Advertisement

ಅರ್ಥಶಾಸ್ತ್ರ ವಿಷಯದಲ್ಲಿ ಹೊಸತನ ಅಗತ್ಯ 

05:26 PM Dec 12, 2018 | |

ಧಾರವಾಡ: ಇಂದಿನ ಉದ್ಯೋಗ ಮತ್ತು ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಅರ್ಥಶಾಸ್ತ್ರ ವಿಷಯದಲ್ಲಿ ಹೊಸತನ ತರಬೇಕಾಗಿದೆ ಎಂದು ಕವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಆರ್‌.ಆರ್‌. ಬಿರಾದಾರ ಹೇಳಿದರು.

Advertisement

ಕರ್ನಾಟಕ ಕಲಾ ಮಹಾವಿದ್ಯಾಲಯ ಮತ್ತು ಕವಿವಿ ವ್ಯಾಪ್ತಿಯ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಧ್ಯಾಪಕರ ಪರಿಷತ್ತು ಸಹಯೋಗದಲ್ಲಿ ಕಾಲೇಜಿನ ಬಿಬಿಎ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಹೊಸ ವಿಷಯಗಳ ಅಳವಡಿಕೆ ಸೇರಿದಂತೆ ಪಠ್ಯಕ್ರಮದಲ್ಲಿ ಹೊಸತನ ತರಬೇಕಾಗಿದೆ. ಜಾಗತಿಕರಣದ ಪ್ರಭಾವದಿಂದ ಮಾನವ ಸಂಪನ್ಮೂಲ ಬಲಪಡಿಸಲು ಅರ್ಥಶಾಸ್ತ್ರ ವಿಷಯ ಶಿಕ್ಷಣ ವ್ಯವಸ್ಥೆಯಲ್ಲಿ ಕಂಪ್ಯೂಟರ್‌ ತಂತ್ರಜ್ಞಾನ ಮತ್ತು ಸಂಖ್ಯಾಶಾಸ್ತ್ರ ವಿಷಯಗಳನ್ನು ಉದ್ಯೋಗದ ಬೇಡಿಕೆಯ ಅನುಗುಣವಾಗಿ ಮಾರ್ಪಾಡು ಮಾಡಬೇಕು ಎಂದರು.

ಪ್ರೊ| ಡಿ.ಎಂ. ನಂಜುಂಡಪ್ಪನರ ಹೆಸರಿನಲ್ಲಿ ಕವಿವಿಯಲ್ಲಿ ಒಂದು ಫೌಂಡೇಶನ್‌ ಸ್ಥಾಪಿಸಬೇಕು. ಅದರ ಮೂಲಕ ವಿವಿಧ ಕಾರ್ಯಕ್ರಮ ಆಯೋಜಿಸಿದರೆ ಅರ್ಥಶಾಸ್ತ್ರ ಬೆಳವಣಿಗೆಗೆ ಸಹಾಯಕವಾಗಲಿದೆ. ಈ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು. ಡಾ| ಕೆ.ಷಣ್ಮುಖಪ್ಪ ಮಾತನಾಡಿ, ಇಂದು ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆ ಆಗುತ್ತಿದ್ದು, ಆತಂಕದ ವಿಷಯವಾಗಿದೆ. ಅರ್ಥಶಾಸ್ತ್ರ ಪ್ರಾಧ್ಯಾಪಕರು ಇದನ್ನು ಉಳಿಸಲು-ಬೆಳೆಸಲು ಪಣ ತೊಡಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ಪ್ರೊ| ಕಾಮನಹಳ್ಳಿ ಮಾತನಾಡಿ, ಇಂದಿನ ಯುವ ಶಿಕ್ಷಕರು ಅರ್ಥಶಾಸ್ತ್ರ ವಿಷಯವನ್ನು ಉಳಿಸಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಬೇಕು. ವಿದ್ಯಾರ್ಥಿಗಳನ್ನು ಈ ವಿಷಯಕ್ಕೆ ಬರಲು ಹೆಚ್ಚು ಆಕರ್ಷಿತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು. ವಿವಿಧ ಕಾಲೇಜಿನ ನಿವೃತ್ತಿ ಹೊಂದಿದ ಪ್ರಾಧ್ಯಾಪಕರಾದ ಡಾ| ಬಿ.ಸಿ. ಜವಳಿ, ಪ್ರೊ| ಪಂಚಾಕ್ಷರಯ್ಯ ಮತ್ತು ಡಾ| ಬೆಟದೂರ ಅವರನ್ನು ಅರ್ಥಶಾಸ್ತ್ರ ಕಾಲೇಜು ಶಿಕ್ಷಕರ ಪರಿಷತ್ತಿನಿಂದ ಸನ್ಮಾನಿಸಲಾಯಿತು. ಡಾ| ಲಿಂಗರಾಜ ಅಂಗಡಿ ಮಾತನಾಡಿದರು. ಮುಂದಿನ ಎರಡು ವರ್ಷ ಅವಧಿಗೆ ಕವಿವಿ ವ್ಯಾಪ್ತಿಯ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಧ್ಯಾಪಕರ ಪರಿಷತ್ತಿಗೆ ಹೊಸ ಪದಾಧಿ ಕಾರಿಗಳನ್ನು ನೇಮಕ ಮಾಡಲಾಯಿತು. ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ| ಬಿ.ಎಫ್‌. ಚಾಕಲಬ್ಬಿ, ಕವಿವಿ ಕಾಲೇಜು ಶಿಕ್ಷಕ ಸಂಘಧ ಅಧ್ಯಕ್ಷ ಡಾ| ಬಸವರಾಜ ಬೆಳವಟಗಿ, ಡಾ| ಸಿ.ಎಚ್‌. ಪಾಟೀಲ, ಡಾ| ಶಾಂತಯ್ಯ ಡಾ| ಎನ್‌.ಸಿ. ಪಾಟೀಲ, ಡಾ| ಅನ್ನಪೂರ್ಣಾ ಎಸ್‌., ಪ್ರೊ| ರಮೇಶ ನಾಯ್ಕ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next