Advertisement

ಧಾರಾನಗರಿಯಲ್ಲಿ ರಂಗಿನಾಟ

02:54 PM Mar 14, 2017 | Team Udayavani |

ಧಾರವಾಡ: ಎಲ್ಲಿ ನೋಡಿದರಲ್ಲಿ ಬಣ್ಣ ಬಣ್ಣದ ಚಿತ್ತಾರ.. ಎಳೆಯರ-ಗೆಳೆಯರ ಕೂಗಾಟ..ಕೇಕೇ..ಹಲವು ವೇಷ- ಹಲಗೆಗಳ ಸದ್ದು..ಮೊಬೈಲ್‌ ಫೋನ್‌ಗಳ ಹಾಡುಗಳ ಸಾಂಗತ್ಯ..ಮನಸ್ಸು ಹಗುರಾಗಿಸಿಕೊಳ್ಳಲು ಅಲ್ಲಲ್ಲಿ  ನೃತ್ಯ..ಬಿರು ಬಿಸಿಲಲ್ಲೂ ರಸ್ತೆಗಿಳಿದ ಯುವಕರು, ಯುವತಿಯರು..! 

Advertisement

ಧಾರಾನಗರಿಯಲ್ಲಿ ಸೋಮವಾರ ಜನರು ಹೋಳಿ ಹುಣ್ಣಿಮೆ ಅಂಗವಾಗಿ ಬಣ್ಣದೋಕುಳಿಯನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ನಗರದ ಗಲ್ಲಿ ಗಲ್ಲಿಗಳಲ್ಲಿ ಬೆಳಗ್ಗೆಯಿಂದಲೇ ಆರಂಭಗೊಂಡ ಬಣ್ಣದೆರೆಚಾಟ ಸಂಜೆ 4 ಗಂಟೆವರೆಗೂ ಮುಂದುವರಿದಿತ್ತು. ಮಧ್ಯಾಹ್ನ 12ರ ಸಮಯಕ್ಕೆ ನಗರಸಂಪೂರ್ಣ ಬಣ್ಣಮಯವಾಗಿತ್ತು. ಇಡೀ ನಗರವೇ ರಂಗೆದ್ದು ಕುಣಿಯುತ್ತಿತ್ತು.

ಯುವಕರು ಗುಂಪು ಗುಂಪಾಗಿ ಬೈಕ್‌ಗಳ ಮೇಲೆ ಚೀರಾಡುತ್ತ, ಬಾಯಿ ಬಡೆದುಕೊಳ್ಳುತ್ತ ತಿರುಗಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಚಪ್ಪಾಳೆ, ಕರ್ಕಶ ಶಬ್ದ ಮಾಡುವ ಪೀಪಿಗಳನ್ನು ಊದುತ್ತ ಸಿಕ್ಕ ಸಿಕ್ಕವರಿಗೆಲ್ಲಾ ಬಣ್ಣ ಎರೆಚುತ್ತಾ ಹೋಗುತ್ತಿದ್ದ ಯುವಕರು  ಖಾಸಾ ಗೆಳೆಯರಿಗೆ ತಲೆಯ ಮೇಲೆ ಕೋಳಿ ಮೊಟ್ಟೆ ಒಡೆದು ಸಂಭ್ರಮಿಸಿದರು. 

ಎಲ್ಲೆಡೆ ಸೌಹಾರ್ದತೆ: ಹೋಳಿ ಹಬ್ಬವನ್ನು ನಗರದಲ್ಲಿ ಜಾತಿ, ಮತಗಳ ಬೇಧವಿಲ್ಲದೇ ಎಲ್ಲರೂ ಒಗ್ಗಟ್ಟಾಗಿ ಹರ್ಷದಿಂದ ಆಚರಿಸಿದರು. ಹಿರಿಯರು-ಕಿರಿಯರೆಂಬ ಭೇದವಿಲ್ಲದೇ ಅಬಾಲವೃದ್ಧರಾದಿಯಾಗಿ ಎಲ್ಲರೂ ಭಾಗವಹಿಸಿ ಖುಷಿಪಟ್ಟರು. ಮ್ಯಾದಾರ ಓಣಿ,ಬೂಸಪ್ಪ ಚೌಕ ಹಾಗೂ ಗಣೇಶ ನಗರದಲ್ಲಿ ಹಿಂದೂ-ಮುಸ್ಲಿಂ ಗೆಳೆಯರು ಒಗ್ಗಟ್ಟಿನಿಂದ ಹೋಳಿ ಹಬ್ಬ ಆಚರಿಸಿದ್ದು ವಿಶೇಷವಾಗಿತ್ತು.

ಬೆಳಿಗ್ಗೆಯಿಂದಲೇ ಯುವಕ-ಯುವತಿಯರು ಹಲಗೆ ಬಾರಿಸುತ್ತ ಅದಕ್ಕೆ ತಕ್ಕಂತೆ ನೃತ್ಯ ಮಾಡುತ್ತ ಸಾಗುತ್ತಿದ್ದ ದೃಶ್ಯಗಳು ಕಂಡು ಬಂದವು. ನಗರದ ಬೀದಿ, ಬಡಾವಣೆಗಳಲ್ಲಿ ಚಿಣ್ಣರು ಪಿಚಕಾರಿಯಲ್ಲಿ ಬಣ್ಣ ತುಂಬಿ ಆಡಿ ನಲಿದರು. ಬೈಕ್‌ ಮೊದಲಾದ ವಾಹನಗಳಲ್ಲಿ ತೆರಳುತ್ತಿದ್ದವರನ್ನು ನಿಲ್ಲಿಸಿ ಅವರ ಮುಖ ರಂಗೇರುವಂತೆ ಮಾಡಿದ ಘಟನೆಗಳೂ ಅಲ್ಲಲ್ಲಿ ನಡೆದವು.

Advertisement

ಸಂಗಮ ವೃತ್ತ ಸೇರಿದಂತೆಕೆಲವು ಕಡೆಗಳಲ್ಲಿ ನೀರಿನ ಕಾರಂಜಿಯಲ್ಲಿ ಸಾವಿರಾರು ಜನ ಮಿಂದೆದ್ದರು. ಕುಣಿದು ಕುಪ್ಪಳಿಸಿದರು. ಅಲ್ಲಲ್ಲಿ ಗರಡಿ ಒಡೆಯುವ ಸ್ಪರ್ಧೆಗಳು ಜರುಗಿದವು. ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಮನ್ಮಥ ಮೂರ್ತಿಗಳಿಗೆ ಅಗ್ನಿ ಸ್ಪರ್ಶ ಮಾಡಿ ನಮ್ಮಲ್ಲಿರುವ ದುರ್ಗುಣಗಳು ನಿರ್ಮೂಲನೆವಾಗಲಿ, ದುಷ್ಟ ಶಕ್ತಿಗಳ ಸಂಹಾರವಾಗಲಿ ಎಂದು ಪ್ರಾರ್ಥಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next