ಧಾರವಾಡ: ಕಳೆದ ಎರಡು ದಿನಗಳಿಂದ ಬರೀ ಮಿಂಚು, ಗಾಳಿಯೊಂದಿಗೆ ಸದ್ದು ಮಾಡುತ್ತಿದ್ದ ಮಳೆರಾಯ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿಸಿದ್ದು, ತಂಪಾದ ವಾತಾವರಣ ಉಂಟಾಗಿದೆ. ರಾತ್ರಿ 8 ಗಂಟೆಗೆ ಭಾರೀ ಪ್ರಮಾಣದಲ್ಲಿ ಗುಡುಗು, ಮಿಂಚು, ಸಿಡಿಲಿನ ಅಬ್ಬರೊಂದಿಗೆ ಆರಂಭಗೊಂಡ ಮಳೆ, ಸುಮಾರು ಅರ್ಧ ತಾಸಿಗೂ ಹೆಚ್ಚು ಸಮಯ ಧಾರಾಕಾರವಾಗಿ ಸುರಿಯಿತು. ಇದರಿಂದ ಬಿಸಿಲು ಹಾಗೂ ಸೆಕೆಯಿಂದ ಕೆಂಗೆಟ್ಟಿದ್ದ ಧಾರಾನಗರಿ ಜನತೆಗೆ ತಂಪಿನ ಮುದ ನೀಡಿದರೆ, ನಗರದ ಗಟಾರುಗಳು ಮಳೆ ನೀರಿನಿಂದ ಸ್ವಚ್ಛಗೊಂಡವು. ಇದಲ್ಲದೇ ರಸ್ತೆಯ ತುಂಬೆಲ್ಲ ನೀರು ತುಂಬಿದ್ದರಿಂದ ಟೋಲನಾಕಾ ಬಳಿ ಕೆಲ ಹೊತ್ತು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
Advertisement
ಅಣ್ಣಿಗೇರಿಯಲ್ಲಿ ಭಾರೀ ಗಾಳಿ: ಗುರುವಾರ ಸಂಜೆ ಸುಮಾರು 20 ನಿಮಿಷಕ್ಕೂ ಹೆಚ್ಚು ಬೀಸಿದ ಬಿರುಗಾಳಿಗೆ ಪಟ್ಟಣದ ಜನ ಅಕ್ಷರಶಃ ಭಯಭೀತರಾಗಿದ್ದರು. ನೂರಾರು ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದವು. ವಿದ್ಯುತ್ ಕಂಬಗಳು ನೆಲ ಕಚ್ಚಿದವು. ವಾಹನಗಳ ಚಾಲನೆ ಮಾಡಲಾಗದೆ ಸವಾರರು ಪರದಾಡುವಂತಾಗಿತ್ತು. ಬಿರುಗಾಳಿ ನಿಂತ ನಂತರ ತಣ್ಣನೆಯ ಸಿಳ್ಳು ಗಾಳಿ ಬೀಸತೊಡಗಿತು. ರಾತ್ರಿಯಿಡೀ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿದ್ದು, ಶುಕ್ರವಾರ ಮಧ್ಯಾಹ್ನ 2 ಗಂಟೆ ನಂತರವೇ ಪುನರಾರಂಭಿಸುವ ಸಾಧ್ಯತೆ ಇದೆ.