Advertisement

ಧಮ್, ಕಿಸ್ ಮತ್ತು ಪ್ರಾರಂಭ

10:07 AM Mar 14, 2020 | mahesh |

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನೋರಂಜನ್‌ ನಾಯಕರಾಗಿರುವ “ಪ್ರಾರಂಭ’ ಚಿತ್ರದ ಆಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಮಗನ ಸಿನಿಮಾದ ಹಾಡುಗಳ ಬಿಡುಗಡೆಗೆ ರವಿಚಂದ್ರನ್‌ ಅತಿಥಿಯಾಗಿ ಆಗಮಿಸಿ ಶುಭಕೋರಿದರು. ಮೊದಲು ಚಿತ್ರದ ಹಾಡು ಹಾಗೂ ಟ್ರೇಲರ್‌ ನೋಡಿದ ರವಿಚಂದ್ರನ್‌, “ಕಥೆ ಹಾಗೂ ಹಾಡಿನಲ್ಲೊಂದು ನೋವು ಕಾಣಿಸುತ್ತಿದೆ. ಮುಖ್ಯವಾಗಿ ಪ್ರೀತಿಯಲ್ಲಿ ನೋವು ಇದ್ದಾಗಲೇ ಅದಕ್ಕೊಂದು ವ್ಯಾಲ್ಯೂ. ಈ ಚಿತ್ರದಲ್ಲಿ ಆ ತರಹದ ಒಂದು ನೋವು ಇದೆ. ಇನ್ನು ಚಿತ್ರದ ಹಾಡು ನೋಡಿದಾಗ ನನ್ನ ಮಗ ನನಗಿಂತ ಚೆನ್ನಾಗಿ ಸಿಗರೇಟ್‌ ಸೇದುತ್ತಾನೆ. ನನಗಿಂತಲೂ ಚೆನ್ನಾಗಿ ಕಿಸ್‌ ಮಾಡ್ತಾನೆ ಅನ್ನಿಸ್ತು. ನನಗಿಂತ ಅವನು ಏನೂ ಕಡಿಮೆ ಇಲ್ಲ ಅನ್ನೋದು ಸ್ಕ್ರೀನ್‌ನಲ್ಲಿ ಕಾಣಿಸುತ್ತಿದೆ. ನಾನೂ ಸಹ ಆರಂಭದ ದಿನಗಳಲ್ಲಿ ಅಷ್ಟೂ ಧೈರ್ಯವಾಗಿ ಕಿಸ್‌ ಮಾಡಿರಲಿಲ್ಲ. ಏಕೆಂದರೆ ನಾನು ಮನೆಗೋದ್ರೆ ಸೀನ್‌ ಆಗುತ್ತೆ, ಕ್ಲಾಸ್‌ ಇರುತ್ತೆ ಎಂದು’ ಎಂದು ನಕ್ಕರು. ಇನ್ನು, ಒಬ್ಬ ಕಲಾವಿದನಾಗಿ ತೆರೆಮೇಲೇ ಸಿಗರೇಟ್‌ ಸೇದೋದು, ಮಧ್ಯಪಾನ ಮಾಡೋದು ತಪ್ಪಲ್ಲ ಅನ್ನೋದು ರವಿಚಂದ್ರನ್‌ ಮಾತು. “ಸಿನಿಮಾ ಕೇಳಿದಾಗ ಅದನ್ನೆಲ್ಲಾ ಒಬ್ಬ ಕಲಾವಿದನಾಗಿ ಮಾಡಬೇಕು. ಆರಾಮವಾಗಿ ಮಾಡಲಿ, ನಾನು ಅದು ಮಾಡಲ್ಲ, ಇದು ಮಾಡಲ್ಲ ಎಂದು ತಮಗೆ ತಾವೇ ಒಂದು ಬೌಂಡರಿ ಹಾಕಿಕೊಂಡು ಕೂರಲು ಹೋಗಬಾರದು’ ಎನ್ನುವ ರವಿಚಂದ್ರನ್‌, “ಮಗ ಬಂದ ಅಂತ ನಾನು ಕಿಸ್‌ ಮಾಡದೇ ಇರಲ್ಲ. ಹೀರೋಯಿನ್‌ ಬಂದರೆ, ಸ್ಕ್ರೀನ್‌ನಲ್ಲಿ ಕಿಸ್‌ ಮಾಡ್ತೀನಿ. ಅವನೂ ಮಾಡ್ಕೊಂಡು ಹೋಗಲಿ..’ ಎನ್ನುತ್ತಾ ಮಗನಿಗೆ ಶುಭಕೋರಿದರು.

Advertisement

ಇನ್ನು, ನಾಯಕ ಮನೋರಂಜನ್‌ ಅವರಿಗೆ “ಪ್ರಾರಂಭ’ ಮೂಲಕ ಹೊಸ ಕೆರಿಯರ್‌ ಪ್ರಾರಂಭವಾಗುವ ಭರವಸೆ. “ಚಿತ್ರ ನೋಡಿದವರು ಇದು “ಅರ್ಜುನ್‌ ರೆಡ್ಡಿ’ ರೀಮೇಕಾ ಎಂದು ಕೇಳುತ್ತಿದ್ದಾರೆ. ಖಂಡಿತಾ ಇದು ರೀಮೇಕ್‌ ಅಲ್ಲ. ಇಲ್ಲಿ ಸಿಗರೇಟ್‌, ಕಿಸ್‌ ಇದ್ದರೂ ಅದಕ್ಕೊಂದು ಅರ್ಥವಿದೆ. ಜೊತೆಗೆ ಚಿತ್ರದಲ್ಲೊಂದು ಸಂದೇಶವೂ ಇದೆ’ ಎನ್ನುವುದು ಮನೋರಂಜನ್‌ ಮಾತು. ಚಿತ್ರದಲ್ಲಿ ಕೀರ್ತಿ ಕಲ್ಕೆರೆ ನಾಯಕಿಯಾಗಿ ನಟಿಸಿದ್ದಾರೆ. ರವಿಚಂದ್ರನ್‌ ಅವರ ಜೊತೆ ವೇದಿಕೆ ಹಂಚಿಕೊಂಡ ಖುಷಿಯಲ್ಲಿದ್ದ ಕೀರ್ತಿ ಚಿತ್ರದ ಬಗ್ಗೆ ಹೆಚ್ಚೇನು ಮಾತನಾಡಲಿಲ್ಲ.

ಈ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಮನೋರಂಜನ್‌ ಮೂರು ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದಾರಂತೆ. ಒಂದು ವರ್ಷದ ಶ್ರಮಕ್ಕೆ ಪ್ರೇಕ್ಷಕರು ಫ‌ಲ ನೀಡುತ್ತಾರೆಂಬ ವಿಶ್ವಾಸ ಅವರದು. ಚಿತ್ರಕ್ಕೆ ಸಂಗೀತ ನೀಡಿದ ಪ್ರಜ್ವಲ್‌ ಪೈ, ಸಾಹಿತ್ಯ ರಚಿಸಿದ ಸಂತೋಷ್‌ ನಾಯ್ಕ ಕೂಡಾ ಸಿನಿಮಾ ಬಗೆಗಿನ ಖುಷಿ ಹಂಚಿಕೊಂಡರು. ಚಿತ್ರವನ್ನು ಜಗದೀಶ್‌ ಕಲ್ಯಾಡಿ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next