Advertisement

ಶಿಕ್ಷಣದಲ್ಲಿ ನೈತಿಕತೆ ಹೆಚ್ಚಲಿ: ಡಾ|ಗುರುರಾಜ ಕರ್ಜಗಿ

12:14 PM Mar 14, 2019 | |

ಧಾರವಾಡ: ಇಂದಿನ ವಿಜ್ಞಾನ, ತಂತ್ರಜ್ಞಾನದ ತೀವ್ರತರ ಬದಲಾವಣೆಯ ಕಾಲದಲ್ಲಿ ಶಿಕ್ಷಣದಲ್ಲಿ ನೈತಿಕತೆಯ ವಿಚಾರ ಹೆಚ್ಚು ಪ್ರಸ್ತುತವಾಗಿದೆ ಎಂದು ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.

Advertisement

ನಗರದ ಕವಿಸಂನಲ್ಲಿ ದಿ| ಎಸ್‌.ಜಿ. ನಾಡಗೀರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ “ಶಿಕ್ಷಣದಲ್ಲಿ ನೈತಿಕತೆ’ ವಿಷಯ ಕುರಿತು ಅವರು ಮಾತನಾಡಿದರು. ಶಿಕ್ಷಕ ವೃತ್ತಿ ಉದಾತ್ತ ಮಾನವೀಯ ಮೌಲ್ಯಗಳಿಂದ ಕೂಡಿದ್ದು, ವಿದ್ಯಾರ್ಥಿಗಳನ್ನು ತನ್ನ ಸ್ವಂತ ಮಕ್ಕಳಂತೆ ಪ್ರೀತಿಸುವ ನೈತಿಕತೆ ಅಗತ್ಯವಾಗಿದೆ. ಶಿಕ್ಷಕರಾದವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಳ್ಳೆಯ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು. ಸಮಾಜ ಅಪೇಕ್ಷಿಸುವ ರೀತಿಯಲ್ಲಿ ನೈತಿಕ ನೆಲೆಗಟ್ಟಿನ ಮೇಲೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಶಿಕ್ಷಕ ವೃತ್ತಿ ಜನಮಾನಸದಲ್ಲಿ ಗೌರವ ಸ್ಥಾನ ಹೊಂದಿದ್ದು, ಶಿಕ್ಷಕರಾದವರು ವೃತ್ತಿ ಧರ್ಮವನ್ನು ಕಾಪಾಡಿಕೊಳ್ಳಬೇಕು. ವೃತ್ತಿಯನ್ನು ಉತ್ತಮ ಪಡಿಸಿಕೊಳ್ಳಬೇಕೆಂಬ ರಚನಾತ್ಮಕ ಹಂಬಲ ಇಂದು ಅಗತ್ಯವಾಗಿದೆ. ಈ ದೇಶದ ಭವಿಷ್ಯವನ್ನು ಬದಲಿಸುವ ಶಕ್ತಿ ಶಿಕ್ಷಕರಲ್ಲಿ ಮಾತ್ರ ಇದೆ. ಶಿಕ್ಷಕರಾದವರಿಗೆ ಪಠ್ಯ-ಪುಸ್ತಕವೇ ಸರ್ವಸ್ವವಾಗಿರಬಾರದು. ಪಾಠ ಬೋಧಿಸುವಾಗ ಪ್ರತ್ಯಕ್ಷ-ಪರೋಕ್ಷವಾಗಿ ಹಾಗೂ
ಪ್ರಾಸಂಗಿಕವಾಗಿಯೂ ಪಠ್ಯ-ಪುಸ್ತಕ ಮೀರಿ ನೈತಿಕ ವಿಚಾರಗಳನ್ನು ಸಂದರ್ಭೋಚಿತವಾಗಿ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು. ಸತ್ಯ, ಶಾಂತಿ, ಅಹಿಂಸೆ, ಆತ್ಮ ಸಂಯಮದಂತಹ ಜೀವನ ಮೌಲ್ಯ ವಿದ್ಯಾರ್ಥಿಗಳಲ್ಲಿ ಬಿತ್ತಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹರ್ಷ ಡಂಬಳ ಮಾತನಾಡಿ, ಶಿಕ್ಷಣದಲ್ಲಿ ಸರ್ವಕಾಲಿಕ ಜೀವನ ಮೌಲ್ಯಗಳನ್ನು ಎಳೆಯರ ಹೃದಯದಲ್ಲಿ ಬಿತ್ತಬೇಕು. ಅಂದಾಗ ಮಾತ್ರ ಶಿಕ್ಷಣದಲ್ಲಿ ಒಳ್ಳೆಯ ಫಲ ಸಿಗಲು ಸಾಧ್ಯ ಎಂದು ತಿಳಿಸಿದರು.

ದಿ| ಎಸ್‌.ಜಿ. ನಾಡಗೀರ ಪೂಜ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ದತ್ತಿದಾನಿ ಅರಣ ಎಸ್‌. ನಾಡಗೀರ ಇದ್ದರು. ಪ್ರಕಾಶ ಎಸ್‌. ಉಡಿಕೇರಿ ಸ್ವಾಗತಿಸಿದರು. ಕೃಷ್ಣ ಜೋಶಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next