ಕುಣಿಗಲ್: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯ ಗೊಂಡು ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ವೃದ್ಧೆಯನ್ನು ಬಿದನಗೆರೆ ಶ್ರೀ ಸತ್ಯಶನೇಶ್ವರ ಸ್ವಾಮಿ ಪುಣ್ಯ ಕ್ಷೇತ್ರದ ಧರ್ಮದರ್ಶಿ ಡಾ.ಧನಂಜಯ ಗೂರೂಜಿ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆಯಾದ ತಾಲೂಕಿನ ಕೊತ್ತಗೆರೆ ಹೋಬಳಿ ಹಾಲು ಗೋನಹಳ್ಳಿ ಗ್ರಾಮದ ವಾಸಿ ವನಜಾಕ್ಷಮ್ಮ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಘಟನೆ ವಿವರ: ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿಯ ಹಾಲುಗೋನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ವಾಸವಾಗಿರುವ ವನಜಾಕ್ಷಮ್ಮ ತುಂಬಾ ಬಡವೆ. ಆಕೆಗೆ ಗಂಡ, ಮಕ್ಕಳು ಯಾರೂ ಇಲ್ಲ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಅವರಿಗೆ ದೇವರ ಮೇಲೆ ಅಪಾರ ಭಕ್ತಿ. ಹೀಗಾಗಿ ಕುಣಿಗಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಬಂದು ಪೂಜೆ ಮುಗಿಸಿಕೊಂಡು ತನ್ನ ಗ್ರಾಮಕ್ಕೆ ಆಟೋ ರಿಕ್ಷಾದಲ್ಲಿ ವಾಪಸ್ ಹೋಗುತ್ತಿದ್ದರು. ಆದರೆ ಆಟೋ ರಿಕ್ಷಾದ ಬ್ರೇಕ್ ನಿಯಂತ್ರಣಕ್ಕೆ ಬಾರದೆ ತಾಲೂಕಿನ ಬಿಳಿದೇವಾಲಯ ಸಮೀಪ ಪಲ್ಟಿ ಹೊಡೆದಿತ್ತು. ಈ ವೇಳೆ ವನಜಾಕ್ಷಮ್ಮ ಸೇರಿದಂತೆ ಆಟೋದಲ್ಲಿ ಇದ್ದ ಐವರು ಗಾಯಗೊಂಡರು.
ಗಾಯಾಳುಗಳಿಗೆ ಚಿಕವನಜಾಕ್ಷಮ್ಮ ಅವರ ತಲೆಗೆ ತೀವ್ರ ತರಹದ ಪೆಟ್ಟು ಬಿದ್ದು ರಕ್ತಸ್ರಾವವಾಗಿ ರಸ್ತೆಯಲ್ಲಿ ನರಳುತ್ತಿದ್ದರು. ಬೆಟ್ಟದ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿ ಇದೇ ಮಾರ್ಗವಾಗಿ ಬರುತ್ತಿದ್ದ ಬಿದನಗೆರೆ ಶ್ರೀ ಸತ್ಯ ಶನೇಶ್ವರ ಸ್ವಾಮಿ ಪುಣ್ಯ ಕ್ಷೇತ್ರದ ಧರ್ಮದರ್ಶಿ ಧನಂಜಯ ಗುರೂಜಿ ತಕ್ಷಣ ಕಾರಿನಿಂದ ಇಳಿದು ಗಾಯಾಳುಗಳನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಪಟ್ಟಣದ ಎಂ.ಎಂ.ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ದರು. ಇವರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವನಜಾ ಕ್ಷಮ್ಮ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಇಲ್ಲಿನ ಎಂ.ಎಂ.ಆಸ್ಪತ್ರೆಗೆ ಮತ್ತೆ ಕರೆತಂದು ಗುಣಮುಖವಾಗು ವವರೆಗೂ ಎಲ್ಲಾ ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸಿ ಗುಣಮುಖರಾದ ಬಳಿಕ, ಅವರವರ ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಧರ್ಮದರ್ಶಿಡಾ.ಧನಂಜಯ ಗುರೂಜಿ ಮಾತ ನಾಡಿ, ತಾನು ಬಡ ಕುಟುಂಬದಿಂದ ಬಂದವನು. ಬಡತನ ಅನುಭವಿಸಿದ್ದೇನೆ. ತನ್ನ ತಂದೆ-ತಾಯಿ ಬದುಕಿದ್ದಾಗ ನನಗೆ ಒಂದು ಮಾತು ಹೇಳುತ್ತಿದ್ದರು. ವೃದ್ಧರು, ವಿಕಲಚೇತನರು, ವಿದ್ಯಾರ್ಥಿಗಳು ಹಾಗೂ ಬಡವರ ಬಗ್ಗೆ ಅನುಕಂಪವಿರಲಿ. ನಿನಗೆ ದೇವರು ಒಳ್ಳೆಯದು ಮಾಡಿದಾಗ ನಿನ್ನ ಕೈಲಾದ ಸೇವೆ ಸಮಾಜಕ್ಕೆ ವಿನಿಯೋಗಿಸು ಎಂದು ಹೇಳಿದ್ದರು.
ಸೇವಾಕಾರ್ಯ: ಧಾರ್ಮಿಕ ಕೈಂಕರ್ಯದ ಜೊತೆಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಸತ್ಯಶನೇಶ್ವರ ಸ್ವಾಮಿ ಟ್ರಸ್ಟ್ ಸ್ಥಾಪನೆ ಮಾಡಿ ಆ ಮೂಲಕ ವೃದ್ಧರಿಗೆ ಹಾಗೂ ವಿಕಲ ಚೇತನ ರಿಗೆ 500 ರೂ. ಮಾಶಾಸನ, ವ್ಹೀಲ್ ಚೇರ್, ತ್ರಿಚಕ್ರ ವಾಹನ, ವಾಕಿಂಗ್ ಸ್ಟಿಕ್, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಲಾಗಿದೆ ಅಲ್ಲದೆ, ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ಶಸ್ತ್ರ ಚಿಕಿತ್ಸೆ ಏರ್ಪಡಿಸಿ ಇದರ ವೆಚ್ಚವೆಲ್ಲಾ ಟ್ರಸ್ಟ್ ಭರಿಸಿದೆ. ಮುಂದಿನ ದಿನದಲ್ಲಿ ವೃದ್ಧಾಶ್ರಮ, ಅನಾಥಾಶ್ರಮ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಗುರೂಜಿ ತಿಳಿಸಿದರು.