Advertisement

ಕ್ಯಾಂಪಸ್‌ ಸ್ವಚ್ಛತೆ ವಿದ್ಯಾರ್ಥಿಗಳ ಹೊಣೆ: ಪಾಪು

05:30 PM Oct 13, 2018 | Team Udayavani |

ಧಾರವಾಡ: ಸ್ವಚ್ಛ ಭಾರತ ಯೋಜನೆ ಮಹತ್ವಾಕಾಂಕ್ಷಿ ಯೋಜನೆ ಆಗಿದೆ. ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳನ್ನು ಸ್ವಚ್ಛವಾಗಿ ಇಡುವುದು ವಿದ್ಯಾರ್ಥಿಗಳ ಜವಾಬ್ದಾರಿ ಆಗಿದೆ. ಸ್ವತ್ಛತೆ ಕಡೆಗೆ ನಾವು ಹೆಚ್ಚು ಗಮನ ನೀಡಬೇಕಾಗಿದೆ ಎಂದು ಹಿರಿಯ ಪತ್ರಕರ್ತ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹೇಳಿದರು. ಕರ್ನಾಟಕ ವಿಶ್ವವಿದ್ಯಾಲಯದ ಎನ್ನೆಸ್ಸೆಸ್‌ ಕೋಶ ಮತ್ತು ರಾಜ್ಯ ಸರಕಾರದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ವಿವಿಯ ಮಾನಸೋಲ್ಲಾಸ ಸಭಾಂಗಣದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಯುವ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕರ್ನಾಟಕ ವಿಶ್ವವಿದ್ಯಾಲಯದ ಆವರಣವನ್ನು ಸ್ವಚ್ಛವಾಗಿ ಇಡಲು ಶಾಸಕರ ಅನುದಾನದಿಂದ 100 ಕಸದ ತೊಟ್ಟಿಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು. ದೇಶದಲ್ಲಿ ಎನ್ನೆಸ್ಸೆಸ್‌ ಒಂದು ಮಹತ್ವದ ಕಲ್ಪನೆ ಆಗಿದೆ. ಪಠ್ಯದ ಜೊತೆಗೆ ಸಮಾಜ ಸೇವೆಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಎನ್ನೆಸ್ಸೆಸ್‌ ಕಲಿಸುತ್ತದೆ. ಇಂತಹ ಯುವಜನೋತ್ಸವದಲ್ಲಿ ಅನೇಕ ಪ್ರದೇಶಗಳ ಸಂಸ್ಕೃತಿ ಸಮ್ಮಿಳತವಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದರು.

ರಾಜ್ಯ ಎನ್ನೆಸ್ಸೆಸ್‌ ಅಧಿಕಾರಿ ಪ್ರೊ| ಗಣನಾಥ ಶೆಟ್ಟಿ ಮಾತನಾಡಿ, ಕರ್ನಾಟಕ ಸರಕಾರವು ಎನ್ನೆಸ್ಸೆಸ್‌ ಅಡಿಯಲ್ಲಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮುಂಬರುವ ದಿನಗಳಲ್ಲಿ ಎಲ್ಲ ಪ್ರೌಢಶಾಲೆಗಳಲ್ಲಿ ಎನ್ನೆಸ್ಸೆಸ್‌ ಘಟಕಗಳನ್ನು ಪ್ರಾರಂಭಿಸುವ ಉದ್ದೇಶವಿದೆ ಎಂದರು. ಇಂದಿನ ಯುವ ಜನತೆಯು ಮೊಬೈಲ್‌ ಮತ್ತು ತಂತ್ರಜ್ಞಾನದ ದಾಸರಾಗಿದ್ದು, ಅವರಿಗೆ ವ್ಯಕ್ತಿತ್ವ ವಿಕಸನ, ಇತಿಹಾಸ ಮತ್ತು ನಮ್ಮ ಸಂಸ್ಕೃತಿಯನ್ನು ತಿಳಿಯಪಡಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಕವಿವಿ ಕುಲಸಚಿವ ಡಾ| ಕೆ.ಎಂ.ಹೊಸಮನಿ ಮಾತನಾಡಿ, ಒಂದು ದೇಶ ಅಭಿವೃದ್ಧಿ ಆಗಬೇಕಾದರೆ ಅಲ್ಲಿನ ಯುವಶಕ್ತಿ ಬಹಳ ಮುಖ್ಯ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಬಹಳ ಅವಶ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಮಾತನಾಡಿ, ಪ್ರತಿ 20 ಕಿಲೋ ಮೀಟರ್‌ ಅಂತರದಲ್ಲಿ ನಮ್ಮ ಭಾಷೆ ಮತ್ತು ಪ್ರತಿ 200 ಕಿಲೋ ಮೀಟರ್‌ ಅಂತರದಲ್ಲಿ ನಮ್ಮ ಆಹಾರದ ಅಭಿರುಚಿಗಳು ಭಿನ್ನವಾಗಿವೆ. ಯುವ ಜನೋತ್ಸವವನ್ನು ಆಯೋಜಿಸಲು ಅವಕಾಶ ನೀಡಿದ ರಾಜ್ಯ ಸರಕಾರಕ್ಕೆ ಧನ್ಯವಾದಗಳು ಎಂದರು.

ಕೊಡಗಿನ ನೈಸರ್ಗಿಕ ವಿಪತ್ತಿನ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಸ್ವಯಂ ಸೇವಕರಿಗೆ ಕ್ಲಾಸಿಕ್‌ ಸಂಸ್ಥೆಯಿಂದ ನೀಡಿದ ಟೀ-ಶರ್ಟ್‌ಗಳನ್ನು ವಿತರಿಸಲಾಯಿತು. ಡಾ| ಎಂ.ಬಿ. ದಳಪತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತಾನಡಿದರು. ಡಾ| ಆರ್‌.ಆರ್‌ ನಾಯಿಕ, ಕ್ಲಾಸಿಕ್‌ ಸಂಸ್ಥೆಯ ನಿರ್ದೇಶಕ ಲಕ್ಷ್ಮಣ ಉಪ್ಪಾರ ಇದ್ದರು. ರಾಜ್ಯದ ವಿವಿಧ ವಿಷಯಗಳ 27 ವಿಶ್ವವಿದ್ಯಾಲಯಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 30 ಕಾರ್ಯಕ್ರಮ ಅಧಿಕಾರಿಗಳು ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next