ಬೆಳಗಾವಿ: ನೆರೆ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ರಾಣಿ ಚನ್ನಮ್ಮನ ಪುತ್ಥಳಿ ಎದುರು ನಿಂತು ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿಯಲ್ಲಿ ಮಾತನಾಡಿದ್ದನ್ನು ವಿರೋಧಿಸಿ ಪೋಸ್ಟ್ ಹಾಕಿದ್ದ ಯುವಕನಿಗೆ ಹೆಬ್ಬಾಳ್ಕರ್ ಪುತ್ರ ಬೆದರಿಕೆ ಹಾಕಿದ್ದು ಚರ್ಚೆಗೆ ಗ್ರಾಸವಾಗಿದೆ.
ಫೇಸ್ ಬುಕ್ ನಲ್ಲಿ ಗ್ರಾಮೀಣ ಶಾಸಕಿ ಹೆಬ್ಬಾಳ್ಕರ್ ಅವರು ತಾವು ಭಾಷಣ ಮಾಡಿದ ವಿಡಿಯೋ ತುಣುಕು ಅಪ್ ಲೋಡ್ ಮಾಡಿದ್ದರು. ಆಗ ಇದನ್ನು ವಿರೋಧಿಸಿದ ಗೋಕಾಕ್ ನ ಪವನ್ ಮಹಾಲಿಂಗಪುರ ಎಂಬ ಯುವಕ ಕನ್ನಡದಲ್ಲಿ ಮಾತನಾಡಿ, ಇಲ್ಲದಿದ್ದರೆ ಮುಂದೆ ನಿಮಗೆ ಜನ ಪಾಠ ಕಲಿಸುತ್ತಾರೆ ಎಂದು ಪೋಸ್ಟ್ ಮಾಡಿದ್ದಾನೆ.
ಆಗ ಪವನ್ ಮಹಾಲಿಂಗಪುರನ ಫೇಸ್ ಬುಕ್ ಗೆ ಮೆಸೆಂಜ್ ಮಾಡಿರುವ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು, ಮೇಡಂ ವಿರುದ್ದ ಇನ್ನೊಮ್ಮೆ ಪೋಸ್ಟ್ ಮಾಡಿದರೆ ನಾನು ಸುಮ್ಮನೆ ಬಿಡೋದಿಲ್ಲ. ನಿಮ್ಮ ಮನೆಗೆ ನೇರವಾಗಿ ಬರುತ್ತೇನೆ. ನೋಡುತ್ತಾ ಇರು ಇನ್ನೂ ಬಿಸಿ ಮಾಡುವುದಿದೆ ಎಂದು ಬೆದರಿಕೆ ಹಾಕಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಗಳು ಹರಿದಾಡುತ್ತಿವೆ.
ಪ್ರತಿಭಟನೆ ವೇಳೆ ಶಾಸಕಿ ಹೆಬ್ಬಾಳ್ಕರ್ ಅವರು ಕನ್ನಡ ಮಾತನಾಡುತ್ತಿದ್ದಂತೆ ಮರಾಠಿಯಲ್ಲಿಯೂ ಭಾಷಣ ಮಾತನಾಡಿದ್ದರು. ಆಗ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಕನ್ನಡ ಮಾತನಾಡುವಂತೆ ಒತ್ತಾಯಿಸಿದಾಗ ಕೂಡಲೇ ಹೆಬ್ಬಾಳ್ಕರ್ ಕನ್ನಡ ಮಾತು ಆರಂಭಿಸಿದ್ದರು. ಜತೆಗೆ ಮರಾಠಿ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.