‘ನನ್ನ ಕುಟುಂಬಕ್ಕೆ ತುಂಬಾ ಥ್ಯಾಂಕ್ಸ್ ಹೇಳ್ತೀನಿ. ಯಾಕೆಂದರೆ, ನಾನು ನಾಯಕಿ ಆಗೋಕೆ ಅವಕಾಶ ಕೊಟ್ಟು, ಪ್ರೋತ್ಸಾಹಿಸಿ ನನ್ನ ಕನಸು ನನಸು ಮಾಡುತ್ತಿದ್ದಾರೆ. ಅಂಥಾ ಫ್ಯಾಮಿಲಿ ಪಡೆದ ನಾನೇ ಧನ್ಯಾ. ನಾನು ಚಿಕ್ಕವಳಿದ್ದಾಗ ನಮ್ ತಾತನ ಮನೆಯಲ್ಲಿ ಒಂದು ಡಿಸ್ಕಷನ್ ಹಾಲ್ ಅಂತ ಇತ್ತು. ಅಲ್ಲಿ ಏನ್ ನಡೆಯೋದಂದ್ರೆ, ನಮ್ ತಾತ, ನಮ್ ತಾತನ ತಮ್ಮ ನಿರ್ದೇಶಕರ ಜೊತೆ ಕೂತ್ಕೊಂಡು ಕಥೆಗಳನ್ನು ಕೇಳುತ್ತಾ ಡಿಸ್ಕಸ್ ಮಾಡೋರು. ಮನೆತುಂಬ ನಾವೆಲ್ಲ ಒಂದಷ್ಟು ಚಿಕ್ಕಮಕ್ಕಳಿದ್ದೆವು. ಕಥೆ ಡಿಸ್ಕಷನ್ ಸಮಯದಲ್ಲಿ ಜೋರಾಗಿ ಓಡಾಡ್ಕೊಂಡು, ಕಿರುಚಾಡ್ಕೊಂಡು, ಜಗಳ ಮಾಡ್ಕೊಂಡು, ಗದ್ದಲ ಮಾಡ್ತಾ ಇದ್ವಿ. ಆಗ ತಾತ ಬಂದು, ‘ಎಲ್ಲಾ ಆಚೆ ಬಂದ್ಬಿಡಿ. ಹಿಂಗೆಲ್ಲಾ ಮಾಡಬಾರದು. ಒಳಗೆ ಏನ್ ನಡೆಯುತ್ತಿದೆ ಗೊತ್ತಾ? ಡಿಸ್ಕಷನ್ ನಡೀತಾ ಇದೆ’ ಅನ್ನೋರು. ಆಗ ನಮಗೆಲ್ಲ ಆ ಡಿಸ್ಕಷನ್ ಅಂದ್ರೆ, ಅದೊಂದು ದೊಡ್ಡ ಪದ. ಡಿಸ್ಕಷನ್ ನಡೆಯಬೇಕಾದರೆ, ನಮಗೆಲ್ಲಾ ಸುಮ್ಮನೆ ಇರಬೇಕು ಅಂತ ಹೇಳ್ಳೋರು. ಅದು ಚಿಕ್ಕಂದಿನ ನೆನಪು ಈಗಲೂ ಮಾಸಿಲ್ಲ.
ಈಗ ನಾನೇ ಡಿಸ್ಕಷನ್‌ನಲ್ಲಿ ಕೂತ್‌ಬಿಟ್ಟು, ನನ್ನ ಚಿತ್ರಕ್ಕೆ ಡಿಸ್ಕಸ್ ಮಾಡ್ತೀನಿ ಅಂದರೆ, ನಿಜಕ್ಕೂ ಇದಕ್ಕಿಂತ ಖುಷಿಯ ವಿಷಯ ಬೇರೊಂದಿಲ್ಲ. ಅಲ್ಲಿಂದ ಇಲ್ಲಿತನಕ ಬಂದಿದ್ದೇನೆ. ಇಷ್ಟಕ್ಕೆಲ್ಲಾ ಕಾರಣ, ನನ್ನ ಫ್ಯಾಮಿಲಿ. ಅವರ ಸಪೋರ್ಟ್ ಇರದಿದ್ದರೆ, ಸಾಧ್ಯವಾಗುತ್ತಿರಲಿಲ್ಲ. ನನ್ನೆಲ್ಲಾ ಕನಸು ನನಸು ಮಾಡುತ್ತಿದ್ದಾರೆ. ಅವರಿಗೆ ಥ್ಯಾಂಕ್ಸ್’ ಎನ್ನುತ್ತಾರೆ ಧನ್ಯಾ ರಾಮ್‌ಕುಮಾರ್.
Advertisement
ತಮ್ಮ ಮೊದಲ ಚಿತ್ರ ‘ನಿನ್ನ ಸನಿಹಕೆ’ ಕುರಿತು ಹೇಳಿಕೊಳ್ಳುವ ಧನ್ಯಾ, ‘ಒಳ್ಳೆಯ ಸಿನಿಮಾ ಮೂಲಕವೇ ನಾನು ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದೇನೆ ಎಂಬ ಖುಷಿ ಇದೆ. ನಿರ್ದೇಶಕ ಸುಮನ್ ಜಾದೂಗರ್ ಬಗ್ಗೆ ಹೇಳಲೇಬೇಕು. ಅವರು ನನ್ನ ಫೋಟೋ ನೋಡಿದಾಕ್ಷಣ, ಈ ಚಿತ್ರದ ಪಾತ್ರಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಾರೆ ಅಂತ ನಿರ್ಧರಿಸಿ, ಆಯ್ಕೆ ಮಾಡಿದ್ದಾರೆ. ಇನ್ನು, ಇಡೀ ಚಿತ್ರತಂಡ ನನ್ನ ಮೇಲೆ ನಂಬಿಕೆ ಇಟ್ಟು, ಪಾತ್ರ ನಿರ್ವಹಿಸಬಲ್ಲಳು ಎಂದು ಅವಕಾಶ ಕೊಟ್ಟಿದೆ. ಇದು ನನ್ನ ಮೊದಲ ಸಿನಿಮಾ. ನನ್ನ ಕನಸು ಕೂಡ. ಹಾಗೆಯೇ, ಇಲ್ಲಿ ಡ್ರೀಮ್ ಟೀಮ್ ಕೂಡ ಇದೆ. ಹಾಗಾಗಿ ಹೊಸತನಕ್ಕೆ ಇಲ್ಲಿ ಕೊರತೆ ಇರಲ್ಲ. ಸೂರಜ್ ಗೌಡ ಬಗ್ಗೆ ಹೇಳಲೇಬೇಕು. ಅವರು ನನ್ನ ಮೊದಲ ಕೋ ಸ್ಟಾರ್. ತುಂಬಾನೇ ಕಂಫರ್ಟ್ ಫೀಲ್ ಮಾಡಿಸಿದ್ದಾರೆ. ಸಾಕಷ್ಟು ಸಲಹೆ ಕೊಟ್ಟಿದ್ದಾರೆ. ನಾನು ಹೊಸಬಳು ಎಂಬ ಫೀಲ್ ಮಾಡಿಸಿಲ್ಲ. ಈಗಷ್ಟೇ ನನ್ನ ಹೊಸ ಜರ್ನಿ ಶುರುವಾಗುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಈ ಧನ್ಯಾ ಮೇಲಿರಲಿ’ ಎಂಬುದು ಧನ್ಯಾ ಮಾತು.
‘ನಿನ್ನ ಸನಿಹಕೆ’ ಚಿತ್ರದ ಫಸ್ಟ್‌ಲುಕ್ ಹಾಗು ಶೀರ್ಷಿಕೆಯನ್ನು ಹಿರಿಯ ನಿರ್ಮಾಪಕ ಎಸ್.ಎ.ಗೋವಿಂದರಾಜು, ಪೂರ್ಣಿಮಾ ರಾಮ್‌ಕುಮಾರ್ ಅವರು ಜೊತೆಗೂಡಿ ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭಕೋರಿದರು. ನಿರ್ದೇಶಕ ಸುಮನ್ ಜಾದೂಗರ್ ಅವರಿಗೆ ಇದು ಮೊದಲ ಚಿತ್ರ. ಕಳೆದ ಹದಿನೆಂಟು ವರ್ಷಗಳಿಂದಲೂ ಸಿನಿಮಾರಂಗದಲ್ಲಿ ಬರಹಗಾರರಾಗಿ, ಕೋ- ಡೈರೆಕ್ಟರ್ ಆಗಿ ಆ್ಯಕ್ಟೀವ್ ಆಗಿದ್ದಾರೆ ಸುಮನ್. ಅಂದು ತುಂಬಾ ಖುಷಿಯ ಮೂಡ್‌ನಲ್ಲಿದ್ದ ಸುಮನ್, ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಹೇಳಿದ್ದು ಹೀಗೆ. ‘ಒಬ್ಬ ಹೊಸ ನಿರ್ದೇಶಕ ಲಾಂಚ್ ಆಗೋಕೆ ಇದಕ್ಕಿಂತ ಒಳ್ಳೆಯ ತಂಡ ಸಿಗೋದಿಲ್ಲ. ಮೊದಲ ಚಿತ್ರಕ್ಕೇ, ನಿರೀಕ್ಷೆ ಮಾಡದಷ್ಟು ಬೆಂಬಲ, ಪ್ರೋತ್ಸಾಹ ಸಿಕ್ಕಿದೆ. ‘ಸಿಲಿಕಾನ್ ಸಿಟಿ’ ಸಮಯದಲ್ಲೇ ನಾನು ಸೂರಜ್‌ಗೌಡ ಜೊತೆ ಚಿತ್ರ ಮಾಡುವ ಕುರಿತು ಚರ್ಚಿಸುತ್ತಿದ್ದೆ. ಕಳೆದ ಮೂರು ವರ್ಷಗಳಿಂದಲೂ, ಸುಮಾರು ಐದಾರು ಕಥೆಗಳ ಬಗ್ಗೆ ಚರ್ಚಿಸಿದ್ದು ಉಂಟು. ಕೊನೆಗೆ, ಸೂರಜ್‌ಗೌಡ ಒಮ್ಮೆ ಭೇಟಿ ಮಾಡಿ, ಈ ಕಥೆ ಹೇಳಿದರು. ತುಂಬಾ ಚೆನ್ನಾಗಿತ್ತು. ನೀವೇ ನಿರ್ದೇಶನ ಮಾಡಬೇಕು ಅಂತಾನೂ ಹೇಳಿಬಿಟ್ಟರು. ಕೊನೆಗೆ ನಿರ್ಮಾಪಕರನ್ನೂ ಭೇಟಿ ಮಾಡಿಸಿದರು. ಈಗ ನಾನು ನಿಮ್ಮ ಸನಿಹಕೆ ಬಂದಿದ್ದೇನೆ. ಇದು ಮೊದಲ ಹೆಜ್ಜೆ. ನಿರ್ಮಾಪಕರ ಕೊಡುತ್ತಿರುವ ಧೈರ್ಯ, ಸಹಕಾರದಿಂದ ಒಳ್ಳೆಯ ಚಿತ್ರ ಮಾಡ್ತೀನಿ ಎಂಬ ವಿಶ್ವಾಸವಿದೆ. ಇದೊಂದು ಲವ್‌ಸ್ಟೋರಿಯಾಗಿದ್ದು, ಈಗಿನ ಜಾನರ್‌ನ ಕಥೆ ಇಲ್ಲಿದೆ.’ ಎನ್ನುತ್ತಾರೆ ಸುಮನ್ ಜಾದೂಗರ್. ನಾಯಕ ಸೂರಜ್‌ಗೌಡ ಅವರಿಗೆ ಮೊದಲ ಸಲ ಗೆಳೆಯರ ಜೊತೆ ಚಿತ್ರ ಮಾಡುತ್ತಿರುವ ಖುಷಿ. ನಿರ್ಮಾಪಕರು ಅವರ ಮೈಸೂರಿನ ಕಾಲೇಜು ಗೆಳೆಯರು. ಕಾಲೇಜು ದಿನಗಳ ಸಂದರ್ಭದಲ್ಲಿ ಗೆಳೆಯರ ಮಧ್ಯೆ ಸ್ಪರ್ಧೆಯೇ ಹೆಚ್ಚಾಗಿದ್ದನ್ನು ನೆನಪಿಸಿಕೊಳ್ಳುವ ಸೂರಜ್‌ಗೌಡ, ‘ಹದಿನೈದು ವರ್ಷಗಳ ಗೆಳೆತನ ಇಂದಿಗೂ ಹಾಗೆಯೇ ಇದೆ. ಈಗ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಒಂದೊಳ್ಳೆಯ ತಂಡ ಕಟ್ಟುವುದು ಸುಲಭವಲ್ಲ. ಇದು ಅಂತಹ ಅದ್ಭುತ ತಂಡ. ಎರಡು ವರ್ಷಗಳ ಕನಸು ಇದು. ಕಥೆ ಬಳಿಕ ನಿರ್ಮಾಪಕರು ಸಿಕ್ಕರು. ನಾಯಕಿಯ ಹುಡುಕಾಟಕ್ಕೆ ಹೊರಟಾಗ, ಕನ್ನಡದ ಹುಡುಗಿಯೇ ಬೇಕು ಎಂಬ ನಿರ್ಧಾರ ನಮ್ಮದ್ದಾಗಿತ್ತು. ಬಂದ ಅದೆಷ್ಟೋ ಫೋಟೋಗಳ ಪೈಕಿ ಧನ್ಯಾ ರಾಮ್‌ಕುಮಾರ್ ಫೋಟೋ ಎಲ್ಲರಿಗೂ ಇಷ್ಟವಾಯ್ತು. ದೊಡ್ಡಮನೆ ಹುಡುಗಿಯ ಆಯ್ಕೆ ಆಯ್ತು. ನಿಜಕ್ಕೂ ಧನ್ಯಾ ತುಂಬಾ ಹಾರ್ಡ್‌ವರ್ಕ್ ಮಾಡ್ತಾರೆ. ಇದಕ್ಕಾಗಿ ವರ್ಕ್‌ಶಾಪ್ ಮಾಡಲಾಗಿದೆ. ಅವರ ಬದ್ಧತೆ ಏನೆಂಬುದನ್ನು ನಾನು ನೋಡಿದ್ದೇನೆ. ಇನ್ನು, ನಾನಿಲ್ಲಿ ಆಗಷ್ಟೇ ಕಾಲೇಜು ಮುಗಿಸಿ, ಕೆಲಸ ಮಾಡುತ್ತಿರುವ ಹುಡುಗನ ಪಾತ್ರ ಮಾಡುತ್ತಿದ್ದೇನೆ. 26 ವರ್ಷದ ಹುಡುಗನಂತೆ ಕಾಣಬೇಕಿರುವುದರಿಂದ ಕೇವಲ 20 ದಿನದಲ್ಲೇ ನಾನು 8 ಕೆಜಿ ತೂಕ ಇಳಿಸಿಕೊಂಡಿದ್ದೇನೆ’ ಎಂಬುದು ಸೂರಜ್‌ಗೌಡ ಕೊಡುವ ವಿವರ.
Related Articles
Advertisement
ಮತ್ತೂಬ್ಬ ನಿರ್ಮಾಪಕ ರಂಗನಾಥ್ ಕುಡ್ಲಿ ಕೂಡಾ ತಮ್ಮ ಸಿನಿಮಾ ಅನುಭವ ಹಂಚಿಕೊಂಡರು. ಚಿತ್ರಕ್ಕೆ ರಘುದೀಕ್ಷಿತ್ ಸಂಗೀತ ನೀಡುತ್ತಿದ್ದಾರೆ. ಅವರಿಗಿಲ್ಲಿ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಜಾಗವಿದೆಯಂತೆ. ಅಭಿಲಾಶ್ ಕಳತ್ತಿ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸುರೇಶ್ ಅರ್ಮುಗಂ ಸಂಕಲನವಿದೆ. ಪ್ರವೀಣ್‌ಕುಮಾರ್ ಸಂಭಾಷಣೆ ಬರೆದಿದ್ದಾರೆ.
ವಿಜಯ್ ಭರಮಸಾಗರ