Advertisement
ಕೆ.ಆರ್.ನಗರ ಪಟ್ಟಣದಿಂದ 16 ಕಿ.ಮೀ. ದೂರದಲ್ಲಿರುವ ಚುಂಚನಕಟ್ಟೆ ಸುಂದರ ಪರಿಸರದೊಂದಿಗೆ ಪ್ರಕೃತಿಯ ಆರಾಧಕರ ಮೆಚ್ಚಿನ ತಾಣವಾಗಿದೆ. ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಸಮೀಪ ಇರುವ ಧನುಷ್ಕೋಟಿ ಜಲಪಾತ ಮೈದುಂಬಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜೊತೆಗೆ ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಕೋದಂಡರಾಮ ದೇವಾಲಯವನ್ನೂ ಹೊಂದಿದೆ.
Related Articles
Advertisement
ಚುಂಚನಕಟ್ಟೆಗೆ ದಿನನಿತ್ಯ ಹಾಗೂ ವಾರಾಂತ್ಯದ ರಜಾ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳು ಮತ್ತು ಹೊರ ರಾಜ್ಯಗಳಿಂದಲೂ ಸಾವಿರಾರು ಪ್ರವಾಸಿಗರು ಆಗಮಿಸಿ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ. ವಿಶೇಷವಾಗಿ ಕಾವೇರಿ ನದಿ ತುಂಬಿ ಭೋರ್ಗರೆದು ಹರಿಯುವ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತದೆ.
ಜಲಪಾತದ ರಮಣೀಯ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದರೆ, ಇನ್ನು ಕೆಲ ಕುಟುಂಬದ ಸದಸ್ಯರು, ಸ್ನೇಹಿತರು, ನವ ವಿವಾಹಿತರು ಹಾಗೂ ಯುವಕ-ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ. ಪ್ರತಿದಿನ ಸಹಸ್ರಾರು ಮಂದಿ ಇಲ್ಲಿಗೆ ದಾಂಗುಡಿ ಇಡುತ್ತಾ ಧನುಷ್ಕೋಟಿ ಜಲಪಾತದ ಸೌಂದರ್ಯ ಸವಿಯುತ್ತಾರೆ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರ: ಕೆ.ಆರ್.ನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ, ಪ್ರವಾಸಿ ತಾಣ ಹಾಗೂ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗಿರುವ ಚುಂಚನಕಟ್ಟೆಯಲ್ಲಿ ತೇತ್ರಾಯುಗದ ಕೋದಂಡರಾಮನ ದೇಗುಲ, ಅದರಂಚಿನಲ್ಲಿಯೇ ಜೀವನದಿ ಕಾವೇರಿ ಹರಿಯುತ್ತಿದ್ದು, ಧನುಷ್ಕೋಟಿ ಜಲಪಾತ ಸಹ ತನ್ನದೆಯಾದ ಐತಿಹ್ಯ ಹೊಂದಿದೆ.
ಪ್ರವಾಸಿ ತಾಣವಾಗಿರುವ ಚುಂಚನಕಟ್ಟೆ ಜಲಪಾತ, ಕೋದಂಡರಾಮ ದೇವಾಲಯ ಹಾಗೂ ರಾಸುಗಳ ಜಾತ್ರೆಗೆ ಪ್ರಸಿದ್ಧಿ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಇಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರತಿ ವರ್ಷ ಜಲಪಾತೋತ್ಸವ ಆಚರಿಸಲಾಗುತ್ತಿದೆ. ಇದು ಮತ್ತಷ್ಟು ಆಕರ್ಷಣೀಯವಾಗಿರುವುದರ ಜತೆಗೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಸ್ಥಳ ದೇಶದಲ್ಲೇ ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಆಶಯವಾಗಿದೆ.
* ಗೇರದಡ ನಾಗಣ್ಣ