ಮಡಿಕೇರಿ:ಮಡಿಕೇರಿ ನಗರಕ್ಕೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಮಡಿಕೇರಿ ರಕ್ಷಣಾ ವೇದಿಕ ಧರಣಿ ಸತ್ಯಾಗ್ರಹವನ್ನು ನಡೆಸಿತು. ನಗರಸಭಾ ಕಚೇರಿ ಎದುರು ಧರಣಿ ಕುಳಿಉಪ್ರತಿಭಟನಾಕಾರರು ಪೌರಾಯುಕ್ತರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ನಗರದ ಸ್ಟೋನ್‌ಹಿಲ್ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದು, ಇದರಿಂದ ಸುತ್ತಮುತ್ತಲ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ. ಇಷ್ಟು ವರ್ಷಗಳೇ ಕಳೆದರೂ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ರೂಪ ನೀಡಲು ಸಾಧ್ಯವಾಗಿಲ್ಲವೆಂದು ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿ ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಮಾತನಾಡಿ ಸ್ಟೋನ್‌ಹಿಲ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು. ಯುಜಿಡಿ ಹೆಸರಿನಲ್ಲಿ ನಡೆದ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಸುಮಾರು 45 ಕೋಟಿ ರೂ. ಮಣ್ಣುಪಾಲಾಗಿದೆ ಎಂದು ಆರೋಪಿಸಿದ ಅವರು ಯೋಜನೆಯ ಕುರಿತು ಸಿಬಿಐ ತನಿಖೆಯಾಗಬೇಕೆಂದು ಒತ್ತಾಯಿಸಿದರು.ರಕ್ಷಣಾ ವೇದಿಕೆಯ ಗೌರವ ಸಲಹೆಗಾರ ನಾಪಂಡ ಎಂ.ಮುತ್ತಪ್ಪ ಮಾತನಾಡಿ, ಜಿಲ್ಲಾಡಳಿತ ಮತ್ತು ನಗರಸಭೆ ಎಚ್ಚೆತ್ತುಕೊಂಡು ನಗರದ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಆಟೋ ಚಾಲಕ ಸುಲೈಮಾನ್ ಮಾತನಾಡಿ, ವಾಹನ ಚಾಲನೆ ಅಸಾಧ್ಯವಾಗಿದೆ. ಬೀದಿ ದೀಪಗಳು ಕಣ್ಣಾಮುಚ್ಚಾಲೆಯಾಡುತ್ತಿದ್ದು, ಪಾದಾಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಉಪಾಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಹರೀಶ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕರ್ಕೆರಾ, ಖಜಾಂಚಿ ಪಿ.ಉಮೇಶ್ ಕುಮಾರ್, ನಿರ್ದೇಶಕ ದಿನೇಶ್ ನಾಯರ್, ನೌಶದ್ ಜನ್ನತ್, ತೆನ್ನಿರ ಮೈನಾ, ಕವನ್, ಸತ್ಯ ಧರಣಿಯಲ್ಲಿ ಪಾಲ್ಗೊಂಡಿದ್ದರು.
“ತನಿಖೆಯಾಗಬೇಕು’
ಕುಡಿಯುವ ನೀರಿನ ಮೂಲವಾದ ಕೂಟುಹೊಳೆಯಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಸಿ ಶುದ್ಧ ನೀರನ್ನು ಸರಬರಾಜು ಮಾಡಬೇಕು, ಮೂರು ವರ್ಷಕ್ಕೂ ಅಧಿಕ ಕಾಲದಿಂದ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು, ಸಂಶಯಾಸ್ಪದ ಅಧಿಕಾರಿಗಳ ಆಸ್ತಿಯ ಬಗ್ಗೆ ತನಿಖೆಯಾಗಬೇಕು, ನಗರದಲ್ಲಿ ಭೀತಿ ಮೂಡಿಸಿರುವ ಬೀದಿ ನಾಯಿಗಳು ಹಾಗೂ ಜಾನುವಾರುಗಳನ್ನು ನಿಯಂತ್ರಿಸಬೇಕೆಂದು ಪವನ್ ಪೆಮ್ಮಯ್ಯ ಒತ್ತಾಯಿಸಿದರು. ಗರದ ರಸ್ತೆಗಳು ಸಂಪೂರ್ಣಹದಗೆಟ್ಟಿದ್ದು, ತಕ್ಷಣ ಡಾಂಬರೀಕರಣ ಕಾರ್ಯ ಕೈಗೊಳ್ಳಬೇಕೆಂದರು.