ಜನ್ಮಭೂಮಿಗಾಗಿ ಏನಾದರೂ ಮಾಡಬೇಕು. ತಾನಷ್ಟೆ ಬೆಳೆದರೆ ಸಾಲದು ತನ್ನ ಊರಿನ ಜನರಿಗಾಗಿ ಕೊಡುಗೆ ಕೊಡಬೇಕೆಂಬ ಉತ್ಕಟ ಇಚ್ಚೆ ಇಟ್ಟುಕೊಂಡು, ಹತ್ತಾರು ಎಡರು-ತೊಡರುಗಳ ನಡುವೆಯೇ ತಾನು ಮಾತ್ರ ಬೆಳೆಯದೆ ಈ ಭಾಗವನ್ನು ಬೆಳೆಸುತ್ತಿರುವ ತೇರದಾಳ ಪಟ್ಟಣದ ಡಾ| ಮಹಾವೀರ ದಾನಿಗೊಂಡ ಅವರ ಪರಿಶ್ರಮ ಅನುಕರಣೀಯ.
ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ತೋರುವ ಮೂಲಕ ರಾಜ್ಯದಲ್ಲೇ ಹೊಸ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿ ಬಾಗಲಕೋಟೆ ಜಿಲ್ಲೆಯ ನೂತನ ತಾಲೂಕು ತೇರದಾಳ ಪಟ್ಟಣದ ಕೀರ್ತಿಯನ್ನು ಹೆಚ್ಚಿಸಿದ ಶ್ರೇಯಸ್ಸು ಡಾ|ಎಂ.ಎಸ್. ದಾನಿಗೊಂಡ ಅವರಿಗೆ ಸಲ್ಲುತ್ತದೆ.
ಖ್ಯಾತ ವೈದ್ಯ ಡಾ|ಮಹಾವೀರ ದಾನಿಗೊಂಡ ಅವರು 45 ವರ್ಷಗಳ ಹಿಂದೆ ಮುಂಬಯಿ ನಗರದಲ್ಲಿ ಎಂಎಸ್, ಡಿಸಿಎಚ್, ಎಫ್‌ಐಸಿಎಸ್ ಪದವಿ ಪೂರ್ಣಗೊಳಿಸಿ ಅಲ್ಲೆ ಸೇವೆ ಆರಂಭಿಸದೇ ಈ ಭಾಗದ ಜನರ ಆರೋಗ್ಯಕ್ಕಾಗಿ 1983ರಲ್ಲಿ 50 ಹಾಸಿಗೆಗಳ ಆಸ್ಪತ್ರೆಯೊಂದಿಗೆ ಜನಸೇವೆಗೆ ಮುಂದಾದರು. 2003ರಲ್ಲಿ ಸಿದ್ರಾಮಪ್ಪ ದಾನಿಗೊಂಡ ಮೆಮೋರಿಯಲ್ ಟ್ರಸ್ಟ್ ಆರಂಭಿಸುವ ಮೂಲಕ ವೈದ್ಯಕೀಯ ಸೇವೆಯೊಂದಿಗೆ ಶೈಕ್ಷಣಿಕ ಸೇವೆಗೆ ಮುಂದಾದರು. 2004ರಲ್ಲಿ ಪದ್ಮಾ ಆಯುರ್ವೇದಿಕ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಮತ್ತು ನೂರು ವಿದ್ಯಾರ್ಥಿಗಳ ಬಿಎಡ್ ಪದವಿ ಕಾಲೇಜು ಆರಂಭಿಸಿದರು. 2005ರಲ್ಲಿ ದಾನಿಗೊಂಡ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆರಂಭಿಸಿ ಬಿಎಡ್ ಮತ್ತು ಬಿಎಎಂಎಸ್ ಓದಲು ದೂರದ ಊರುಗಳಿಗೆ ಹೋಗುವ ಕಷ್ಟ ತಪ್ಪಿಸಿ ಸ್ಥಳೀಯವಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಾತ್ಮಕ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿ ಶಿಕ್ಷಣ ಪ್ರೇಮಿಗಳ ಗಮನ ಸೆಳೆದಿದ್ದಾರೆ.
ಏನೆಲ್ಲ ಇದೆ: 30ಎಕರೆ ವಿಶಾಲ ಪ್ರದೇಶದಲ್ಲಿ ಪ್ರತಿ ವಿಭಾಗಗಳು ಸುಸಜ್ಜಿತವಾದ ಕಟ್ಟಡ ಹೊಂದಿವೆ. ಎಲ್ಲೆಡೆ ಸಿಸಿ ಕ್ಯಾಮೆರಾಗಳ ಕಣ್ಗಾವಲಿದೆ. ಈಗಂತೂ ಎಸ್‌ಡಿಎಂ ಟ್ರಸ್ rದ ಅಡಿಯಲ್ಲಿ ಬಿಎಡ್, ದಾನಿಗೊಂಡ ಬಿಎಎಂಎಸ್ ಕಾಲೇಜು-ಆಸ್ಪತ್ರೆ, ಐಟಿಐ ಕಾಲೇಜು, ಪ್ಯಾರಾ ಮೆಡಿಕಲ್ ಡಿಎಂಎಲ್‌ಟಿ, ಡಾ|ಸಿದ್ಧಾಂತ ದಾನಿಗೊಂಡ ಸಿಬಿಎಸ್‌ಇ, ವಾಣಿಜ್ಯ ಪಿಯು ಕಾಲೇಜು, ಬಿಕಾಂ, ಎಂಎಸ್, ಎಂಡಿ ಆಯುರ್ವೇದಿಕ್ ಸ್ನಾತ್ತಕೋತ್ತರ ಪದವಿ, ವಿಜ್ಞಾನ ಪಿಯು ಕಾಲೇಜು, ಬಿಎಸ್‌ಸಿ ನರ್ಸಿಂಗ್ ಹಾಗೂ ಬಿ. ಫಾರ್ಮಸಿ ಸೇರಿದಂತೆ 14 ವಿವಿಧ ಶಾಲಾ- ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಸಂಸ್ಥೆಯಲ್ಲಿ ಒಟ್ಟು 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ರಾಜ್ಯ ಮಾತ್ರವಲ್ಲ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾನ, ಪಶ್ಚಿಮ ಬಂಗಾಲ, ಕೇರಳ, ತ್ರಿಪುರಾ ಸೇರಿದಂತೆ ವಿವಿಧೆಡೆಯಿಂದ,ಸಿಬಿಎಸ್‌ಇಗಾಗಿ ಧಾರವಾಡ, ಬೆಂಗಳೂರಿನ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಓದುತ್ತಿರುವುದು ಹೆಮ್ಮೆ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗಾಗಿ ಹೈಟೆಕ್ ವಸತಿ ನಿಲಯಗಳಿವೆ. ಗುಣಮಟ್ಟದ ಊಟ, ಶುದ್ಧ ನೀರಿನ ಘಟಕವಿದೆ. ಶಿಶು ವಿಹಾರ ಮಕ್ಕಳಿಗೆ ಸುಸಜ್ಜಿತ ಆಟಿಕೆ ಮೈದಾನದಿಂದ ಕಾಲೇಜು ವಿದ್ಯಾರ್ಥಿಗಳ ಕ್ರಿಕೆಟ್, ಬಾಸ್ಕೇಟ್ ಬಾಲ್ ಕೋರ್ಟ್‌ವರೆಗಿನ ಸುಂದರ ಮೈದಾನಗಳಿವೆ. ಸ್ಮಾರ್ಟ್‌ಕ್ಲಾಸ್, ಎಲ್‌ಸಿಡಿ, ಓಎಚ್‌ಪಿ, ಇಂಟರ್ಯಾಕ್ಟಿವ್ ಪೊÅಜೆಕ್ಟರ್, ಉತ್ತಮ ವಾಚನಾಲಯ, ಪ್ರಯೋಗಾಲಯ ವ್ಯವಸ್ಥೆ ಸೇರಿದಂತೆ ಯಾವುದಕ್ಕೂ ಕೊರತೆಯಿಲ್ಲದ ಸಂಸ್ಥೆಯಾಗಿದೆ. ಗಣೇಶ ಮಂದಿರ, ಸರಸ್ವತಿ ಪೀಠ, ಆಯುರ್ವೇದಿಕ್ ಸೇರಿದಂತೆ ವಿವಿಧ ಗಾರ್ಡನ್‌ಗಳು, ಪ್ರತ್ಯೇಕ ಶೌಚಾಲಯ, ಉದ್ಯಾನ, ಶಾಲಾ ವಾಹನಗಳು, ಜನರೇಟರ್, ಸಭಾಭವನಗಳು ಸೇರಿದಂತೆ ಹೈಟೆಕ್ ಸಂಸ್ಥೆಗೆ ಇರಬೇಕಾದ ಎಲ್ಲ ಉತ್ಕೃಷ್ಟ ಸೌಲಭ್ಯಗಳಿವೆ. ಇನ್ನೂ ಕಟ್ಟಡಗಳು ನಿರ್ಮಾಣಗೊಳ್ಳುತ್ತಲಿವೆ.
ಸಂಸ್ಥೆಯಿಂದ ಎಲ್ಲರಿಗೂ ಲಾಭ:
ಎಸ್‌ಡಿಎಂ ಸಂಸ್ಥೆ ಬೆಳೆದಂತೆ ಪಟ್ಟಣ ಬೆಳೆಯುತ್ತಿದೆ ಎನ್ನಬಹುದಾಗಿದೆ. ಶೈಕ್ಷಣಿಕವಾಗಿ ಆಗುವ ಲಾಭಗಳೊಂದಿಗೆ, ವಿಚಾರ ಗೋಷ್ಠಿಗಳು, ಉನ್ನತ ಅ ಧಿಕಾರಿಗಳ-ಸಾಧಕ ವ್ಯಕ್ತಿಗಳ ಉಪನ್ಯಾಶಗಳಿಂದ ಸಾರ್ವಜನಿಕರಿಗೆ ಅನೇಕ ಲಾಭಗಳಾಗಿವೆ. ಕಿರಾಣಿ, ತರಕಾರಿ, ಬಟ್ಟೆ, ಸ್ಟೇಶನರಿ, ಬೇಕರಿ, ಔಷ ಧ, ಚಪ್ಪಲಿ, ಆಟೋ, ಕೂಲಿ ಸೇರಿದಂತೆ ಹೆಚ್ಚಿನ ವ್ಯಾಪಾರ, ಹೊಸತನ ತುಂಬಿ ಪಟ್ಟಣ ಬೆಳೆಯುತ್ತಿದೆ. ಸಂಸ್ಥೆಯ ಅಡಿಯಲ್ಲಿ ಸುಮಾರು 400 ಜನರು ಕೆಲಸ ಮಾಡುತ್ತಿದ್ದಾರೆ. ಆ ಎಲ್ಲ ಕುಟುಂಬಗಳಿಗೆ ಡಾ| ದಾನಿಗೊಂಡ ಅವರು ಕಲ್ಪವೃಕ್ಷ ಆಗಿದ್ದಾರೆ. ಹೀಗಾಗಿ ಅವರೆಲ್ಲರೂ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಉತ್ತರೋತ್ತರ ಬೆಳೆಯಲಿ:
ಶೈಕ್ಷಣಿಕವಾಗಿ ಜಿಲ್ಲೆಯಲ್ಲಿಯೇ ಪ್ರಗತಿ ಸಾಧಿ ಸುತ್ತಿರುವ ಸಂಸ್ಥೆಯಿಂದ ನೂತನ ತಾಲೂಕು ಕೇಂದ್ರವಾದ ತೇರದಾಳ ಈಗ ಅಭಿವೃದ್ಧಿಯತ್ತ ಸಾಗುತ್ತಲಿದೆ. ಹಿಡಿದ ಕಾರ್ಯವನ್ನು ಬಿಡದೇ ಮಾಡುವ ಛಲ ಹೊಂದಿದ ಡಾ|ದಾನಿಗೊಂಡ ಅವರಿಂದ ಈ ನಾಡು ಇನ್ನಷ್ಟು ಅಭಿವೃದ್ಧಿ ಕಾಣುವ ಭರವಸೆ ಹೊಂದಿದ ನಾಗರಿಕರು ನಮ್ಮೂರಿನ ಹೆಮ್ಮೆಯ ಎಸ್‌ಡಿಎಂ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ, ಡಾ| ದಾನಿಗೊಂಡ ಅವರಿಗೆ ಇನ್ನಷ್ಟು ಚೈತನ್ಯ ತುಂಬಲಿ ಎಂದು ಆಶಿಸುತ್ತಿದ್ದಾರೆ.
ಪ್ರಗತಿ ಪಥದತ್ತ ಸಂಸ್ಥೆ:
ವರ್ಷದಿಂದ ವರ್ಷಕ್ಕೆ ವಿವಿಧ ವಿಭಾಗಗಳನ್ನು ಹೆಚ್ಚಿಸಿಕೊಳ್ಳುತ್ತ ಗುಣಾತ್ಮಕ ಶಿಕ್ಷಣದೊಂದಿಗೆ ಕ್ರೀಡೆ, ಕರಾಟೆ, ನೃತ್ಯ-ಸಂಗೀತ ಸೇರಿದಂತೆ ಸಾಂಸ್ಕೃತಿಕ ವಿಭಾಗಗಳಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಸಂಸ್ಥೆ ಪ್ರಗತಿ ಪಥದತ್ತ ದಾಪುಗಾಲಿಡುತ್ತಿದೆ. ಪದ್ಮಾ ಆಸ್ಪತ್ರೆ ಸಹ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಾಗುತ್ತ 5ಅಂತಸ್ತುಗಳ ಕಟ್ಟಡದೊಂದಿಗೆ ಬಾನೆತ್ತರಕ್ಕೆ ಬೆಳೆಯುತ್ತಿದೆ. ಈ ಸಂಸ್ಥೆಯಲ್ಲಿ ಓದಿದವರು ಶಿಕ್ಷಕ, ವೈದ್ಯ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿ ದೇಶಾದ್ಯಂತ ಸೇವೆಯಲ್ಲಿದ್ದು, ಪಟ್ಟಣದ ಕೀರ್ತಿಯನ್ನು ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದವರೆಗೂ ಬೆಳಗಿಸಿದ್ದಾರೆ. ಸಂಸ್ಥೆಯ ಬೆಳವಣಿಗೆಯ ವೇಗ ಹಾಗೂ ಗಟ್ಟಿತನದಿಂದ ರಾಜ್ಯದಲ್ಲೇ ಹೆಸರು ಮಾಡಿದ ಸಂಸ್ಥೆಗಳನ್ನು ಮೀರಿಸುವ ಭರವಸೆಯಿದೆ ಎಂದು ಅನೇಕ ದೂರದ ಊರಿನವರು ನೋಡಲು ಸಂಸ್ಥೆಗೆ ಬರುತ್ತಿದ್ದಾರೆ. ಇದಕ್ಕೆಲ್ಲ ಸಂಸ್ಥಾಪಕ ಚೇರಮನ್, ಖ್ಯಾತ ವೈದ್ಯ ಡಾ|ಮಹಾವೀರ ದಾನಿಗೊಂಡ ಅವರ ಬಿಗಿ-ಶಿಸ್ತುಬದ್ಧವಾದ ಮತ್ತು ಪ್ರಾಮಾಣಿಕ ಆಡಳಿತ ವೈಖರಿಯೇ ಕಾರಣವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳ ಆರೋಗ್ಯ ವಿಷಯಗಳ ಜನಜಾಗೃತಿ ಜಾಥಾಗಳು, ಪ್ಲಾಸ್ಟಿಕ್ ನಿಷೇಧ ಸೇರಿದಂತೆ ವಿವಿಧ ಪ್ರಭಾತ ಫೇರಿ, ಬೀದಿ ನಾಟಕಗಳು ಮಾತ್ರವಲ್ಲ 2019ರಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ ತತ್ತರಿಸಿದ್ದ ತಮದಡ್ಡಿ, ಹಳಿಂಗಳಿ, ಆಸಂಗಿ, ಕುಲಹಳ್ಳಿ ಗ್ರಾಮಗಳಲ್ಲಿ ಎರಡು ತಿಂಗಳುಗಳ ಕಾಲ ಉಚಿತ ಆರೋಗ್ಯ ಚಿಕಿತ್ಸೆ ಕೇಂದ್ರ ಸ್ಥಾಪಿಸಿ, ಔಷಧ ನೀಡುವ ಮೂಲಕ ನದಿ ತೀರದ ಗ್ರಾಮಸ್ಥರಿಗೆ ಸಂಸ್ಥೆ ನೆರವಾಗಿದೆ.
ಕೃಷಿ-ಸಹಕಾರ ಕ್ಷೇತ್ರಕ್ಕೂ ಪ್ರವೇಶ:
ಕೃಷಿ ಪ್ರಧಾನವಾದ ಈ ನಾಡಿನಲ್ಲಿ ವೈದ್ಯಕೀಯ,ಶೈಕ್ಷಣಿಕ ಸೇವೆಯೊಂದಿಗೆ ಸಹಕಾರಿ ಹಾಗೂ ಕೃಷಿ ಕ್ಷೇತ್ರಗಳಲ್ಲೂ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಡಾ|ದಾನಿಗೊಂಡ ಅವರು ಸಂಸ್ಥೆಯಡಿಯಲ್ಲಿ ರೈತರಿಗೆ ಪೂರಕವಾಗಿ ಪ್ರತಿ ಎಕರೆ ಜಮೀನಿನಲ್ಲಿ 150 ಟನ್ ಕಬ್ಬು ಬೆಳೆಯುವ ಕ್ರಮ ಕುರಿತಾಗಿ ವಿಚಾರ ಸಂಕಿರಣ ಹಮ್ಮಿಕೊಳ್ಳುವ ಮೂಲಕ ರೈತರಿಗೆ ಉತ್ತಮ ಮಾಹಿತಿ ಒದಗಿಸಿದ್ದಾರೆ. ಯುವ ಜನಾಂಗ ಸಹ ಕೃಷಿಯನ್ನು ಅಧುನಿಕ ಕ್ರಮದಿಂದ ಮಾಡುವ ಮೂಲಕ ಹೆಚ್ಚು ಇಳುವರಿ ಪಡೆಯುವಂತೆ ತಿಳಿಸಿದ್ದಾರೆ. ರತ್ನತ್ರಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ರತ್ನತ್ರಯ ಅಲ್ಪಸಂಖ್ಯಾತರ ಸೌಹಾರ್ದ ಸಹಕಾರಿ ಸಂಘ ಸ್ಥಾಪಿಸಿ ಉದ್ಯೋಗ ಒದಗಿಸುವುದರೊಂದಿಗೆ ಆರ್ಥಿಕ ಸಬಲತೆಗೆ ದಿಕ್ಕು ತೋರಿದ್ದಾರೆ.