ಚೆನ್ನೈ: ಧನುಷ್ ಅಭಿನಯದ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾ ಯಶಸ್ವಿಯಾಗಿ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿರುವ ʼಕ್ಯಾಪ್ಟನ್ ಮಿಲ್ಲರ್ʼ ವಿರುದ್ಧ ಲೇಖಕರೊಬ್ಬರು ಕೃತಿ ಚೌರ್ಯ ಆರೋಪವನ್ನು ಮಾಡಿದ್ದಾರೆ.
ಲೇಖಕರಾಗಿರುವ ವೇಲಾ ರಾಮಮೂರ್ತಿ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದ ವಿರುದ್ದ ಕೃತಿ ಚೌರ್ಯ ಆರೋಪವನ್ನು ಮಾಡಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಈ ಬಗ್ಗೆ ʼಪುತಿಯಾ ತಲೈಮುರೈʼ ಅವರೊಂದಿಗಿನ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಕ್ಯಾಪ್ಟನ್ ಮಿಲ್ಲರ್’ ಅವರ ‘ಪಟ್ಟಾತು ಯಾನೈ’ ಎಂಬ ಕಾದಂಬರಿಯ ಸ್ಪಷ್ಟ ಪ್ರತಿ ಎಂದಿದ್ದು, ಸಿನಿಮಾ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಶೀಘ್ರದಲ್ಲೇ ನಿರ್ದೇಶಕರ ಸಂಘವನ್ನು ಸಂಪರ್ಕಿಸುವುದಾಗಿ ಅವರು ಹೇಳಿದ್ದಾರೆ.
‘ಕ್ಯಾಪ್ಟನ್ ಮಿಲ್ಲರ್’ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಚಿತ್ರವು ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯವನ್ನು ಕೇಳುತ್ತಿರುವ ಬೆನ್ನಲ್ಲೇ ವಿವಾದದ ಸುಳಿಯಲ್ಲಿ ಸಿಲುಕಿದೆ.
“ಕ್ಯಾಪ್ಟನ್ ಮಿಲ್ಲರ್ ಚಿತ್ರತಂಡ ಸಿನಿಮಾ ಬಿಡುಗಡೆಗೂ ಮುನ್ನ ಯಾವುದೇ ಅನುಮತಿ ಪಡೆದಿರಲಿಲ್ಲ. ಈ ಸಿನಿಮಾ ನನ್ನ ‘ಪಟ್ಟಾತು ಯಾನೈ’ಕಾದಂಬರಿಯನ್ನು ಆಧರಿಸಿದೆ. ಈ ಕೃತಿಚೌರ್ಯದ ಕೆಲಸಕ್ಕೆ ನನಗೆ ನ್ಯಾಯ ಬೇಕು, ಚಿತ್ರರಂಗದಲ್ಲಿ ಪ್ರಾಮಾಣಿಕತೆ ಇಲ್ಲ, ಹಾಗಾಗಿ ನ್ಯಾಯಕ್ಕಾಗಿ ಸಿನಿಮಾ ನಿರ್ದೇಶಕರ ಸಂಘದ ಮೊರೆ ಹೋಗುತ್ತಿದ್ದೇನೆ. ಭಾರತಿರಾಜ (ಪ್ರಸಿದ್ಧ ನಿರ್ದೇಶಕ ಮತ್ತು ಒಕ್ಕೂಟದ ಅಧ್ಯಕ್ಷ) ನನಗೆ ಸಹಾಯ ಮಾಡುತ್ತಾರೆ ಎಂದು ಭಾವಿಸುತ್ತೇವೆ” ಎಂದು ಲೇಖಕ-ನಟ ವೇಲಾ ರಾಮಮೂರ್ತಿ ಹೇಳಿದ್ದಾರೆ.
ಕೃತಿ ಚೌರ್ಯ ಮಾಡಿದ ಆರೋಪವನ್ನು ನಾನು ಖ್ಯಾತಿ ಅಥವಾ ಹಣಗಳಿಸಲು ಮಾಡುತ್ತಿಲ್ಲ.ಬೌದ್ಧಿಕ ಆಸ್ತಿ ಹಕ್ಕುಗಳ ಮಹತ್ವವನ್ನು ಪ್ರಸ್ತಾಪಿಸಿದ ಅವರು,ತನ್ನ ಶ್ರಮಕ್ಕೆ ನ್ಯಾಯ ಸಿಗಬೇಕು ಎಂದಿದ್ದಾರೆ.
‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಧನುಷ್ ಮತ್ತು ಪ್ರಿಯಾಂಕಾ ಅರುಲ್ ಮೋಹನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಿವ ರಾಜ್‌ಕುಮಾರ್, ಸಂದೀಪ್ ಕಿಶನ್ ಮತ್ತು ಇಲಂಗೋ ಕುಮಾರವೇಲ್ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.