ಮಂಗಳೂರು: ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೋಜೋ ವತಿಯಿಂದ ಮಂಗಳೂರಿನಲ್ಲಿ ಜರಗಿದ “ಇಂಡಿಯನ್ ಕರಾಟೆ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್’ ಪಂದ್ಯಾಟದಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಅವರು ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಕೊಂಡಿದ್ದಾರೆ. ಕವಿತಾ ಅವರು 65 ಕೆ.ಜಿ.ಗಿಂತ ಮೇಲ್ಪಟ್ಟ ತೂಕದ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಸ್ಪರ್ಧಿಸಿದ್ದರು.
ಫೈನಲ್‌ನಲ್ಲಿ ಉದಯೋನ್ಮುಖ ಕರಾಟೆ ಪಟು ನಿಶಾ ನಾಯಕ್ ವಿರುದ್ಧ 7-3 ಅಂಕಗಳಿಂದ ಅವರು ಜಯಗಳಿಸಿದರು. ನಿಶಾ ನಾಯಕ್ ಅವರು ಬೆಳ್ಳಿ ಹಾಗೂ ಪೃಥ್ವಿ ಮತ್ತು ಕಾವ್ಯಾ ಕಂಚಿನ ಪದಕ ಪಡೆದುಕೊಂಡರು. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಕವಿತಾ ಸನಿಲ್ ತಮ್ಮ ಎದುರಾಳಿ ಕಾವ್ಯಾ ಅವರನ್ನು 8-0 ಅಂಕಗಳಿಂದ ಸೋಲಿಸಿದರು. ಶಕ್ತಿಶಾಲಿ ಪಂಚ್ ಮೂಲಕ ಎದುರಾಳಿ ವಿರುದ್ಧ ಆರಂಭದಿಂದಲೇ ಪ್ರಹಾರ ನಡೆಸಿದ ಸನಿಲ್ ಎದುರಾಳಿಗೆ ಒಂದು ಅಂಕವನ್ನೂ ಬಿಟ್ಟುಕೊಡಲಿಲ್ಲ.
ಕರಾಟೆ ಹಾಗೂ ಪವರ್ ಲಿಫ್ಟಿಂಗ್‌ನಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 58 ಚಿನ್ನ ಹಾಗೂ 18 ಬೆಳ್ಳಿಯ ಪದಕಗಳನ್ನು ಗೆದ್ದಿರುವ ಕವಿತಾ ಸನಿಲ್ ಅವರು, ಒಂಬತ್ತು ವರ್ಷದ ಬಳಿಕ ರವಿವಾರ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸಂತಸ ತಂದಿದೆ: ಕವಿತಾ
1998ರಿಂದ 2008ರ ವರೆಗೆ ನಿರಂತರವಾಗಿ ಕರಾಟೆಯಲ್ಲಿ ನ್ಯಾಶನಲ್ ಚಾಂಪಿಯನ್ ಆಗಿದ್ದೆ. ಬಳಿಕ ಸ್ಪರ್ಧೆಯಿಂದ ಹಿಂದೆ ಸರಿದಿದ್ದೆ. ಇದೀಗ 9 ವರ್ಷದ ಬಳಿಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಮೂಲಕ ಕರಾಟೆಗೆ ಮರಳಿದ್ದು ಪ್ರಥಮ ಸ್ಪರ್ಧೆಯಲ್ಲೇ ಚಿನ್ನ ಗೆದ್ದಿರುವುದು ಸಂತಸ ತಂದಿದೆ ಎಂದು ಕವಿತಾ ಸನಿಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆಯುವ ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಸಲುವಾಗಿ ಕಳೆದ ಎರಡು ತಿಂಗಳಿಂದ ಕೆಲಸದ ಒತ್ತಡದ ನಡುವೆಯೂ ಬೆಳಗ್ಗೆ ಮತ್ತು ಸಂಜೆ ಅಭ್ಯಾಸ ನಡೆಸಿದ್ದೆ, ಆದರೆ ಕಳೆದ ಒಂದು ವಾರದಿಂದ ಕೆಲವೊಂದು ವಿಚಾರವಾಗಿ ಮಾನಸಿಕ ಕಿರಿ ಕಿರಿ ಇದ್ದರೂ ಈ ಸಾಧನೆ ಮಾಡಿದ್ದೇನೆ ಎಂದು 2 ಮಕ್ಕಳ ತಾಯಿಯಾಗಿರುವ ಕವಿತಾ ಸನಿಲ್ ಹರ್ಷ ವ್ಯಕ್ತಪಡಿಸಿದ್ದಾರೆ.