ ಕಡೂರು. ಅಲ್ಲಿಂದ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆಯಿಟ್ಟು ಮುಂದೆ ಸಾಗುತ್ತಿರುವ ಧರ್ಮಣ್ಣ, ನೋಡು-ನೋಡುತ್ತಲೇ ಯಶಸ್ವಿಯಾಗಿ ಮೂರು ವರ್ಷಗಳ ಸಿನಿಯಾನ ಪೂರೈಸಿದ್ದಾರೆ. ಇಲ್ಲಿಯವರೆಗೆ ಸುಮಾರು 15ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿ, ಕನ್ನಡದ ಭರವಸೆಯ ಹಾಸ್ಯನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಧರ್ಮಣ್ಣ.

Advertisement

“ರಾಮಾ ರಾಮಾ ರೇ..’ ಚಿತ್ರದ ಯಶಸ್ಸು ಧರ್ಮಣ್ಣ ಅವರಿಗೂ ಸಾಕಷ್ಟು ಹೆಸರು ತಂದು ಕೊಟ್ಟಿತು. ಆ ನಂತರ ನಿಧಾನವಾಗಿ ಒಂದೊಂದೆ ಚಿತ್ರಗಳ ಪಾತ್ರಗಳು ಧರ್ಮಣ್ಣ ಅವರನ್ನು ಹುಡುಕಿಕೊಂಡು ಬರಲು ಶುರುವಾದವು. “ರಾಮಾ ರಾಮಾ ರೇ..’ ಚಿತ್ರದ ನಂತರ ತೆರೆಗೆ ಬಂದ “ಮುಗುಳು ನಗೆ’, “ಲಂಬೋದರ’, , “ಸ್ಟ್ರೈಕರ್‌’, “ಪಡ್ಡೆಹುಲಿ’, “ಕನ್ನಡ್‌ ಗೊತ್ತಿಲ್ಲ’, “ಭರಾಟೆ’, “ಅಳಿದು ಉಳಿದವರು’, “ಕಾಣದಂತೆ ಮಾಯವಾದನು’ ಹೀಗೆ ಸುಮಾರು ಮೂರು ವರ್ಷಗಳಲ್ಲಿ ಧರ್ಮಣ್ಣ ಅಭಿನಯಿಸಿರುವ 15ಕ್ಕೂ ಹೆಚ್ಚು ಚಿತ್ರಗಳು ತೆರೆಕಂಡಿವೆ. ಸದ್ಯ “ಇನ್ಸ್‌ಪೆಕ್ಟರ್‌ ವಿಕ್ರಮ…’, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ರಾಬರ್ಟ್‌’, “ಐ ಯಾಮ್‌ ಪ್ರಗ್ನೆಂಟ್‌’, “ಗ್ರಾಮಾಯಣ’ ಹೀಗೆ ಏಳೆಂಟು ಚಿತ್ರಗಳು ತೆರೆಗೆ ಬರಲು ರೆಡಿಯಾಗುತ್ತಿವೆ. ಈಗಾಗಲೇ ಸುಮಾರು ಐದಾರು ಚಿತ್ರಗಳ ಮಾತುಕತೆ ನಡೆಯುತ್ತಿದ್ದು, ಆ ಚಿತ್ರಗಳು ಕೂಡ ಈ ವರ್ಷದಲ್ಲೇ ಶುರುವಾಗುವ ಸಾಧ್ಯತೆ ಇದೆ.

ಇತ್ತೀಚೆಗೆ ತೆರೆಕಂಡ “ಕಾಣದಂತೆ ಮಾಯವಾದನು’ ಚಿತ್ರದಲ್ಲಿ ಧರ್ಮಣ್ಣ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ತೆರೆಕಾಣಲು ರೆಡಿಯಾಗಿರುವ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರದಲ್ಲೂ ಧರ್ಮಣ್ಣ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಧರ್ಮಣ್ಣ ಅವರ ಅಭಿನಯವನ್ನು ಕಂಡ ಹಲವರು ಧರ್ಮಣ್ಣ ಅವರಿಗಾಗಿಯೇ ಸಿನಿಮಾ ಮಾಡುವ ಯೋಚನೆಯನ್ನೂ ಮಾಡುತ್ತಿ­ದ್ದಾರೆ. ಈ ಬಗ್ಗೆ ಮಾತನಾಡುವ ಧರ್ಮಣ್ಣ, “ಕಳೆದ ಮೂರು-ನಾಲ್ಕು ವರ್ಷಗಳಿಂದ ಚಿತ್ರರಂಗ, ಪ್ರೇಕ್ಷಕರು ನನ್ನನ್ನು ಗುರುತಿಸುತ್ತಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳು, ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಚಾಲೆಂಜಿಂಗ್‌ ಪಾತ್ರಗಳಲ್ಲಿ ನಟಿಸಬೇಕು, ಜನರನ್ನು ನಗಿಸಬೇಕು ಎನ್ನುವ ಆಸೆ ಇದೆ. ಕೆಟ್ಟ ಕಾಮಿಡಿ ಮಾಡಲು ನನಗೆ ಇಷ್ಟವಿಲ್ಲ. ಸಿನಿಮಾ ನೋಡಿದವರಿಗೆ ನೆನಪಿನಲ್ಲಿ ಉಳಿಯುವ ಹಾಗೆ ಆಗಬೇಕು. ನನ್ನ ಮ್ಯಾನರಿಸಂ ಹಾಗೂ ಅಭಿನಯಕ್ಕೆ ತಕ್ಕಂತೆ ಕಥೆ ಇದ್ದರೆ ಮಾತ್ರ ಅಂತಹ ಚಿತ್ರ ಮಾಡುತ್ತೇನೆ’ ಎನ್ನುತ್ತಾರೆ.

ಹೀರೋ ಆಗೋ ಆಸೆ ಇಲ್ಲ
ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ನಟರಾಗಿ ಬಂದವರು ಆನಂತರ ಹೀರೋಗಳಾಗಿ ಮಿಂಚಿದ ಹತ್ತಾರು ಉದಾಹರಣೆಗಳಿವೆ. ಕೋಮಲ್‌, ಶರಣ್‌, ಚಿಕ್ಕಣ್ಣ, ರಂಗಾಯಣ ರಘು, ಸಾಧುಕೋಕಿಲ ಹೀಗೆ ಈ ಸಾಲಿನಲ್ಲಿ ಹಲವು ಹೆಸರುಗಳು ಸಿಗುತ್ತವೆ. ಈ ಸಾಲಿಗೆ ಮುಂದೆ ಏನಾದ್ರೂ ಧರ್ಮಣ್ಣ ಕಡೂರು ಸೇರಿಕೊಳ್ಳುತ್ತಾರಾ? ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿದೆ, “ಹೀರೋ ಆಗಿ ಅಲ್ಲ. ಆದ್ರೆ ಒಳ್ಳೆಯ ಪಾತ್ರ ಮಾಡುವ ಆಸೆಯಂತೂ ಖಂಡಿತ ಇದೆ. ನನಗೆ ಪಾತ್ರವಷ್ಟೇ ಮುಖ್ಯ. ನನಗೆ ನನ್ನ ಸಾಮರ್ಥ್ಯ ಹಾಗೂ ವೀಕ್‌ ನೆಸ್‌ ಎರಡೂ ಗೊತ್ತಿದೆ. ಪಾತ್ರ ನನಗೆ ಸೂಟ್‌ ಆದರೆ ಮಾಡುತ್ತೇನೆ. ಕೆಲವು ಸಿನಿಮಾಗಳನ್ನು ಕಥೆ ಹೇಳುವಾಗಲೇ ಓಪನ್‌ ಆಗಿ “ನಾನ್‌ ಮಾಡೋಕ್ಕೆ ಆಗಲ್ಲ’ ಅಂಥ ಹೇಳಿದ್ದು ಇದೆ. ಸದ್ಯಕ್ಕೆ ಒಂದಷ್ಟು ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ. ಒಂದೆರಡು ಮೈನ್‌ ಲೀಡ್‌ ಕಾಮಿಡಿ ಸಿನಿಮಾಗಳ ಆಫ‌ರ್ ಬಂದರೂ, ಸದ್ಯಕ್ಕೆ ಬೇಡ ಅಂತ ನಾನೇ ಒಪ್ಪಲಿಲ್ಲ. ಡೇಟ್‌ ಕ್ಲಾಶ್‌ ಆದ ಕಾರಣ ಕೆಲವು ಸಿನಿಮಾಗಳನ್ನು ಮಾಡಲಾಗಲಿಲ್ಲ. ಮುಂದೇನಾದ್ರೂ ಆ ಥರದ ಅವಕಾಶ ಬಂದ್ರೆ ನೋಡೋಣ…’ ಎಂದು ಮುಗುಳು ನಗೆ ಬೀರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next