Advertisement
ಕೆ.ಆರ್.ನಗರ ಪಟ್ಟಣದಿಂದ 16 ಕಿ.ಮೀ. ದೂರದಲ್ಲಿರುವ ಚುಂಚನಕಟ್ಟೆ ಸುಂದರ ಪರಿಸರದೊಂದಿಗೆ ಪ್ರಕೃತಿಯ ಆರಾಧಕರ ಮೆಚ್ಚಿನ ತಾಣವಾಗಿದೆ. ಅಲ್ಲದೇ ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಕೋದಂಡರಾಮ ದೇವಾಲಯವನ್ನೂ ಹೊಂದಿದೆ. ಕಾವೇರಿ ಇಲ್ಲಿ 27 ಮೀಟರ್ ಎತ್ತರದಿಂದ ಭೋರ್ಗರೆತದೊಂದಿಗೆ ಧುಮುಕುತ್ತಾ ಸೀತೆಯ ಮಡುವಿನಲ್ಲಿ ನಯನ ಮನೋಹರವಾದ ಜಲಪಾತ ನಿರ್ಮಿಸಿದ್ದು, ಧನುಷ್ಕೋಟಿಯಲ್ಲಿ ತನ್ನ ವೈಭವ ಮೆರೆಯುತ್ತಿದೆ. ಸುಮಾರು 400 ಮೀಟರ್ ವಿಸ್ತೀರ್ಣದಲ್ಲಿ ಶ್ವೇತ ವೈಭವದೊಂದಿಗೆ ರುದ್ರರಮಣೀಯವಾಗಿ ಕಂಗೊಳಿಸುವ ಕಾವೇರಿ ಧುಮ್ಮಿಕ್ಕುವ ಪರಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ನೋಡಲು ಹೊರ ರಾಜ್ಯಗಳು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಚುಂಚನಕಟ್ಟೆಯನ್ನು ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಲು 20 ಕೋಟಿ ಅನುದಾನ ತಂದು ವಿಭಿನ್ನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೋದಂಡರಾಮನ ದೇವಾಲಯದ ಜೀರ್ಣೋದ್ಧಾರದ ಜತೆಗೆ ಅದರ ಮುಂಭಾಗದಲ್ಲಿ 30 ಅಡಿ ಎತ್ತರದ ವೀರಾಂಜನೇಯಸ್ವಾಮಿಯ
ಏಕಶಿಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಇದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ರುದ್ರ ರಮಣೀಯ ದೃಶ್ಯ: ಮಕ್ಕಳಿಗಾಗಿ ಉದ್ಯಾನವನ ನಿರ್ಮಾಣ ಮಾಡಲಾಗಿದ್ದು, ರಜಾ ದಿನಗಳಲ್ಲಿ ಕುಟುಂಬ ಸಮೇತ ಬಂದು ಭೋರ್ಗರೆದು ಧುಮುಕುತ್ತಿರುವ ಕಾವೇರಿ ನದಿ ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
Related Articles
ಮುಂಗಾರು ಮಳೆಯಿಂದ ಮೈತುಂಬಿಕೊಂಡ ಕಾವೇರಿಯನ್ನು ಹತ್ತಿರದಿಂದ ನೋಡಿ ಆಸ್ವಾದಿಸಲು ಕಲ್ಲು ಬಂಡೆಗಳನ್ನು ಏರುವ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪ್ರವಾಸಿ ಗರು ತಮ್ಮ ತಮ್ಮ ಮೊಬೈಲ್ ಫೋನುಗಳಲ್ಲಿ ಸೌಂದರ್ಯ ಸೆರೆ ಹಿಡಿಯಲು ಯತ್ನಿಸುವುದು
ಸರ್ವೆ ಸಾಮಾನ್ಯವಾಗಿದೆ. ಆದರೆ ಸೂಕ್ತ ರಕ್ಷಣೆ ಕಲ್ಪಿಸದಿದ್ದರೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ.
● ಗೇರದಡನಾಗಣ್ಣ
Advertisement