Advertisement

ಕೈ ಕಷ್ಟ ಕಷ್ಟ..ಕಮಲ ದುಸ್ತರ..

03:08 PM Apr 24, 2019 | Team Udayavani |

ಧಾರವಾಡ: ನಮ್ಮ ಪಕ್ಷವೇ ಗೆಲ್ಲೋದು ಎಂದು ಸವಾಲು ಹಾಕುತ್ತಿರುವ ಹಳ್ಳಿಗರು.. ಅದಕ್ಕೆ ಪ್ರತಿಯಾಗಿ ನಮ್ಮ ಅಭ್ಯರ್ಥಿಯೇ ಈ ಬಾರಿ ಜಯ ಗಳಿಸೋದು ಎಂದು ಪ್ರತಿಸವಾಲು ಎಸೆಯುತ್ತಿರುವ ಒಂದಿಷ್ಟು ಜನ.. ಚುನಾವಣೆ ಮುಗಿದ ನಂತರ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಪಕ್ಷಗಳ ಮತ್ತು ಅಭ್ಯರ್ಥಿಗಳ ಬಲಾಬಲದ ಚರ್ಚೆ ಜೋರಾಗಿ ನಡೆಯುತ್ತಿದೆ.

Advertisement

ಈ ಬಾರಿಯ ಚುನಾವಣೆ ಕಳೆದ ಬಾರಿಯಂತೆ ಉಳಿದಿಲ್ಲ. ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದ್ದರಿಂದ ಹಳ್ಳಿಗಳು, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಕೈ-ಕಮಲದ ಮಧ್ಯೆ ಜುಗಲ್ಬಂದಿ ನಡೆದಿದ್ದು, ಇಂತವರೇ ಗೆಲ್ಲುತ್ತಾರೆ ಎಂದು ಕಳೆದ ಬಾರಿಯಂತೆ ಸರಳವಾಗಿ ಹೇಳುವ ಸ್ಥಿತಿ ಇಲ್ಲ.

ಸತತ ಮೂರು ಬಾರಿ ಗೆದ್ದ ಜೋಶಿ ಅವರಿಗೆ ಈ ಬಾರಿ ಮೋದಿ ಅಲೆ ಕೈ ಹಿಡಿಯಬೇಕು. ಇಲ್ಲವಾದರೆ ಅವರ ಗೆಲುವು ಕಷ್ಟ ಎನ್ನಲಾಗುತ್ತಿದೆ. ಇನ್ನೊಂದೆಡೆ ಬಿಜೆಪಿಯಲ್ಲಿನ ಆಂತರಿಕ ಅಸಮಾಧಾನಗಳು ಚುನಾವಣೆಯಲ್ಲಿ ತೆರೆಯಲ್ಲಿಯೇ ಕೆಲಸ ಮಾಡಿವೆ ಎನ್ನುವ ಸತ್ಯ ಚುನಾವಣೆ ವೇಳೆ ಗೋಚರವಾಗಿದ್ದರಿಂದ ಸಹಜವಾಗಿಯೇ ಬಿಜೆಪಿ ಮುಖಂಡರಲ್ಲಿ ಕೊಂಚ ಗೊಂದಲ ಉಂಟಾಗಿದೆ. ಹೀಗಾಗಿ ಜೋಶಿ ಅವರ ಗೆಲುವು ಅಷ್ಟು ಸುಲಭವಲ್ಲ ಎನ್ನುತ್ತಿದೆ ಆಂತರಿಕ ಸಮೀಕ್ಷೆ. 2014ರ ಲೋಕಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಲೀಡ್‌ ಕೊಟ್ಟಿದ್ದ ಹು-ಧಾ ಕೇಂದ್ರ, ಕಲಘಟಗಿ ಕ್ಷೇತ್ರಗಳು ಈ ಬಾರಿ ಮೊದಲಿನಂತೆ ಉಳಿದಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಪ್ರಸ್ತುತ ಬಿಜೆಪಿ ಶಾಸಕರೇ ಇದ್ದರೂ ಕಾಂಗ್ರೆಸ್‌ ತಂತ್ರಗಾರಿಕೆ ಒಳಹೊಡೆತ ನೀಡಿದೆ ಎನ್ನಲಾಗುತ್ತಿದೆ. ಇನ್ನುಳಿದಂತೆ ಹು-ಧಾ ಪಶ್ಚಿಮ, ಕುಂದಗೋಳದಲ್ಲಿ ಬಿಜೆಪಿಗೆ ಈ ಬಾರಿಯೂ ಉತ್ತಮ ಸ್ಪಂದನೆ ಸಿಕ್ಕಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ನಗರದ ಕ್ಷೇತ್ರಗಳಲ್ಲಿ ಕಮಲ ಅರಳಿದರೆ ಮಾತ್ರ ಈ ಬಾರಿ ಬಿಜೆಪಿ ಗೆಲುವು ಸಾಧ್ಯ ಎಂದು ವಿಶ್ಲೇಷಿಸಲಾಗುತ್ತಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ವಿನಯ್‌ ಕುಲಕರ್ಣಿ ಈ ಬಾರಿ ತಮ್ಮ ಹಳೆಯ ತಪ್ಪುಗಳನ್ನು ತಿದ್ದುಕೊಂಡಿದ್ದು ಚುನಾವಣೆಯಲ್ಲಿ ಗೋಚರಿಸುತ್ತಿದೆ. ಆದರೆ ನಗರ ಪ್ರದೇಶದಲ್ಲಿ ಬಿಜೆಪಿ ಮತ ಸೆಳೆದರೆ ಮಾತ್ರ ವಿನಯ್‌ಗೆಲ್ಲುವ ಅವಕಾಶ ಉಂಟು.

ಕಾಂಗ್ರೆಸ್‌-ಜೆಡಿಎಸ್‌ ಗ್ರಾಮ, ಪಟ್ಟಣಗಳಲ್ಲಿ ಹೆಚ್ಚು ಸರ್ಕಸ್‌, ವರ್ಕ್‌ಔಟ್ ಮಾಡಿದ್ದು ಗೋಚರಿಸುತ್ತಿದೆ. ಧಾರವಾಡ ಗ್ರಾಮೀಣ, ಕಲಘಟಗಿ, ನವಲಗುಂದ ಕ್ಷೇತ್ರಗಳಲ್ಲಿ ಹೆಚ್ಚು ಮತಗಳನ್ನು ಪಡೆವ ಹುಮ್ಮಸ್ಸಿನಲ್ಲಿ ಕೈ ಪಡೆ ಇದ್ದು, ಅದಕ್ಕೆ ತಂತ್ರಗಾರಿಕೆಯನ್ನೂ ಮಾಡಿದೆ. ಅದು ಫಲ ಕೊಟ್ಟರೆ ಮಾತ್ರ ಕೈ ಮೇಲೇಳುವ ಸಾಧ್ಯತೆ ಉಂಟು. ಇನ್ನುಳಿದಂತೆ ಶಿಗ್ಗಾವಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಬಲದ ಕಾದಾಟ ನಡೆಯುವ ಸಾಧ್ಯತೆ ಇದೆ. ಇನ್ನು ಪಕ್ಕಾ ಜಾತಿ ಲೆಕ್ಕಾಚಾರದಲ್ಲಿ ಹೋಗುವುದಾದರೆ ಬಿಜೆಪಿಯ ಬೆನ್ನುಲುಬು ಲಿಂಗಾಯತರು. ಕಾಂಗ್ರೆಸ್‌ಗೆ ಅಹಿಂದ ಟ್ರಂಪ್‌ಕಾರ್ಡ್‌. ಇಬ್ಬರೂ ಸಮಬಲದಲ್ಲಿ ಕಾದಾಟ ನಡೆಸಿದ್ದು, ಕ್ಷೇತ್ರದಲ್ಲಿ ತಲಾ ಒಂದೊಂದು ಲಕ್ಷ ಇರುವ ಮರಾಠರು, ಕುರುಬರು, ರಡ್ಡಿ-ಎಸ್‌ಎಸ್‌ಕೆ ಸಮಾಜದ ಜನರು ಗೆಲುವು ನಿರ್ಧರಿಸುವಲ್ಲಿ ಪಾತ್ರ ವಹಿಸಲಿದ್ದಾರೆ.

Advertisement

ಮೋದಿ ನಂಬಿದ ಜೋಶಿ, ಜಾತಿ ನಂಬಿದ ಕುಲಕರ್ಣಿ
2014ರ ಲೋಕಸಭೆ ಚುನಾವಣೆಗೂ 2019ರ ಲೋಕಸಭೆ ಚುನಾವಣೆಗೂ ಸಾಕಷ್ಟು ವ್ಯತ್ಯಾಸಗಳಿದ್ದು ಇವು ಈ ಚುನಾವಣೆಯ ಫಲಿತಾಂಶದ ಮೇಲೆ ವಿಭಿನ್ನ ಪರಿಣಾಮ ಬೀರಬಹುದು. 2014ರಲ್ಲಿ ಮೋದಿ ಸುನಾಮಿ ಇತ್ತು. ಈ ಸುನಾಮಿಯಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗಿದ್ದು ಅಷ್ಟೇ ಸತ್ಯ. 2019ರ ಚುನಾವಣೆಯಲ್ಲೂ ಮೋದಿ ಅಲೆ ಇದೆ. ಆದರೆ ಕಳೆದ ಬಾರಿಯಷ್ಟಿಲ್ಲ. ಇನ್ನು ಜೋಶಿ ಅವರು ಸತತ ಮೂರು ಬಾರಿ ಗೆಲುವು ಸಾಧಿಸಿದರೂ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್‌ ತಕ್ಕಮಟ್ಟಿಗೆ ಮತದಾರರ ಎದುರು ಬಿಂಬಿಸಿದ್ದು ಕೂಡ ಜೋಶಿ ಅವರ ಹಿನ್ನಡೆಗೆ ಕಾರಣವಾಗಬಹುದು. ಈ ಬಾರಿ ಕಾಂಗ್ರೆಸ್‌ನ ವಿನಯ್‌ ಕುಲಕರ್ಣಿ ಜೋಶಿ ಅವರ ವಿರುದ್ಧ ಲಿಂಗಾಯತ ಜಾತಿ ಅಸ್ತ್ರ ಬಳಕೆ ಮಾಡಿದ್ದು, ಇದು ತಕ್ಕಮಟ್ಟಿಗೆ ಕೆಲಸ ಕೂಡ ಮಾಡಿದೆ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿರುವ 6.5 ಲಕ್ಷ ಲಿಂಗಾಯತರಲ್ಲಿ ಶೇ.30 ಜನ ಮತ ಹಾಕಿದರೂ ತಾವು ಗೆಲ್ಲಬಹುದು ಎನ್ನುವ ಲೆಕ್ಕಾಚಾರ ವಿನಯ್‌ ಅವರದ್ದು. ಒಟ್ಟಿನಲ್ಲಿ ಜೋಶಿ ಅವರು ಮೋದಿಯನ್ನು ನಂಬಿದ್ದರೆ ವಿನಯ್‌ ಅವರು ಲಿಂಗಾಯತರನ್ನ ನಂಬಿದ್ದಾರೆ. ಮತದಾರ ಯಾರ ಕೈ ಹಿಡಿದಿದ್ದಾನೆ ಎಂಬುದು ಗೊತ್ತಾಗಲು ಇನ್ನೂತಿಂಗಳು ಕಾಯಬೇಕಿದೆ.
ಜೋಶಿ ಗೆಲುವಿಗೆ ಶೆಟ್ಟರ್‌ ಕ್ಷೇತ್ರದ ಕೊಡುಗೆ

ಜೋಶಿ ಗೆಲುವಿಗೆ ಶೆಟ್ಟರ್‌ ಕ್ಷೇತ್ರದ ಕೊಡುಗೆ
ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಜೋಶಿ ಅವರಿಗೆ 2014ರ ಲೋಕಸಭೆ ಚುನಾವಣೆಯಲ್ಲಿ ಜಗದೀಶ ಶೆಟ್ಟರ ಪ್ರತಿನಿಧಿಸುವ ಹು-ಧಾ ಕೇಂದ್ರದಲ್ಲಿ ಅತೀ ಹೆಚ್ಚು 82,108 ಮತಗಳು ಸಿಕ್ಕು, 32,082 ಮತಗಳ ಮುನ್ನಡೆ ಸಿಕ್ಕಿತ್ತು. ಕಲಘಟಗಿ ಕ್ಷೇತ್ರದಲ್ಲಿ 71,448 ಮತಗಳು ಲಭಿಸಿದ್ದು, 26,248 ಮತಗಳ ಮುನ್ನಡೆ ಸಿಕ್ಕಿತ್ತು. ಇದೇ ಸಮಯಕ್ಕೆ ಸ್ವತಃ ವಿನಯ್‌ ಕುಲಕರ್ಣಿ ಶಾಸಕರಾಗಿರುವ ಧಾರವಾಡ-71 ಕ್ಷೇತ್ರದಲ್ಲಿ ಜೋಶಿ ಅವರಿಗೆ ತೀವ್ರ ಹಿನ್ನಡೆಯಾಗಿ 49,760 ಮತಗಳನ್ನು ಮಾತ್ರ ಪಡೆದುಕೊಂಡಿದ್ದರು. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 74,349 ಮತಗಳು ಲಭಿಸಿ, ಬಿಜೆಪಿ 24,589 ಮತಗಳ ಹಿನ್ನಡೆ ಕಂಡಿತ್ತು. ಹು-ಧಾ ಪಶ್ಚಿಮ 20 ಸಾವಿರ, ಶಿಗ್ಗಾವಿ 10 ಸಾವಿರ ಮತಗಳ ಮುನ್ನಡೆಯಲ್ಲಿ ಬಿಜೆಪಿ ಒಟ್ಟು 1.13 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು.
ಬಸವರಾಜ ಹೊಂಗಲ್
Advertisement

Udayavani is now on Telegram. Click here to join our channel and stay updated with the latest news.

Next