ಕನ್ನಡದಲ್ಲಿ ಇಂದಿಗೂ ಪೊಲೀಸ್ ಆ್ಯಕ್ಷನ್ ಸಿನಿಮಾಗಳು ಎಂದರೆ ಮೊದಲು ನೆನಪಿಗೆ ಬರುವುದು “ಪೊಲೀಸ್ ಸ್ಟೋರಿ’ ಸರಣಿಯ ಸಿನಿಮಾಗಳು. ಅಂಥದ್ದೇ ಪೊಲೀಸ್ ಸ್ಟೋರಿ ಫೀಲ್ ಕೊಡುವಂತಹ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ ನಟ ಡಾಲಿ ಧನಂಜಯ್.
ಹೌದು, ಸದ್ಯ ನಟ ಧನಂಜಯ್ “ಹೊಯ್ಸಳ’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಸಿನಿಮಾ ಇದೇ ಮಾ. 30ಕ್ಕೆ ತೆರೆಗೆ ಬರುತ್ತಿದೆ. ಅಂದಹಾಗೆ, “ಹೊಯ್ಸಳ’ ಧನಂಜಯ್ ಅಭಿನಯದ 25ನೇ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಧನಂಜಯ್ ಉತ್ತರ ಕರ್ನಾಟಕದ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ “ಹೊಯ್ಸಳ’ ಸಿನಿಮಾದ ಪ್ರಚಾರದಲ್ಲಿರುವ ಧನಂಜಯ್, ತಮ್ಮ ಹೊಸ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. “”ರತ್ನನ ಪ್ರಪಂಚ’ ಸಿನಿಮಾವಾದ ಮೇಲೆ “ಕೆ.ಆರ್.ಜಿ ಸ್ಟುಡಿಯೋ’ ಜೊತೆ ಕನೆಕ್ಟ್ ಆಗಿ ಒಂದಿಷ್ಟು ಸಿನಿಮಾ ಮಾಡುವ ಪ್ಲಾನ್ ಮಾಡಿಕೊಂಡೆವು. ಆಗ “ಹೊಯ್ಸಳ’ ಸಿನಿಮಾದ ಕಥೆ ಬಂತು. ಕಥೆ ಕೇಳಿದಾಗ ತುಂಬಾ ಇಷ್ಟವಾಯ್ತು. ನಂತರ ಗೊತ್ತಾಯ್ತು ಇದು ನನ್ನ ಅಭಿನಯದ 25ನೇ ಸಿನಿಮಾ ಅಂತ. ನನಗೂ ಸಮಾಜಕ್ಕೆ ಏನಾದರೂ ಸಂದೇಶ ಹೇಳುವಂಥ ಸಿನಿಮಾ ಮಾಡಬೇಕು ಎಂದು ಮನಸ್ಸಿನಲ್ಲಿತ್ತು. ಅದರಂತೆಯೇ ಫ್ಯಾಮಿಲಿ ಜೊತೆ ಕುಳಿತು ನೋಡುವ ಸಬ್ಜೆಕ್ಟ್ ನನಗೆ “ಹೊಯ್ಸಳ’ ಸಿನಿಮಾದಲ್ಲಿ ಸಿಕ್ಕಿತು. ಇದರಲ್ಲಿ ಒಂದು ಸೀರಿಯಸ್ ಅಂಶವನ್ನು ಹೇಳುವ ಪ್ರಯತ್ನ ಮಾಡಲಾಗಿದ್ದು, ಒಳ್ಳೆ ಮೆಸೇಜ್ ಇರುವ ಕಮರ್ಷಿಯಲ್ ಸಿನಿಮಾ’ ಎನುವುದು ಧನಂಜಯ್ ಮಾತು.
ಇನ್ನು “ಹೊಯ್ಸಳ’ ಸಿನಿಮಾದಲ್ಲಿ ಧನಂಜಯ್ ಗುರುದತ್ ಹೊಯ್ಸಳ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಳಗಾವಿ ಗಡಿಭಾಗದಲ್ಲಿ ಸಿನಿಮಾದ ಕಥೆ ಸಾಗಲಿದ್ದು, ಈ ಸಿನಿಮಾವನ್ನು ಪೊಲೀಸ್ ಇಲಾಖೆಗೆ ಅರ್ಪಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಸಿನಿಮಾದಲ್ಲಿ ಡಾಲಿ ಧನಂಜಯ್ ಅವರಿಗೆ ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದಾರೆ. ಉಳಿದಂತೆ ನವೀನ್ ಶಂಕರ್, ಅವಿನಾಶ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದ್ದಾರೆ.
ಇವೆಲ್ಲದರ ನಡುವೆ, ಇತ್ತೀಚಿನ ಬೆಳವಣಿಯೊಂದರಲ್ಲಿ ಈಗಾಗಲೇ “ಹೊಯ್ಸಳ’ ಎಂಬ ಹೆಸರಿನಲ್ಲಿ ಇನ್ನೊಂದು ಹೊಸಬರ ಸಿನಿಮಾ ಸೆನ್ಸಾರ್ ಆಗಿ ತೆರೆಗೆ ಬರಲು ಸಿದ್ಧವಾಗಿದೆ. ಹಾಗಾಗಿ ಈ ಸಿನಿಮಾದ ಟೈಟಲ್‌ನಲ್ಲಿ ಕೊಂಚ ಬದಲಾವಣೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಧನಂಜಯ್ ಕಾಣಿಸಿಕೊಂಡಿರುವ “ಗುರುದತ್ ಹೊಯ್ಸಳ’ ಎಂಬ ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಇನ್ನು “ಕೆ. ಆರ್.ಜಿ ಸ್ಟುಡಿಯೋಸ್’ ಬ್ಯಾನರಿನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಿಸಿರುವ “ಗುರುದತ್ ಹೊಯ್ಸಳ’ ಸಿನಿಮಾಕ್ಕೆ ವಿಜಯ್ ಎನ್. ನಿರ್ದೇಶನವಿದೆ