Advertisement

ಧರ್ಮಸ್ಥಳ: ಮಹಾಶಿವರಾತ್ರಿಗೆ ಶಿರಾಡಿ ಘಾಟಿ ಮೂಲಕ ಪಾದಯಾತ್ರಿಗಳ ಆಗಮನ

11:42 AM Mar 07, 2024 | Team Udayavani |

ಬೆಳ್ತಂಗಡಿ: ಮಹಾ ಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರಿಗಳ ದಂಡು ಬರಲಾರಂಭಿಸಿದೆ. ಬೆಂಗಳೂರು, ತುಮಕೂರು, ಹಾಸನ, ರಾಮನಗರ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ನೂರಾರು ತಂಡಗಳಲ್ಲಿ ಸಹಸ್ರಾರು ಪಾದಯಾತ್ರಿಗಳು ಚಾರ್ಮಾಡಿ ಘಾಟಿ ಮೂಲಕ ಆಗಮಿಸಿ ಧರ್ಮಸ್ಥಳದತ್ತ ಸಾಗುತ್ತಿದ್ದಾರೆ.

Advertisement

ಶಿರಾಡಿ ಘಾಟಿ ಮೂಲಕ ಆಗಮಿಸುತ್ತಿರುವ ತಂಡಗಳು ಕೊಕ್ಕಡದಿಂದ ಧರ್ಮ ಸ್ಥಳಕ್ಕೆ ಪಾದಯಾತ್ರೆ ನಡೆಸುತ್ತಿವೆ. ಚಾರ್ಮಾಡಿ ಮೂಲಕ ಆಗಮಿಸುತ್ತಿರುವ ಪಾದಯಾತ್ರಿಗಳು ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೈಶ್ವರ ದೇವಸ್ಥಾನ, ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ಹಾಗೂ ರಸ್ತೆ ಬದಿ ಅಲ್ಲಲ್ಲಿ ಟೆಂಟ್‌ ನಿರ್ಮಿಸಿ ಆಹಾರ ತಯಾರಿ ನಡೆಸಿ, ವಿಶ್ರಾಂತಿ ಪಡೆದು ಮೃತ್ಯುಂಜಯ ನದಿಯಲ್ಲಿ ಸ್ನಾನ ಮಾಡಿ ಧರ್ಮಸ್ಥಳಕ್ಕೆ ಕಲ್ಮಂಜ ಹಾಗೂ ಉಜಿರೆ ಮೂಲಕ ಹೆಜ್ಜೆ ಹಾಕುತ್ತಿದ್ದಾರೆ.

ಪಾದಯಾತ್ರಿಗಳ ಅನುಕೂಲಕ್ಕಾಗಿ ಅಲ್ಲಲ್ಲಿ ಶಾಮಿಯಾನ ಅಳವಡಿಸಿ ನೀರು, ಶರಬತ್ತು, ಪಾನಕ ಕಲ್ಲಂಗಡಿ, ಫಲಾಹಾರ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಸ್ಥಳೀಯ ಸಾರ್ವಜನಿಕರು, ಸಂಘ ಸಂಸ್ಥೆಗಳು ಕೈಗೊಂಡಿವೆ.

ಭಜನ ಕಾರ್ಯಕ್ರಮ
ಶಿವ ಪಂಚಾಕ್ಷರಿ ಜಪ, ಭಜನೆ ಹೇಳುತ್ತಾ ಸಾಗುವ ಪಾದಯಾತ್ರಿಗಳು ಅಲ್ಲಲ್ಲಿ ವಿಶ್ರಾಂತಿ ಪಡೆಯುವಾಗ, ಆಹಾರ ಸಿದ್ಧತೆ
ಸಮಯದಲ್ಲಿ ಭಜನೆಗಳನ್ನು ಹಾಡುತ್ತಾರೆ. ಹಲವು ಕಡೆ ಸ್ಥಳೀಯ ಭಜನೆ ತಂಡಗಳು ಇವರಿಗೆ ಸಾಥ್‌ ನೀಡಿ ಭಜನೆ ಕಾರ್ಯಕ್ರಮ
ದಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವು ಗ್ರಾಮಗಳ ಗ್ರಾಮಸ್ಥರು ಧರ್ಮಸ್ಥಳ ಸೇರಿದಂತೆ ತಾಲೂಕಿನ ದೇವಸ್ಥಾನಗಳಿಗೆ ಶುಕ್ರವಾರ
ಪಾದಯಾತ್ರೆ ನಡೆಸಲು ನಿರ್ಣಯಿಸಿದ್ದಾರೆ.

ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ
ಮಹಾಶಿವರಾತ್ರಿಯಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಾಡಿನಾದ್ಯಂತ ಭಕ್ತರು ಆಗಮಿಸಲಿದ್ದು, ಅಂದು ದೇಗುಲದ ಮುಂಭಾಗ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಶಿವಪಂಚಾಕ್ಷರಿ ಪಠಣೆಗೆ ಚಾಲನೆ ನೀಡುವರು. ಬಳಿಕ ಅಹೋರಾತ್ರಿ ಶಿವನಾಮಸ್ಮರಣೆ ನಡೆಯಲಿದೆ.

Advertisement

ದೇಗುಲವನ್ನು ಅಲಂಕರಿಸಲಾಗುವುದು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ಮಂಜುಳೇಶ ದೇವರ ಸನ್ನಿಧಿಯಲ್ಲಿ, ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ, ಕನ್ಯಾಡಿ ಶ್ರೀ ಲೋಕನಾಡು ಲೋಕನಾಥೇಶ್ವರ ದೇವಸ್ಥಾನ, ಚಾರ್ಮಾಡಿ ಮತ್ತೂರು ಶ್ರೀ
ಪಂಚಲಿಂಗೈಶ್ವರ ದೇವಸ್ಥಾನ, ಕೂಡಬೆಟ್ಟು ಸದಾಶಿವ ದೇವಸ್ಥಾನ, ನೆರಿಯ ಆಪ್ಪಿಲ ಶ್ರೀ ಉಮಾ ಪಂಚಲಿಂಗೈಶ್ವರ ದೇವಸ್ಥಾನ,
ಬೆಳಾಲು ಶ್ರೀ ಉಮಾಮಹೇಶ್ವರ ದೇವಸ್ಥಾನ,ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನ, ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ಶಿವ ದೇವಸ್ಥಾನಗಳಲ್ಲಿ ಶುಕ್ರವಾರ ಭಜನೆ ವಿಶೇಷ ಪೂಜೆ, ರುದ್ರಾಭಿಷೇಕ ಬಿಲ್ವಾರ್ಚನೆ, ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ಅರಣ್ಯ ಇಲಾಖೆ ಸ್ಟಾಲ್‌
ದ.ಕ. ಜಿಲ್ಲೆಯ ಅರಣ್ಯ ಇಲಾಖೆಯು ತನ್ನ 15 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಪಾದಯಾತ್ರಿಗಳ ಅನುಕೂಲಕ್ಕಾಗಿ ಅಲ್ಲಲ್ಲಿ ಸ್ಟಾಲ್‌ ಗಳನ್ನು ನಿರ್ಮಿಸಿ ನೀರು ಸಹಿತ ಅಗತ್ಯ ವ್ಯವಸ್ಥೆ,ಮಾಹಿತಿ,ವಿವರ ನೀಡುವ ಕಾರ್ಯ ಕೈಗೊಂಡಿದೆ.

ಇದು ಮುಂದಿನ ಮೂರು ದಿನ ನಡೆಯಲಿದೆ. ಇಲಾಖೆ ಸಿಬಂದಿ ಜತೆ ಸಮಾಜ ಸೇವಕರು ಸಹಕರಿಸಿ ಸ್ವತ್ಛತೆ ಬಗ್ಗೆಯೂ ಜಾಗೃತೆ
ಮೂಡಿಸುತ್ತಿದ್ದಾರೆ. ಉಳಿದ ಸ್ಥಳಗಳಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಕಸದ ಬುಟ್ಟಿಗಳನ್ನು ಅಳವಡಿಸಲಾಗಿದೆ. ಉಜಿರೆ
ಎಸ್‌.ಡಿ.ಎಂ. ಆಸ್ಪತ್ರೆಯ ವತಿಯಿಂದ ಉಚಿತ ವೈದ್ಯಕೀಯ ಸೇವೆ ನೀಡುತ್ತಿದ್ದು ಅಗತ್ಯ ಸಂದರ್ಭಕ್ಕೆ ಆ್ಯಂಬುಲೆನ್ಸ್‌ ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next