Advertisement

ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ! ಉದ್ಯಮಿ, ರಾಜಕಾರಣಿಗಳು ಸೇರಿ 100ಕ್ಕೂ ಅಧಿಕ ಮಂದಿ ಬಂಧನ

11:29 AM Nov 16, 2020 | sudhir |

ಧಾರವಾಡ: ದೀಪಾವಳಿ ಹಬ್ಬದ ಪ್ರಯುಕ್ತ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಬಿಜೆಪಿ -ಕಾಂಗ್ರೆಸ್‌ ಮುಖಂಡರು ಸೇರಿ ಸುಮಾರು ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿ, 55 ಲಕ್ಷಕ್ಕೂ ಅಧಿಕ ಮೊತ್ತದ ನಗದು ವಶಪಡಿಸಿಕೊಂಡ ಘಟನೆ ರವಿವಾರ ನಡೆದಿದೆ.

Advertisement

ಬೆಳಗಿನ ಜಾವ ಎಸ್‌ಪಿ ಕೃಷ್ಣಕಾಂತ ನೇತೃತ್ವದ ತಂಡ ರಮ್ಯ ರೆಸಿಡೆನ್ಸಿ ಹಾಗೂ ಪ್ರೀತಿ ಲಾಡ್ಜ್ ಮೇಲೆ ದಾಳಿ ನಡೆಸಿದೆ. ಈ ಪೈಕಿ ರಮ್ಯ ರೆಸಿಡೆನ್ಸಿಯಲ್ಲಿ 50-60 ಜನರನ್ನು ಬಂಧಿಸಿ 49 ಲಕ್ಷ ನಗದು ವಶಪಡಿಸಿಕೊಂಡಿದ್ದು, ಪ್ರೀತಿ ಲಾಡ್ಜ್ ನಲ್ಲಿ 60-70 ಜನರನ್ನು ಬಂಧಿಸಿ ಸುಮಾರು 8 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ರಾಘವೇಂದ್ರ ಸುಹಾಸ ಖಚಿತಪಡಿಸಿದ್ದಾರೆ.

ಲಾಡ್ಜ್ ಕೊಠಡಿಗಳಲ್ಲಿ ಅಂದರ್‌- ಬಾಹರ್‌, ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ ಕಾಂಗ್ರೆಸ್‌-ಬಿಜೆಪಿಯ ಕೆಲ ಮುಖಂಡರು, ಹೋಟೆಲ್‌ ಉದ್ಯಮಿಗಳು ದಾಳಿ ವೇಳೆ ಸಿಕ್ಕಿ ಬಿದ್ದಿದ್ದು, 34 ವಿವಿಧ ವಾಹನಗಳು, 66 ಮೊಬೈಲ್‌ಗ‌ಳನ್ನೂ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಕೇಂದ್ರದ ಮಾರ್ಗಸೂಚಿ ಆಧರಿಸಿ ಕಂಬಳ ಆಯೋಜನೆಗೆ ನಿರ್ಧಾರ

ನಾಲ್ವರು ಪೊಲೀಸರ ಅಮಾನತು: ಬಿಜೆಪಿ ಮುಖಂಡನ ಜತೆಗೆ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ ಪೊಲೀಸರನ್ನು ಎಸ್‌ಪಿ ಕೃಷ್ಣಕಾಂತ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ. ಮುಮ್ಮಿಗಟ್ಟಿ ಬಳಿಯ ಹೋಟೆಲ್‌ನಲ್ಲಿ ಜೂಜಾಟ ಆಡುತ್ತಿದ್ದಾಗ ಡಿವೈಎಸ್ಪಿ ರವಿ ನಾಯಕ ನೇತೃತ್ವದಲ್ಲಿ ದಾಳಿ ನಡೆದಿತ್ತು. ಜೂಜಾಟ ನಿರತ ಹತ್ತು ಜನರ ಪೈಕಿ ಗರಗ ಠಾಣೆಯ ಮಂಜುನಾಥ ನಾಗಾವಿ, ಆತ್ಮಾನಂದ ಬೆಟಗೇರಿ, ಗ್ರಾಮೀಣ ಠಾಣೆಯ ಇಸ್ಮಾಯಿಲ್‌ ಸಯ್ಯದನವರ್‌ ಹಾಗೂ ಸಶಸ್ತ್ರ ಪಡೆಯ ಮೈಯುದ್ದೀನ ಮುಲ್ಲಾ ಕೂಡ ಸೇರಿದ್ದು, ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ.

Advertisement

45 ಜನ ಅಂದರ್‌-95 ಸಾವಿರ ರೂ. ಬಾಹರ್‌!
ಹುಬ್ಬಳ್ಳಿ: ಹಳೇಹುಬ್ಬಳ್ಳಿ, ಅಶೋಕನಗರ, ಬೆಂಡಿಗೇರಿ ಹಾಗೂ ಕಸಬಾಪೇಟೆ ಠಾಣೆ ವ್ಯಾಪ್ತಿಗಳಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಜೂಜಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ ಒಟ್ಟು 45 ಜನರನ್ನು ಬಂಧಿಸಿ, 95,550 ನಗದು, 6 ಮೊಬೈಲ್‌ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಹಳೇಹುಬ್ಬಳ್ಳಿ ಅರವಿಂದನಗರದ ಭೈರನಾಥ ಕಲ್ಯಾಣ ಮಂಟಪ ಬಳಿ ರವಿವಾರ ಜೂಜಾಡುತ್ತಿದ್ದಾಗ ಹಳೇಹುಬ್ಬಳ್ಳಿ ಪೊಲೀಸರು ದಾಳಿ ಮಾಡಿ 17ಜನರನ್ನು ಬಂಧಿಸಿ, 10,500 ನಗದು ವಶಪಡಿಸಿಕೊಂಡಿದ್ದಾರೆ. ಮಯೂರ ಬಡಾವಣೆ ಬಳಿಯ ಇಂದಿರಾನಗರ ದ್ಯಾಮವ್ವನ ಗುಡಿ ಹತ್ತಿರ ಜೂಜಾಡುತ್ತಿದ್ದವರ ಮೇಲೆ ಅಶೋಕನಗರ ಪೊಲೀಸರು ದಾಳಿ ಮಾಡಿ 6 ಜನರನ್ನು ಬಂಧಿಸಿ 15,790 ನಗದು, 6 ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಬೆಂಡಿಗೇರಿ ಪೊಲೀಸರು ಮಂಟೂರ ರಸ್ತೆ ಕೃಪಾನಗರ ಬಳಿಯ ಸ್ಮಶಾನದಲ್ಲಿ ಜೂಜಾಡುತ್ತಿದ್ದ ಎಂಟು ಜನರನ್ನು ಬಂಧಿಸಿ 24,340 ನಗದು ಹಾಗೂ ನಗರ ಹೊರವಲಯದ ಹೊಸ ಗಬ್ಬೂರನಲ್ಲಿ ಹೊಲದಲ್ಲಿ ಜೂಜಾಡುತ್ತಿದ್ದ ಐದು ಜನರನ್ನು ಬಂಧಿಸಿ 17,490ರೂ. ನಗದು ವಶಪಡಿಸಿಕೊಂಡಿದ್ದಾರೆ. ಕಸಬಾಪೇಟೆ ಪೊಲೀಸರು ಹಳೇಹುಬ್ಬಳ್ಳಿ ಸಿದ್ಧಾರ್ಥ ಕಾಲೋನಿ ಯಲ್ಲಿ ಜೂಜಾಡುತ್ತಿದ್ದ 9 ಜನರನ್ನು ಬಂಧಿಸಿ 27,430 ರೂ. ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next