ಬಸವನಬಾಗೇವಾಡಿ: ಇಂಗಳೇಶ್ವರ ಗ್ರಾಮದ ಮಹಿಳೆಯರಿಗೆ ಬಯಲು ಶೌಚದ ಜಾಗೆಯಲ್ಲಿ ನಿರ್ಮಿಸುತ್ತಿರುವ ಅನಧಿಕೃತ ಕಟ್ಟಡ ತೆರವುಗೊಳಿಸುವುದು ಹಾಗೂ ಅಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸುವಂತೆ ಆಗ್ರಹಿಸಿ ಮಹಿಳೆಯರು ಗ್ರಾಪಂ ಕಚೇರಿ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಶುಕ್ರವಾರ 4ನೇ ದಿನ ಪೂರೈಸಿತು.
ಬಯಲು ಶೌಚದ ಜಾಗೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸುವಂತೆ ಆಗ್ರಹಿಸಿ ಮಹಿಳೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 4ನೇ ದಿನಕ್ಕೆ ಮುಂದುವರಿದಿದೆ. ಆದರೆ ಇಲ್ಲಿಯವರೆಗೂ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳದ ಕಾರಣ ಧರಣಿ ನಿರತ ಮಹಿಳೆಯರು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ನಿಂಗಮ್ಮ ಹೆಗಡಿಹಾಳ ಮತ್ತು ಮಾದೇವಿ ಡಿಗ್ಗಾವಿ ಇಬ್ಬರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿ ಮಾತನಾಡಿ, ನಾವು ನಡೆಸುತ್ತಿರುವ ಧರಣಿ ಯಾರ ವೈಯಕ್ತಿಕವೂ ಹಾಗೂ ವಿರುದ್ಧವಲ್ಲ. ಸರ್ಕಾರದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಸರ್ಕಾರದ ಬಯಲು ಜಾಗೆ ಇದ್ದರೂ ಅದಕ್ಕೆ ಕೆಲವೊಂದು ಪಟ್ಟಭದ್ರ ಹಿತಾಶಕ್ತಿಗಳು ಸ್ವಾರ್ಥಕ್ಕೋಸ್ಕರ ಹೋರಾಟ ಹತ್ತಿಕ್ಕುವ ಹುನ್ನಾರ ನಡೆಸಿವೆ. ಅಲ್ಲದೇ ಹೋರಾಟ ನಡೆಸದಂತೆ ಬೆದರಿಕೆ ಹಾಕುತ್ತಿದ್ದಾರೆ. ಧರಣಿಗೆ ಬರುವ ಮಹಿಳೆಯರನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಧರಣಿಯಲ್ಲಿ ಗೀತಾ ಸಜ್ಜನ, ಗಂಗಾಬಾಯಿ ಬಾಗೇವಾಡಿ, ಸಂಗಮ್ಮ ಪೂಜಾರಿ, ಮಲ್ಲಮ್ಮ ಬಾಗೇವಾಡಿ, ಸುನಂದಾ ಪಾಟೀಲ, ಸುಮಾ ಪೂಜಾರಿ, ಕಾಶೀಬಾಯಿ ಡೋಣೂರ, ಸರೋಜಿನಿ ರಜಪೂತ, ಈರಮ್ಮ ತುಬಾಕೆ, ಪಾರ್ವತಿ ತುಬಾಕಿ, ಬೋರಮ್ಮ ಪತಂಗಿ, ಕಲಾವತಿ ಹಿರೂರ, ಕಾಶೀಬಾಯಿ ಉಕ್ಕಲಿ, ರೇಣುಕಾ ತಾಳಿಕೋಟಿ, ಗಂಗೂ ಜುಮನಾಳ, ಜಯಶ್ರೀ ಜುಮನಾಳ, ದಾನಮ್ಮ ಬಿರಾದಾರ, ಚನ್ನಮ್ಮ ಹೂಗಾರ, ಸುನಂದಾ ಹಿರೂರ, ಶರಣಮ್ಮ ಮಂಟ್ಯಾಳ, ಕುಸಮಾ ಜುಮನಾಳ ಇತರರಿದ್ದರು.