•ಬಸವರಾಜ ಹೊಂಗಲ್
ಧಾರವಾಡ: ಕಷ್ಟಪಟ್ಟು ಕಟ್ಟಿದ ಮನೆಗಳು ಕಣ್ಣೆದುರೇ ಬೀಳುತ್ತಿರುವುದನ್ನು ನೋಡಿ ಮಾಸದ ನೋವು, ಬಿತ್ತಿ ಬಂದ ಬೆಳೆ ಕೈಗೆ ಈ ವರ್ಷವಾದರೂ ಸಿಕ್ಕುತ್ತದೇ ಎನ್ನುವಷ್ಟರಲ್ಲಿ ಎಲ್ಲವೂ ನೀರುಪಾಲಾದ ಸಂಕಟ, ದೇವರ ಜಗುಲಿಯ ಎತ್ತರಕ್ಕೆ ಊರಿನ ಗಟಾರದ ನೀರು ಹರಿದು ಬಂದು ಮನೆಯಲ್ಲಿ ಚೆಲ್ಲಿರುವ ಊರಿನ ಹೊಲಸು, ಮಹಿಳೆಯರಿಗೆ ಮಳೆ ಎನ್ನುವ ಶಬ್ದ ಕೇಳದಷ್ಟು ಭಯ, ಮಕ್ಕಳ ತುಂಟಾಟ ಮರುದಿನವೇ ಕಾಯಿಲೆಗಳು, ಅಯ್ಯೋ ದೇವರೇ ಸಾಕು ಬಿಡಿಪ್ಪ ಮಳೆರಾಯ ಎನ್ನುತ್ತಿರುವ ಧಾರವಾಡ ಜಿಲ್ಲೆಯ ಜನ.
ಮೊನ್ನೆ ಮೊನ್ನೆ ವರೆಗೂ ತಮ್ಮೂರಿನ ಕೆರೆ, ಹಳ್ಳದಲ್ಲಿ ಸೊಗಸಾಗಿ ಮಳೆ ನೀರು ಹರಿದಿದ್ದು ನೋಡಿ ಸಂಭ್ರಮಿಸಿದ್ದ ಧಾರವಾಡ ಜಿಲ್ಲೆಯ ಜನರಿಗೆ ಕಳೆದ ವಾರ ಸುರಿದ ವಿಪರೀತ ಮಳೆ ತಂದೊಡ್ಡಿದ್ದ ಅವಾಂತರಗಳು ಒಂದೇ..ಎರಡೇ..? ಸದ್ಯಕ್ಕೆ ಇನ್ನೊಂದು ಬರಗಾಲ ಬೇಕಾದರೂ ಬರಲಿ, ಆದರೆ ಇಂತಹ ಮಳೆಯನ್ನು ಎಂದಿಗೂ ಕರುಣಿಸಬೇಡ ದೇವರೆ ಎನ್ನುತ್ತಿದ್ದಾರೆ ಜಿಲ್ಲೆಯ ಬೇಡ್ತಿ (ಡೋರಿ-ಬೆಣಚಿ, ಕರೆಮ್ಮನ ಹಳ್ಳ ), ತುಪರಿ, ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿ ಹೊರಬಂದವರು.
ಮಲೆನಾಡಿಗರ ಗುದ್ದಿದ ಮಳೆರಾಯ: ಜಿಲ್ಲೆಯ ಪಶ್ಚಿಮ ಭಾಗದ ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕುಗಳು ಅರೆಮಲೆನಾಡು ಪ್ರದೇಶಗಳಾಗಿದ್ದು ಪಶ್ಚಿಮಘಟ್ಟದ ಸೆರಗಿಗಂಟಿಕೊಂಡಿವೆ. ಈ ವರ್ಷದ ಆದರಿ ಮಳೆ (ಆಶ್ಲೇಷ) ಸುರಿದ ಪರಿಗೆ ಇಲ್ಲಿನ ಹಳ್ಳಕೊಳ್ಳಗಳು ಪ್ರವಾಹಕ್ಕೆ ಸಾಕ್ಷಿಯಾಗಿ ನಿಂತವು. ಕಳೆದ 50 ವರ್ಷಗಳಲ್ಲಿ ಇಷ್ಟು ಮಳೆ ಈ ಭಾಗದಲ್ಲಿ ಒಮ್ಮೆಯೂ ಸುರಿದಿಲ್ಲ. ಹೆಚ್ಚಾಗಿ ಧಾರವಾಡ ತಾಲೂಕಿನಲ್ಲಿಯೇ ಹುಟ್ಟಿಕೊಳ್ಳುವ ಬೇಡ್ತಿ, ತುಪರಿ ಹಳ್ಳಗಳು ಮಳೆಯ ರಭಸಕ್ಕೆ ನದಿಯಂತೆ ಹರಿದು ಎಲ್ಲೆಂದರಲ್ಲಿ ನುಗ್ಗಿ ಹಾನಿ ಮಾಡಿದವು.
ಬೇಡ್ತಿ ಹಳ್ಳ ಹುಟ್ಟುವುದು ಧಾರವಾಡ ಸಮೀಪದ ಮುಗದ ಕೆರೆಯ ಕೆಳಭಾಗದಿಂದ. ಇಲ್ಲಿಂದ ಶುರುವಾದ ಈ ಹಳ್ಳದ ಉಪಟಳಕ್ಕೆ ಮಲ್ಲೂರು, ಲಾಳಗಟ್ಟಿ,ದೇವಗಿರಿ, ದೇವರಹುಬ್ಬಳ್ಳಿ, ಮುರಕಟ್ಟಿ, ಅಂಬ್ಲಿಕೊಪ್ಪ, ಹಳ್ಳಿಗೇರಿ, ಬಸವನಕೊಪ್ಪ, ಜಮ್ಯಾಳ, ನೀರಸಾಗರ, ಜೋಡಳ್ಳಿ ಸೇರಿ 20ಕ್ಕೂ ಹೆಚ್ಚು ಹಳ್ಳಿಗಳ ವ್ಯಾಪ್ತಿಯಲ್ಲಿನ ಹಳ್ಳದ ಅಕ್ಕಪಕ್ಕದ ಭೂಮಿಯಲ್ಲಿ ಬೆಳೆನಾಶವಾಗಿದೆ. ಇಲ್ಲಿ ಯಾವುದೇ ಮನೆಗಳಿಗೆ ನೀರು ನುಗ್ಗಿಲ್ಲ. ಕಾರಣ ಈ ಹಳ್ಳದ ಅಕ್ಕಪಕ್ಕ ಮನೆಗಳಿಲ್ಲ.
ಇನ್ನು ಕಾಡಿನಲ್ಲಿ ಹಾಕಿದ್ದ ಸಣ್ಣ ಒಡ್ಡುಗಳು ಕಿತ್ತು ಹೋಗಿವೆ. ಆದರೆ ಪ್ರಾಣಿಗಳಿಗೆ ಯಾವುದೇ ನೀರಿನ ತೊಂದರೆ ಇಲ್ಲ. ಕಾರಣ ಕಾಡಿನ ಮಧ್ಯದ ಹಳ್ಳಗಳು ತುಂಬಿ ಹರಿಯುತ್ತಿದ್ದು, ಡಿಸೆಂಬರ್ ವರೆಗೂ ಇಲ್ಲಿ ಸೆಲೆ ಹರಿಯಲಿದ್ದು, ದೊಡ್ಡ ಕೆರೆಗಳು ಭರ್ತಿಯಾಗಿವೆ.