Advertisement

ಧರೆಗುರುಳಲಿವೆ ದುಪ್ಪಟ್ಟು ಮರ!

01:03 PM Dec 03, 2017 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತ ಯೋಜನೆಯಲ್ಲಿ ಬರುವ ಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಾಣದ ವೇಳೆ ನಿರೀಕ್ಷೆಗಿಂತಲೂ ಎರಡು ಪಟ್ಟು ಮರಗಳು ಧರೆಗುರುಳಲಿವೆ! 21.25 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಮೆಟ್ರೋ ಯೋಜನೆಗಾಗಿ ಈ ಮೊದಲು 690 ಮರಗಳನ್ನು ತೆರವುಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ಈಗ ಅದನ್ನು 1,192ಕ್ಕೆ ಹೆಚ್ಚಿಸಲಾಗಿದೆ.

Advertisement

ಹಾಗೂ ಈ ಮರಗಳನ್ನು ಕಡಿಯುವುದು ಅನಿವಾರ್ಯ ಎಂದು ತಿಳಿಸಿದೆ. ಇದರಿಂದ ಉದ್ದೇಶಿತ ಮಾರ್ಗದಲ್ಲಿ ಮರಗಳ ಹನನ ಸಂಖ್ಯೆ ದುಪ್ಪಟ್ಟಾಗಲಿದೆ. 
ಒಟ್ಟಾರೆ ಈ ಮಾರ್ಗದ ಯೋಜನೆಯಿಂದಾಗಿ 1,312 ಮರಗಳಿಗೆ ಧಕ್ಕೆ ಆಗಲಿದೆ. ಈ ಪೈಕಿ 1,192 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಇದು ಇಡೀ ಯೋಜನೆಯಲ್ಲಿ ಅತಿ ಹೆಚ್ಚು ಮರಗಳು ಬಲಿಯಾಗಲಿರುವ ಮಾರ್ಗ ಇದಾಗಲಿದೆ. 

ಮೇನಲ್ಲಿ 690; ಆಗಸ್ಟ್‌ನಲ್ಲಿ 1,192!: ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಲ್‌) ಸಿದ್ಧಪಡಿಸಿ, 2017ರ ಮೇನಲ್ಲಿ ಸಲ್ಲಿಸಿದ್ದ 426 ಪುಟಗಳ “ಪರಿಸರ ಪರಿಣಾಮ ನಿರ್ಧರಣಾ ಅಧ್ಯಯನ’ ಕುರಿತ ಅಂತಿಮ ವರದಿಯಲ್ಲಿ ಗೊಟ್ಟಿಗೆರೆ-ನಾಗವಾರ ನಡುವೆ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಎತ್ತರಿಸಿದ ಮಾರ್ಗದ ಕಾಮಗಾರಿಗೆ 438 ಹಾಗೂ ಸುರಂಗ ಮಾರ್ಗದ ಕಾಮಗಾರಿಗೆ 252 ಮರಗಳನ್ನು ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿತ್ತು.

ಆದರೆ ಈಚೆಗೆ ಅಂತಹದ್ದೇ ಮತ್ತೂಂದು ವರದಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಬಿಎಂಆರ್‌ಸಿಎಲ್‌, ಎತ್ತರಿಸಿದ ಮೆಟ್ರೋ ಕಾಮಗಾರಿಗೆ 877 ಮತ್ತು ಸುರಂಗ ಕಾಮಗಾರಿಗೆ 315 ಹಾಗೂ ಡಿಪೋ ನಿರ್ಮಾಣಕ್ಕಾಗಿ 120 ಮರಗಳು ಕಾಮಗಾರಿ ಮಾರ್ಗದಲ್ಲಿ ಬರಲಿದ್ದು, ಈ ಪೈಕಿ 1,192 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ತಿಳಿಸಿದೆ. 

ಸ್ಥಳಾಂತರ ಕುರಿತು ಚರ್ಚೆ: ಬಲಿಯಾಗಲಿರುವ ಮರಗಳ ಸಂಖ್ಯೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ಪ್ರಯತ್ನ ನಡೆದಿದೆ. ಈಗ ಗುರುತಿಸಿರುವ ಪೈಕಿ ಕೆಲವು ಮರಗಳನ್ನು ಸ್ಥಳಾಂತರಿಸಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಸ್ಥಳೀಯ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದೂ ವರದಿಯಲ್ಲಿ ತಿಳಿಸಿದೆ. ಆದರೆ, ಮರಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಇದುವರೆಗೆ ಬಿಎಂಆರ್‌ಸಿ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಮೂಲಗಳು ತಿಳಿಸಿವೆ. ಈ ಹಿಂದೆ ಕೂಡ ಬಿಎಂಆರ್‌ಸಿ ಬೆರಳೆಣಿಕೆಯಷ್ಟು ಮರಗಳ ಸ್ಥಳಾಂತರ ಪ್ರಯತ್ನ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. 

Advertisement

ಗುರುತಿಸಿರುವ ಮರಗಳಲ್ಲಿ ಬಹುತೇಕ ನಿಲ್ದಾಣ ಮತ್ತು ಡಿಪೋ ನಿರ್ಮಾಣಕ್ಕಾಗಿಯೇ ತೆರವುಗೊಳ್ಳಲಿವೆ. ಅದರಲ್ಲೂ ಕೊತ್ತನೂರು ಬಳಿ 33 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಿಪೋಗಾಗಿ ಸುಮಾರು 120 ಮರಗಳನ್ನು ಕಡಿಯಬೇಕಾಗುತ್ತದೆ. ಉಳಿದಂತೆ ಮಾರ್ಗದುದ್ದಕ್ಕೂ ಬರುವ ಮರಗಳನ್ನು ತೆರವುಗೊಳಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಉದ್ದೇಶಿತ ಕಾರಿಡಾರ್‌ನಲ್ಲಿ 7 ಕಿ.ಮೀ. ಎತ್ತರಿಸಿದ ಮತ್ತು 13.8 ಕಿ.ಮೀ. ಸುರಂಗ ಮಾರ್ಗ ಬರುತ್ತದೆ. ಈ ಪೈಕಿ ಎತ್ತರಿಸಿದ ಮಾರ್ಗದ ಮಧ್ಯದಿಂದ ಎರಡೂ ಕಡೆ 19 ಮೀ. ಅಗಲ ಮತ್ತು 140 ಮೀ. ಎತ್ತರದಲ್ಲಿ ಹಾಗೂ ಸುರಂಗ ಮಾರ್ಗದ ಮಧ್ಯದಿಂದ 20 ಮೀ. ಅಗಲ ಮತ್ತು 200 ಮೀ. ಎತ್ತರದಲ್ಲಿ ಬರುವ ಮರಗಳನ್ನು ಗುರುತಿಸಿ, ತೆರವುಗೊಳಿಸಲಾಗುತ್ತಿದೆ ಎಂದೂ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next