Advertisement
ಕಾಲಡಿಗೆ ಶನಿಯನ್ನು ಮೆಟ್ಟಿ ನಿಂತ ಹನುಮನ ವಿಗ್ರಹ ಕರ್ನಾಟಕದ ಇನ್ನಾವ ಭಾಗದಲ್ಲೂ ಇಲ್ಲ ಎಂಬ ಖ್ಯಾತಿ ಇದ್ದರೂ, ಈ ಆಂಜನೇಯ ದೇವರ ದರ್ಶನದಿಂದಲೇ ಶನಿ ದೋಷ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಹೊಂದಿದ್ದರೂ, ಇದು ನಾಗ ಸನ್ನಿಧಾನವೂ ಆಗಿ ಭಕ್ತರ ಸಂಕಲ್ಪಗಳನ್ನು ಈಡೇರಿಸುವ ಶಕ್ತಿ ಹೊಂದಿದ್ದರೂ ದೇವರೇ ಹೊರ ಜಗತ್ತಿಗೆ ತೆರೆದುಕೊಳ್ಳಲು ಈವರೆಗೂ ಮನಸ್ಸು ಮಾಡಿಲ್ಲ ಎಂದು ವಿಶ್ಲೇಷಿಸಬೇಕಾಗುತ್ತದೆ.
ಅಂಜನೇಯ ದೇವಾಲಯದ ಕುರುಹುಗಳಷ್ಟೇ ಇದ್ದ ಜಮೀನು ಆರಂಭದಲ್ಲೇನೂ ರಾಮಪ್ಪ ಕುಟುಂಬಕ್ಕೆ ಸಿಕ್ಕಿರಲಿಲ್ಲ. ಕಾಲಾಂತರದಲ್ಲಿ ಖರೀದಿಸಿದಾಗಲೇ ದೇವಾಲಯದ ಮಾಹಿತಿ ಬೆಳಕಿಗೆ ಬಂತು. ದೇವರ ಮೂರ್ತಿ ಕಾಲದ ಹೊಡೆತಕ್ಕೆ ಸಿಕ್ಕು ಚೂರುಗಳಾಗಿದ್ದರೂ ಗರ್ಭಗುಡಿಯ ತಳಪಾಯ ಸುಭದ್ರವಾಗಿತ್ತು. ಮೊದಲ 20 ವರ್ಷ ಚೂರುಗಳನ್ನು ಸಂಯೋಜಿಸಿ ಪೂಜೆ ಮಾಡಲಾಗುತ್ತಿತ್ತು. ಈ ನಡುವೆ ದೇವ ಪ್ರಶ್ನೆ ನಡೆಸಿದಾಗ ಹನುಮನ ಜತೆ ಭೂತ, ನಾಗ, ಯಕ್ಷಿ, ರಕ್ತೇಶ್ವರಿಯಂತಹ ಪರಿವಾರ ದೇವತೆಗಳಿರುವುದು ತಿಳಿದು ಬಂತು. ಕಾಲದಿಂದ ಕಾಲಕ್ಕೆ ಈ ಎಲ್ಲ ದೇವತಾ ಸಮೂಹ ತಾನೇ ತಾನಾಗಿ ಕಾಣಿಸಿಕೊಂಡಾಗ ಅದು ವ್ಯಕ್ತವಾದ ಜಾಗದಲ್ಲಿಯೇ ಪ್ರತಿಷ್ಠಾಪನೆ ನಡೆಯಿತು.
Related Articles
Advertisement
ದೇವಾಲಯದ ನಿರ್ಮಾತೃವಾದ ರಾಮಪ್ಪನವರು ನೆನಪಿಸಿಕೊಳ್ಳುತ್ತಾರೆ. ನಾವು ಈ ಹಿಂದೆ ದೇವಸ್ಥಾನವಿದ್ದ ಜಾಗದ ಗರ್ಭಗುಡಿಯಲ್ಲಿಯೇ 2000ದಲ್ಲಿ ಮಲ್ಲಕ್ಕಿ ವಿ.ಕೆ.ಶ್ರೀಪಾದಭಟ್ಟರ ಆಚಾರತ್ವದಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿದೆವು. ದೇವ ಸಂಕಲ್ಪದಂತೆ ನಮಗೆ ಸಾಲಿಗ್ರಾಮ, ಬಲಿ ಮೂರ್ತಿ, ಲಕ್ಷ್ಮಿ, ಸರಸ್ವತಿ, ಪೂಜಾ ಸಾಮಗ್ರಿಗಳು ಈ ಸ್ಥಳದಲ್ಲಿಯೇ ದೊರಕಿದವು. ಇವತ್ತು ಬೆಲೆ ಕಟ್ಟಲು ಸಾಧ್ಯವಿಲ್ಲದ ಅಮೂಲ್ಯ ರಕ್ತೇಶ್ವರಿ ದೇವಿ ಉತ್ಸವಮೂರ್ತಿಯನ್ನು ಜೋಪಾನ ಮಾಡಲಾಗುತ್ತಿದ್ದು, ವರ್ಷಕ್ಕೊಂದು ದಿನ ಮಾತ್ರ ಭಕ್ತರ ದರ್ಶನಕ್ಕೆ ಇಡಲಾಗುತ್ತಿದೆ. ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಹನುಮ ಜಯಂತಿ ಸಂದರ್ಭದಲ್ಲಿ ಮೂರು ದಿನ ವಿಜೃಂಭಣೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆ ವೇಳೆ ಸಾವಿರಾರು ಕಾಯಿ ಸಮರ್ಪಣೆ, ಬಲಿ ಹರಕೆಗಳು ಈಡೇರುತ್ತವೆ.
ಒಂದು ಸಂದರ್ಭದಲ್ಲಿ ಹೋಮವೊಂದು ಸಂಪನ್ನಗೊಂಡ ಸಂದರ್ಭದಲ್ಲಿ ಬಲಿ ಮೂರ್ತಿ, ಉತ್ಸವಮೂರ್ತಿಗಳು ಒಂದೆಡೆ ರಾಮಪ್ಪ ಕುಟುಂಬಕ್ಕೆ ಲಭ್ಯವಾಗುತ್ತದೆ. ಆದರೆ ಅವುಗಳನ್ನು ಯಾವುದು ಯಾವುದೆಂದು ವಿಂಗಡಿಸುವಲ್ಲಿ ಸೋಲಾಗುತ್ತದೆ. ಮರುದಿನ ಬೆಳಗಾಗುವ ವೇಳೆಯಲ್ಲಿ ಆಶ್ಚರ್ಯವೊಂದು ಸಂಭವಿಸಿರುತ್ತದೆ. ದೇವಾಲಯದ ಬಲಿ ಹಾಕುವ ಜಾಗದಲ್ಲಿ ಬಲಿ ಮೂರ್ತಿ ಹೋಗಿ ನಿಂತಿರುತ್ತದೆ. ಈ ರೀತಿ ದೇವರು ತೋರಿಸಿದ ಮಾರ್ಗದಲ್ಲಿ ಮುನ್ನಡೆಯಬೇಕಾದ ಷರತ್ತನ್ನು ಮನೆತನದ ಹಿರಿಯ ಶೇಷನಾಯ್ಕ ತಮ್ಮ ಜೀವಿತದ ಕೊನೆಯ ಮಾತಾಗಿ ರಾಮಪ್ಪ ಅವರನ್ನು ಕರೆದು ಹೇಳಿದ್ದರಂತೆ, ದೇವರ ಸೂಚನೆ ಪಾಲಿಸಿ. ರಾಮಪ್ಪ ಹೇಳುತ್ತಾರೆ, ಹಿಂದೆ ಹೊಳೆನಾಡು ರಾಜರ ಕಾಲದಲ್ಲಿ ದೇವಾಲಯಕ್ಕೆ ರಥವಿತ್ತು. ಪ್ರತಿ ವರ್ಷ ರಥೋತ್ಸವವೂ ಆಗುತ್ತಿತ್ತು ಎಂಬ ಮಾಹಿತಿಯಿದೆ. ನಮಗೂ ಹನುಮ ದೇವರಿಗೆ ರಥ ಮಾಡಿಸಿ ರಥೋತ್ಸವ ಮಾಡುವ ಅಭಿಲಾಷೆಯಿದೆ. ಆದರೆ ದೇವರು ಪದೇ ಪದೇ ಇಂಗಿತ ವ್ಯಕ್ತಪಡಿಸುತ್ತಿದೆ. ಕಾಲವಿನ್ನೂ ಬಂದಿಲ್ಲ. ರಥದ ಜವಾಬ್ದಾರಿಯನ್ನು ಹೊರಲು ಕಾಲ ಪಕ್ವವಾಗಿಲ್ಲ.
ಮಲೆನಾಡು ಭಾಗದಲ್ಲಿ ದೊಡ್ಡ ಕೆಲಸವೊಂದಕ್ಕೆ ಮುಂದಾಗುವ ಮುನ್ನ, ವಧು-ವರರ ಮನೆಯವರ ಒಪ್ಪಿಗೆಯಲ್ಲಿ ಗೊಂದಲಗಳಿದ್ದಾಗ ದೇವರಲ್ಲಿ ಪ್ರಸಾದ ನೋಡಿಸುವ ಪದ್ಧತಿ ಇದೆ. ಹಾಗೆ ಅರ್ಚಕ ದೇವರಲ್ಲಿ ಅಪೇಕ್ಷೆಗಳನ್ನು ಮಂಡಿಸಿದ ನಿರ್ದಿಷ್ಟ ಸಮಯದಲ್ಲಿ ದೇವರಿಗೆ ಮುಡಿಸಿದ ಹೂವು ವಿಗ್ರಹದಿಂದ ಕೆಳಗುರುಳುವ ಕ್ರಿಯೆಯ ಹಿಂದೆ ದೈವ ಪ್ರೇರಣೆ ಇರುತ್ತದೆ ಎಂಬ ನಂಬಿಕೆ ಈ ಭಾಗದಲ್ಲಿದೆ. ಅಂತಹ ಪ್ರಸಾದ ಕೇಳುವವರಿಗೆ ಈ ಧನಾಂಜನೇಯ ಸ್ವಾಮಿ ದೇವರು ಸೂಕ್ತ ರೀತಿಯಲ್ಲಿ ತನ್ನ ಸಂದೇಶ ತಿಳಿಸುತ್ತಾನೆ ಎಂಬ ಭಾವ ಜನರಲ್ಲಿದೆ.
ಡಾ| ರಾಮಪ್ಪ ಕುಟುಂಬ ದವರು ದೇವಾಲಯದ ಅಭಿವೃದ್ಧಿಗೆ ಕಟಿಬದ್ಧರಾಗಿದ್ದಾರೆ. ತಮ್ಮ ಪುರೋಗಾಮಿ ಬೆಳವ ಣಿಗೆಯಲ್ಲಿ ಧನಾಂಜನೇಯ ಸ್ವಾಮಿ ದೇವರ ಕೃಪೆಯಿದೆ ಎಂದು ನಂಬಿದ್ದಾರೆ. ಕಾಲಕಾಲಕ್ಕೆ ದೈವ ಸಂಜ್ಞೆಯನ್ನು ಗಮನಿಸಿ ದೇವಸ್ಥಾನ ಆವರಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಸೊರಬ ತಾಲ್ಲೂಕಿನಲ್ಲಿಯೇ ದೊಡ್ಡದು ಎನ್ನಬಹುದಾದ ಧನಾಂಜನೇಯ ಸ್ವಾಮಿ ಸಭಾಭವನ, ಕಲ್ಯಾಣ ಮಂಟಪ ನಿರ್ಮಾಣ 2010ರಲ್ಲಿ ಆಗಿದೆ. ನಿತ್ಯ ಪೂಜೆ ಸಲ್ಲಿಸುವ ಅರ್ಚಕರ ಮನೆ ಹಾಗೂ ಭಕ್ತರಿಗೆಂದು ನಿರ್ಮಿಸಲಾದ ವಸತಿ ಗೃಹ ಆಧುನಿಕವಾಗಿದೆ. ರಾಜ್ಯದ ಇತರೆ ಭಾಗದ ಭಕ್ತರಿಗೆ ಈ ಕ್ಷೇತ್ರದ ಪರಿಚಯ ವಿಶೇಷವಾಗಿ ಇಲ್ಲವಾದರೂ, ಸ್ಥಳೀಯವಾಗಿ ದೇವರನ್ನು ನಂಬಿದವರ ಸಂಖ್ಯೆ ಅಪಾರ. ಧಾರ್ಮಿಕ ಕಾರ್ಯಕ್ರಮಗಳು ಈ ಕ್ಷೇತ್ರದಲ್ಲಿ ಅನೂಚಾನವಾಗಿ ನಡೆಯುತ್ತಲೇ ಇವೆ. 2020ರಲ್ಲಿ 155 ರಾಮಾಯಣ ಪಾರಾಯಣ, ಒಂದು ಭಾಗವತ, ಖಡ್ಗಮಾಲಿನಿ ಹೋಮ, ಸುದರ್ಶನ ಹೋಮ, ದುರ್ಗಾ ದೀಪ ಹೋಮ ಮೊದಲಾದ ವಿಶೇಷ ಧಾರ್ಮಿಕ ಚಟುವಟಿಕೆಗಳು ಜೂನ್ ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಕಾಲ ನಡೆದಿತ್ತು ಎಂಬುದು ಒಂದು ಉದಾಹರಣೆಯಾಗ ಬಹುದು. ಹೇಳಬೇಕಾದ ಇನ್ನೊಂದು ಮಾತಿದೆ. ಶ್ರೀ ಧನಾಂಜನೇಯ ಸ್ವಾಮಿ ಸಭಾಭವನದಲ್ಲಿ ಸಾಕಷ್ಟು ಸಾಮಾಜಿಕ ಚಟುವಟಿಕೆ ಕಾರ್ಯಕ್ರಮಗಳು ನಡೆದಿವೆ. ಸೊರಬದ ಕಾಲೇಜುಗಳ ಎನ್‌ಎಸ್‌ಎಸ್ ಶಿಬಿರಗಳಾಗಿವೆ. ಸರ್ಕಾರದ ಕಾರ್ಯ ಕ್ರಮಗಳಿಗೆ ಇದು ತಾಣವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮದ್ಯವರ್ಜನ ಶಿಬಿರ ಇಲ್ಲಿ ನಡೆದದ್ದಿದೆ.
ಕ್ಷೇತ್ರದ ಮುಖ್ಯಸ್ಥರಾಗಿ ಡಾ| ಎಸ್.ರಾಮಪ್ಪ ಅಡಿ ಬರಹದಂತೆ ಹೇಳುವುದು ಒಂದೇ ಮಾತು, ಶ್ರೀ ಹೊಳೆಕೊಪ್ಪದ ಶ್ರೀ ಧನಾಂ ಜನೇಯ ದೇವಸ್ಥಾನ ಸಂಕಷ್ಟದಲ್ಲಿರುವವರು, ಕ್ಲೇಷದಲ್ಲಿರುವವರಿಗೆ ಶಾಂತಿ-ಸಮಾಧಾನ ಕೊಡುವ ಕ್ಷೇತ್ರ. ಭಗವಂತನ ಸನ್ನಿಧಾನ ಅರ ಸುವವರು ಕ್ಷೇತ್ರಕ್ಕೆ ಭೇಟಿ ನೀಡಿ ಪಾರಮಾರ್ಥಿಕ ಆನಂದ ಪಡೆಯಬಹುದು. ಸ್ಥಳ ಎಲ್ಲಿದೆ?
ಸಾಗರದಿಂದ ಸೊರಬಕ್ಕೆ ಹೋಗುವ ಉಳವಿ ಮಾರ್ಗದಲ್ಲಿ ಪಡವಗೋಡು, ಅಮಚಿ ನಂತರ ಹೊಳೆಕೊಪ್ಪ ಸಿಗುತ್ತದೆ. ಅಲ್ಲಿಂದ ಅರ್ಧ ಕಿಮೀ ಎಡಕ್ಕೆ ಸಾಗಿದರೆ ಧನಾಂಜನೇಯ ಸ್ವಾಮಿ ದೇವಸ್ಥಾನ ಸಿಗುತ್ತದೆ. ಮಾರ್ಗಸೂಚಿಗಳು ಸ್ಪಷ್ಟವಾಗಿರುವುದರಿಂದ ಸಮಸ್ಯೆ ಆಗಲ್ಲ. ಸೊರಬದಿಂದ ಬರುವವರು ಉಳವಿ, ಭದ್ರಾಪುರ ದಾಟಿದ ತಕ್ಷಣ ಹೊಳೆಕೊಪ್ಪ ಸಿಗುತ್ತದೆ. ಅಪರೂಪದ ಐತಿಹ್ಯ:
ಶಾಲಿವಾಹನ ಶಕೆ 1333ರ ಕಾಲದಲ್ಲಿ ಈ ಭಾಗವನ್ನು ಹೊಳೆನಾಡು ಅರಸರು ಆಳುತ್ತಿದ್ದರು. ಆ ರಾಜವಂಶಕ್ಕೆ ಇಲ್ಲಿನ ಆಂಜನೇಯ ಕುಲದೇವರಾಗಿದ್ದ. ಆಗ ದೇವರಿಗೆ ತ್ರಿಕಾಲ ಬಲಿ ಪೂಜೆ ಆಗುತ್ತಿತ್ತು. ಆ ಮನೆತನ 300ರಿಂದ 400 ವರ್ಷ ಆಳ್ವಿಕೆ ಮಾಡಿತ್ತು. ಆ ಹಂತದಲ್ಲಿನ ಒಂದು ಮಕರ ಸಂಕ್ರಮಣ ವೇಳೆ ರಾಜ್ಯ ಪತನಗೊಂಡ ನಂತರದ 600 ವರ್ಷಗಳಲ್ಲಿ ದೇವಾಲಯ ನಿರ್ಲಕ್ಷéಕ್ಕೊಳಗಾಗಿ ಕಾಡು ವ್ಯಾಪಕವಾಗಿ ಬೆಳೆದಿತ್ತು. ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳುತ್ತದೆ ಎಂದಾಗ ಅಲ್ಲಿನ ನಿವಾಸಿಗಳ ಪುನರ್ವಸತಿ ವಿಚಾರ ಚರ್ಚೆಗೆ ಬರುತ್ತದೆ. ಆಗ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಇಲ್ಲಿನ 800 ಎಕರೆ ರಾಜ್ಯ ಅರಣ್ಯದಲ್ಲಿ 230 ಎಕರೆ ಪ್ರದೇಶವನ್ನು ಕಂದಾಯ ಇಲಾಖೆಗೆ ವರ್ಗಾಯಿಸಿ ಆಣೆಕಟ್ಟೆಯಲ್ಲಿ ಜಮೀನು ಕಳೆದುಕೊಂಡವರಿಗೆ ಪರ್ಯಾಯವಾಗಿ ಕಳೆದುಕೊಂಡಿರುವುದಕ್ಕೆ ಅನುರೂಪವಾದ ಪ್ರಮಾಣದ ಭೂಮಿ ಕೊಡಲು ಆದೇಶಿಸುತ್ತಾರೆ. ಹಾಗೆ ಮುಳುಗಡೆ ಪ್ರದೇಶದಿಂದ 25 ಕುಟುಂಬ ಇಲ್ಲಿ 130 ಎಕರೆ ಭೂಮಿ ಪಡೆಯುತ್ತದೆ. ಹಾಗೆ ಬಂದವರಲ್ಲಿ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರ ತಂದೆ ಶೇಷ ನಾಯ್ಕ ಪ್ರಮುಖರು. ಎಲ್ಲರನ್ನು ಕರೆತಂದವರೇ ಅವರು. ಅವರ ಮನೆತನ, ಸಂಬಂಧಿ ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪುನರ್ವಸತಿ ಪಡೆದರು. ಈ ಭೂಮಿ ರಾಮಪ್ಪ ಮನೆಯವರಿಗೆ ಬಂದಿದ್ದಕ್ಕೂ ದೈವ ಸಂಕಲ್ಪವೇ ಕಾರಣವಾಗಿರಬೇಕು. ಅವತ್ತು ಸರ್ಕಾರ ಮೊದಲ ಹಂತದಲ್ಲಿ ಇಲ್ಲಿ ಭೂಮಿ ಕೊಡುವುದಕ್ಕೆ ಒಪ್ಪಿರಲಿಲ್ಲ. ಆಗ ಇಲ್ಲಿ ಕ್ಯಾಸನೂರು ಅರಣ್ಯ ಕಾಯಿಲೆ ಅಂದರೆ ಮಂಗನ ಕಾಯಿಲೆ ವ್ಯಾಪಕವಾಗಿದ್ದುದು ಕಾರಣವಾಗಿತ್ತು. ಆದರೆ ನಾವು ಒತ್ತಾಯ ಮಾಡಿದ್ದರಿಂದ ಸರ್ಕಾರ ನಮ್ಮ ಬೇಡಿಕೆಗೆ ಒಲಿಯಿತೆಂದು ರಾಮಪ್ಪ ನೆನಪನ್ನು ಮೆಲುಕು ಹಾಕುತ್ತಾರೆ. -ಗುರು ಸಾಗರ