ಶಶಿಧರ್ ಬುದ್ನಿ
ಧಾರವಾಡ: ಹೊಸ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣಕ್ಕೆ ನೆಹರು ಮಾರುಕಟ್ಟೆಯಲ್ಲಿರುವ ಹೋಲ್ಸೆಲ್ ಕಾಯಿಪಲ್ಲೆ ಮಾರುಕಟ್ಟೆ ಸ್ಥಳಾಂತರ ಮಾಡಿಯೇ ತೀರಲು ಸಮಿತಿಯ ಆಡಳಿತ ಮಂಡಳಿ ಮುಂದಾಗಿದ್ದು, ಮೂಲಭೂತ ಸೌಲಭ್ಯ ಕಲ್ಪಿಸಲು ನಿರತವಾಗಿದೆ.
ಇದಾದ ಬಳಿಕವೂ ಕಾಯಿಪಲ್ಲೆ ವ್ಯಾಪಾರಸ್ಥರು ಸ್ಥಳಾಂತರಕ್ಕೆ ಹಿಂದೇಟು ಹಾಕಿದರೆ ಕಾನೂನು ಅನ್ವಯ ಆಡಳಿತ ಮಂಡಳಿಗೆ ಇರುವ ಅಸ್ತ್ರ ಪ್ರಯೋಗಿಸಲು ತಯಾರಿ ಮಾಡಿಕೊಳ್ಳಲಾಗಿದೆ.
ನೋಟಿಸ್ ಜಾರಿ: ಹೊಸ ಎಪಿಎಂಸಿಯಲ್ಲಿ 91 ನಿವೇಶನಗಳನ್ನು ಕಾಯಿಪಲ್ಲೆ ವ್ಯಾಪಾರಸ್ಥರಿಗೆ ನೀಡಲಾಗಿದ್ದು, ಈ ಪೈಕಿ 48 ವ್ಯಾಪಾರಸ್ಥರು ತಮ್ಮ ಮಳಿಗೆಗಳನ್ನು ಸಂಪೂರ್ಣ ನಿರ್ಮಿಸಿದ್ದಾರೆ. ಇನ್ನೂ 29 ಮಳಿಗೆಗಳ ಕಾರ್ಯ ಸಾಗಿದ್ದು, 10 ನಿವೇಶನಗಳು ಈವರೆಗೂ ಖಾಲಿ ಇವೆ. ಇನ್ನು ಇಲ್ಲಿ ನಿವೇಶನ ಪಡೆದ ವ್ಯಾಪಾರಸ್ಥರ ಪೈಕಿ ಆಡಳಿತ ಮಂಡಳಿ ನಿಯಮ ಮೀರಿದ ಕಾರಣ ನಾಲ್ವರ ಲೈಸಸ್ಸು ರದ್ದುಗೊಳಿಸಿದ್ದು, ಅವರ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆಡಳಿತ ಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ಸದ್ಯ ಎಪಿಎಂಸಿಯಲ್ಲಿ ನಿವೇಶನ ಪಡೆದು ಮಳಿಗೆ ಕಟ್ಟಿಕೊಳ್ಳದವರಿಗೆ ಹಾಗೂ ಕಟ್ಟಿಕೊಂಡರೂ ಸ್ಥಳಾಂತರ ಆಗದೇ ಉಳಿದವರಿಗೆ ಆಡಳಿತ ಮಂಡಳಿ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ. ಲೈಸನ್ಸ್ ರದ್ದುಗೊಳಿಸುವುದರ ಜತೆಗೆ ಕೊಟ್ಟಿರುವ ನಿವೇಶನ ಸಹ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿದೆ.
ಸೌಕರ್ಯ ಕಲ್ಪಿಸಲು ಕ್ರಮ: ವಿದ್ಯುತ್ ಸಂಪರ್ಕವಿಲ್ಲ. ಕುಡಿಯುವ ನೀರಿನ ಸೌಕರ್ಯ, ಶೌಚಾಲಯವಿಲ್ಲ. ಹೊಟೇಲ್ ಸಹ ಇಲ್ಲ ಎಂಬ ದೂರುಗಳನ್ನು ನೀಡಿ ಈವರೆಗೂ ವ್ಯಾಪಾರಸ್ಥರು ಸ್ಥಳಾಂತರಕ್ಕೆ ಹಿಂದೇಟು ಹಾಕಿದ್ದರು. ಆದರೀಗ ಈ ದೂರುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಭರದಿಂದ ಸಾಗಿದ್ದು, ಅದಕ್ಕೆ ಸಂಬಂಧಿಸಿದ ಉಪಕರಣಗಳು ಎಪಿಎಂಸಿ ಆವರಣಕ್ಕೆ ಬಂದಿಳಿದಿವೆ. ಸದ್ಯ ಕುಡಿಯುವ ನೀರು ಹಾಗೂ ಎರಡು ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೇ ಹೊಸದಾಗಿ ಮತಷ್ಟು ಶೌಚಾಲಯ ಕಟ್ಟಲು ಹಾಗೂ ಕ್ಯಾಂಟೀನ್ ಸೇವೆ ಆರಂಭಿಸಲು ಟೆಂಡರ್ ಕರೆಯಲಾಗಿದೆ. 20 ದಿನಗಳ ಒಳಗೆ ವಿದ್ಯುತ್ ಪೂರೈಕೆ ಕೆಲಸ ಸಂಪೂರ್ಣ ಆಗಲಿದ್ದು, ಇದರಿಂದ ಬಹುತೇಕ ಮೂಲಸೌಕರ್ಯಗಳು ಲಭ್ಯವಾದಂತೆ ಆಗಲಿದೆ.
ಹಗ್ಗ-ಜಗ್ಗಾಟ : ಮಾರ್ಚ್ ತಿಂಗಳ ಅಂತ್ಯದೊಳಗೆ ಸ್ಥಳಾಂತರ ಆಗುವಂತೆ ವ್ಯಾಪಾರಸ್ಥರಿಗೆ ಎಪಿಎಂಸಿಯಿಂದ ಗಡುವು ನೀಡಲಾಗಿತ್ತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸಮ್ಮುಖದಲ್ಲಿ ಚರ್ಚೆ ಕೈಗೊಂಡು ವ್ಯಾಪಾರಸ್ಥರ ಬೇಡಿಕೆಯನುಸಾರ ಅವಧಿ ವಿಸ್ತರಿಸಲಾಗಿತ್ತು. ನಂತರ ಜೂನ್ ತಿಂಗಳ ಅಂತ್ಯದೊಳಗೆ ಸ್ಥಳಾಂತರ ಆಗುವಂತೆ ಅಂತಿಮ ಗಡುವು ವಿಧಿಸಿ, ನೋಟಿಸ್ ಜಾರಿ ಮಾಡಲಾಗಿತ್ತು. ಇಷ್ಟರೊಳಗೆ ಕಾಯಿಪಲ್ಲೆ ವ್ಯಾಪಾರಸ್ಥರು ನ್ಯಾಯಾಲಯ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದು, ಮೂಲಸೌಕರ್ಯವಿಲ್ಲದೇ ನಾವು ಸ್ಥಳಾಂತರ ಆಗಲ್ಲ ಎಂಬುದಾಗಿ ಹೇಳಿದ್ದರು. ಇದಲ್ಲದೇ ಬಾಕಿ ಉಳಿದಿರುವ 30 ಜನರಿಗೂ ಜಾಗ ನೀಡುವಂತೆ ಒತ್ತಾಯಿಸಿದ್ದರು. ಆದರೆ ಈಗ ವ್ಯಾಪಾಸ್ಥರ ಬೇಡಿಕೆ ಅನುಸಾರ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಗಳು ಸಾಗಿದ್ದು, ಇದಾದ ಬಳಿಕವಾದರೂ ವ್ಯಾಪಾರಸ್ಥರು ಸ್ಥಳಾಂತರ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.