ಧಾರವಾಡ: ಇಲ್ಲಿಯ ತೋಟಗಾರಿಕೆ ಕಚೇರಿ ಆವರಣದಲ್ಲಿ ಮೇ 25ರಿಂದ ಹಮ್ಮಿಕೊಂಡಿದ್ದ ಮಾವು ಮೇಳಕ್ಕೆ ಬುಧವಾರ ಅದ್ದೂರೆ ತೆರೆ ಬಿದ್ದಿದೆ.
ಐದು ದಿನಗಳ ಕಾಲ ನಡೆದ ಮೇಳದಲ್ಲಿ 60ಕ್ಕೂ ಹೆಚ್ಚು ಮಾವು ಬೆಳಗಾರರು ಪಾಲ್ಗೊಂಡು 1.43 ಕೋಟಿ ರೂ.ಗಳಷ್ಟು ಹಣ್ಣು ಮಾರಾಟ ಮಾಡಿದ್ದು, ಮಾವು ಪ್ರಿಯ ಗ್ರಾಹಕರಿಂದ ಈ ಸಲದ ಮೇಳಕ್ಕೆ ಉತ್ತಮ ಸ್ಪಂದನೆ ಲಭಿಸಿದಂತಾಗಿದೆ.
ಮೊದಲ ದಿನ ಮೊದಲ ದಿನ-2180, 2ನೇ ದಿನ-4021, 3ನೇ ದಿನ-3892, 4ನೇ ದಿನ 3697 ಹಾಗೂ ಮೇಳದ ಕೊನೆಯ ದಿನವಾಗಿದ್ದ ಬುಧವಾರ 2150 ಡಜನ್ ಹಣ್ಣು ಮಾರಾಟ ಆಗಿದೆ. ಈ ಮೂಲಕ ಐದು ದಿನದಲ್ಲಿ ಒಟ್ಟು 15,940 ಡಜನ್ ಹಣ್ಣು ಮಾರಾಟ ಆಗಿ 1.43 ಕೋಟಿ ರೂ.ಗಳ ವಹಿವಾಟು ಆಗಿದೆ. ಇದಷ್ಟೆ ಅಲ್ಲದೇ ಮೇಳದ ಸಸ್ಯ ಸಂತೆಯಲ್ಲೂ 22 ಸಾವಿರ ರೂ.ಗಳ ಸಸಿಗಳೂ ಸಹ ಮಾರಾಟವಾಗಿವೆ.
ಮ್ಯಾಂಗೋ ಟ್ಯೂರಿಸಂ: ಮಾವು ಮೇಳ ಮುಕ್ತಾಯ ಆಗುತ್ತಿದ್ದಂತೆಯೇ ಒಂದು ದಿನದ ಮಟ್ಟಿಗೆಯಾದರೂ ಮ್ಯಾಂಗೋ ಟ್ಯೂರಿಸಂ ಮಾಡಲು ತೋಟಗಾರಿಕೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಅದಕ್ಕಾಗಿ ಜಿಲ್ಲೆಯ ದುಮ್ಮವಾಡದ ಗಂಗಮ್ಮ ಹುಬ್ಬಳ್ಳಿ, ಹೆಗ್ಗೇರಿಯ ಮಹಾವೀರ ದಾನಣ್ಣವರ ಹಾಗೂ ವೆಂಕಟಾಪೂರದ ಮಹೇಶ ತೇಲಿ ಅವರ ತೋಟಗಳನ್ನು ಮ್ಯಾಂಗೋ ಟ್ಯೂರಿಸಂಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಒಂದು ದಿನದ ಈ ಮ್ಯಾಂಗೋ ಟ್ಯೂರಿಸಂನಲ್ಲಿ ಮಾವು ತೋಟಗಳಲ್ಲಿ ಗ್ರಾಹಕರು ನೇರವಾಗಿ ಮರಗಳಿಂದಲೇ ಮಾವು ಪಡೆದುಕೊಳ್ಳಬಹುದಾಗಿದೆ. 25 ಗ್ರಾಹಕರ ಅಗತ್ಯವಿದ್ದು, ಮೇ 31ರೊಳಗೆ ಈ ಟ್ಯೂರಿಸಂ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ಮಡಿವಾಳ ‘ಉದಯವಾಣಿ’ಗೆ ತಿಳಿಸಿದ್ದಾರೆ.