Advertisement

ಫ‌ಲ ನೀಡಿದ ಜಾಗೃತಿ ಕಾರ್ಯ; ಮತದಾನದಲ್ಲಿ ಶೇ.4 ನೆಗೆತ

02:59 PM Apr 24, 2019 | Team Udayavani |

ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ಮತ ಪ್ರಮಾಣ ಹೆಚ್ಚಾಗಬೇಕೆಂಬ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾ ವಿಭಾಗ ಹಾಗೂ ಸ್ವೀಪ್‌ ಸಮಿತಿ ಕೈಗೊಂಡ ಜಾಗೃತಿ ಕಾರ್ಯ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಫ‌ಲ ನೀಡಿದ್ದು, 2014ಕ್ಕೆ ಹೋಲಿಸಿದರೆ ಶೇ.4.06 ಮತ ಪ್ರಮಾಣ ಹೆಚ್ಚಳದ ಸಾಧನೆಯಾಗಿದೆ.

Advertisement

2014ರ ಲೋಕಸಭೆ ಚುನಾವಣೆಯಲ್ಲಿ ಶೇ. 65.98 ಮತದಾನವಾತ್ತು. 2019ರಲ್ಲಿ ಶೇ.70.04 ಮತದಾನವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮತದಾನಕ್ಕೆ ಜನರು ಅಷ್ಟೊಂದು ಆಸಕ್ತಿ ತೋರುವುದಿಲ್ಲ ಎಂಬ ಅಭಿಪ್ರಾಯದ ನಡುವೆಯೂ ಜಿಲ್ಲಾಡಳಿತದ ಕ್ರಮದಿಂದಾಗಿ ಮತದಾನ ಉತ್ತಮ ನೆಗೆತ ಕಂಡಿದೆ.

ಮತ ಪ್ರಮಾಣ ಹೆಚ್ಚಳ ಮಾಡಲೇಕೆಂಬ ಜಿದ್ದಿಗೆ ಬಿದ್ದಂತೆ ಜಿಲ್ಲಾಧಿಕಾರಿ ದೀಪಾ ಚೋಳನ್‌ ನೇತೃತ್ವದ ಜಿಲ್ಲಾ ಚುನಾವಣೆ ವಿಭಾಗ ಹಾಗೂ ಸ್ವೀಪ್‌ ಸಮಿತಿ ಜಿಲ್ಲೆಯಾದ್ಯಂತ ಕೈಗೊಂಡ ವಿವಿಧ ರೀತಿಯ ಜಾಗೃತಿ ಯತ್ನಗಳಿಗೆ ಮತದಾರ ಪ್ರಭು ಸ್ಪಂದಿಸಿದಂತೆ ಕಾಣುತ್ತಿದೆ. ಗ್ರಾಮೀಣದಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಸುಶಿಕ್ಷಿತರು ಹೆಚ್ಚಿರುವ ನಗರ ಪ್ರದೇಶದ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಗ್ರಾಮೀಣಕ್ಕೆ ಹೋಲಿಸಿದರೆ ಕಡಿಮೆ.

ವಿವಿಧ ರೀತಿಯ ಯತ್ನ: ಮತ ಪ್ರಮಾಣ ಹೆಚ್ಚಳ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ವಿಶೇಷ ಆಸಕ್ತಿ ಹೊಂದಿದ್ದರಲ್ಲದೆ, ಸವಾಲು ರೂಪದಲ್ಲಿ ಸ್ವೀಕರಿಸಿದ್ದರು. ಹಿಂದಿನ ಹಲವು ಚುನಾವಣೆಗಳಲ್ಲಿ ಸತತವಾಗಿ ಎಲ್ಲಿ ಮತ ಪ್ರಮಾಣ ಕಡಿಮೆ ಆಗಿದೆಯೋ ಅಂತಹ ಪ್ರದೇಶಗಳನ್ನು ಪಟ್ಟಿ ಮಾಡಿ, ಅಲ್ಲಿ ಮತ ಜಾಗೃತಿಗೆ ಒತ್ತು ನೀಡಲಾಗಿತ್ತು.

ಜಿಲ್ಲೆಯಾದ್ಯಂತ ಬೀದಿನಾಟಕ, ಪ್ಯಾರಾಗ್ಲೈಡಿಂಗ್‌, ಗಾಳಿಪಟ ಉತ್ಸವ, ರಂಗೋಲಿ, ಮೆಹಂದಿ ಸ್ಪರ್ಧೆ, ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಹೂವಿನಿಂದ ಮಾದರಿ ತಯಾರಿ, ಬೈಕ್‌ರ್ಯಾಲಿ, ಜಾನಪದ ತಂಡಗಳಿಂದ ಜಾಗೃತಿ, ವೀಡಿಯೋ ಕ್ಲಿಪಿಂಗ್‌, ಸಹಿ ಅಭಿಯಾನ, ಮೊದಲ ಬಾರಿ ಮತದಾರರಿಗೆ ಸೆಲ್ಫಿ ಅಭಿಯಾನ, ಚಿತ್ರಕಲಾ ಪ್ರದರ್ಶನ, ಅಂಗವಿಕಲರ ಅನುಕೂಲಕ್ಕೆ ಪ್ರತಿ ಮತಕೇಂದ್ರಕ್ಕೆ ವ್ಹೀಲ್ಚೇರ್‌, ವ್ಯಂಗ್ಯ ಚಿತ್ರ ಪ್ರದರ್ಶನ, ಅಂಗವಿಕಲರಿಗೆ ವಿಶೇಷ ಮತಕೇಂದ್ರ, ಸಖೀ ಕೇಂದ್ರ, ಮತಕೇಂದ್ರಕ್ಕೆ ತಾಯಿಯೊಂದಿಗೆ ಆಗಮಿಸುವ ಸಣ್ಣ ಮಕ್ಕಳಿಗೆ ಬಿಸ್ಕಿಟ್, ಚಾಕಲೇಟ್, ಕೆಲವೊಂದು ಕಡೆ ಮಹಿಳೆಯರಿಗೆ ಅರಿಶಿಣ-ಕುಂಕುಮ ನೀಡಿಕೆ, ಮರಳು ಕಲಾಕೃತಿ, ವಿದ್ಯಾರ್ಥಿ ಇನ್ನಿತರರಿಂದ ಜಾಗೃತಿ ರ್ಯಾಲಿ, ಯುವ ಸಮೂಹವನಜ್ನು ಆಕರ್ಷಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಕೈಗೊಳ್ಳಲಾಗಿತ್ತು.

Advertisement

ವಿವಿಧ ಮಾರಾಟ ಮಳಿಗೆ, ಹೋಟೆಲ್, ಮದ್ಯ ಮಾರಾಟ ಅಂಗಡಿಗಳು, ವಾಹನ ರಿಪೇರಿ ಇನ್ನಿತರರು ಮತದಾನ ಮಾಡಿ ಬಂದರೆ ಇಂತಿಷ್ಟು ರಿಯಾಯ್ತಿ ಎಂದು ಘೋಷಿಸಿದ್ದವು. ಮತದಾನ ಮಾಡದಿದ್ದರೆ ಅವಳಿನಗರದಲ್ಲಿನ ಉದ್ಯಾನವನಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಹೇಳಲಾಗಿತ್ತು. ಹೀಗೆ ಮತ ಜಾಗೃತಿ ನಿಟ್ಟಿನಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮಗಳಿಂದಾಗಿ ಮತದಾನ ಪ್ರಮಾಣ ಹೆಚ್ಚುತ್ತದೆಯೋ ಇಲ್ಲವೋ ಎಂಬ ಅನುಮಾನ, ಆತಂಕಕ್ಕೆ ಕೊನೆಗೂ ಮತದಾರ ಪ್ರಭು ಉತ್ತಮ ರೀತಿಯಲ್ಲಿಯೇ ಸ್ಪಂದಿಸಿದ್ದಾನೆ.

ಮತ ಪ್ರಮಾಣ ಹೆಚ್ಚಳ ಎಲ್ಲೆಲ್ಲಿ? ಎಷ್ಟೆಷ್ಟು?
ಲೋಕಸಭೆ ಚುನಾವಣೆ ಮತ ಪ್ರಮಾಣ ಹಲವು ವರ್ಷಗಳ ಇತಿಹಾಸ ನೋಡಿದರೆ ಅನೇಕ ಏರಿಳಿತ ಕಂಡಿದೆ. ಇದು ಕೇವಲ ಧಾರವಾಡ ಲೋಕಸಭೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ದೇಶವ್ಯಾಪಿ ಇದೇ ಸ್ಥಿತಿ ಇದೆ. ಧಾರವಾಡ ಕ್ಷೇತ್ರದಲ್ಲಿ 2009ರಲ್ಲಿ ಶೇ.56.55 ಮತದಾನವಾಗಿತ್ತು. 2014ರಲ್ಲಿ ಇದು ಶೇ.65.98ಕ್ಕೆ ಹೆಚ್ಚಳವಾಗಿತ್ತು. ಈ ಬಾರಿ ಶೇ.70.04ಕ್ಕೆ ಹೆಚ್ಚಳವಾಗಿದೆ. ಪ್ರಸಕ್ತ ನವಲಗುಂದ ವಿಧಾನಸಭೆ ಕ್ಷೇತ್ರದಲ್ಲಿ ಶೇ.71.48 ಮತದಾನವಾಗಿದೆ(2014ರಲ್ಲಿ ಶೇ.66.14). ಕುಂದಗೋಳ 73.08(67.14), ಧಾರವಾಡ ಶೇ.71.16(68.53), ಹುಬ್ಬಳ್ಳಿ-ಧಾರವಾಡ ಪೂರ್ವ 71.62(66.46), ಹು-ಧಾ ಕೇಂದ್ರ 64.62(61.25), ಹು-ಧಾ ಪಶ್ಚಿಮ ಶೇ.63.86(59.77), ಕಲಘಟಗಿ ಶೇ.75.98(ಶೇ.71.96), ಹಾವೇರಿ ಜಿಲ್ಲೆ ಶಿಗ್ಗಾವಿ ಶೇ.71.68(ಶೇ.70.43)ಮತದಾನವಾಗಿದೆ. 2014ರ ಚುನಾವಣೆಗೆ ಹೋಲಿಸಿದರೆ ಧಾರವಾಡ ಕ್ಷೇತ್ರ ವ್ಯಾಪ್ತಿಯ ಎಲ್ಲ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಮತ ಪ್ರಮಾಣ ಅಧಿಕವಾಗಿದೆ. 2014ರಲ್ಲಿ ಕಲಘಟಗಿ ವಿಧಾನಸಭೆ ಕ್ಷೇತ್ರ ಶೇ.71.96 ಮತದಾನದೊಂದಿಗೆ ಲೋಕಸಭೆ ಕ್ಷೇತ್ರದಲ್ಲೇ ಮೊದಲ ಸ್ಥಾನದಲ್ಲಿತ್ತು. ಈ ಬಾರಿಯೂ ಶೇ.75.98 ಮತದಾನದೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಕಳೆದ ಬಾರಿ ಶೇ.59.77 ಮತದಾನದೊಂದಿಗೆ ಕೊನೆ ಸ್ಥಾನದಲ್ಲಿದ್ದ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರ ಈ ಬಾರಿಯೂ ಶೇ.63.86 ಮತದಾನದೊಂದಿಗೆ ಕೊನೆ ಸ್ಥಾನದಲ್ಲಿಯೇ ಉಳಿದುಕೊಂಡಿದೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next