ಅಜೇಯ್ ರಾವ್ ಅಂದಾಕ್ಷಣ, ಎಲ್ಲರಿಗೂ ಲವರ್ ಬಾಯ್ ಅನ್ನೋದೇ ನೆನಪಾಗುತ್ತಿತ್ತು. ಅಜೇಯ್ ರಾವ್‌ಗೂ ಲವರ್ ಬಾಯ್ ಪಾತ್ರ ಮಾಡಿ ಸಾಕಾಗಿತ್ತು. ಒಂದೊಳ್ಳೆಯ ಆ್ಯಕ್ಷನ್ ಸಿನಿಮಾ ಮಾಡಬೇಕು ಅಂತ ಒಂದಷ್ಟು ಕಥೆಗಳನ್ನು ಹುಡುಕುತ್ತಿದ್ದರು. ಅವರಿಗೆ ಇಷ್ಟವಾದ ಕೆಲ ಆ್ಯಕ್ಷನ್ ಕಥೆಗಳನ್ನು ಒಪ್ಪಿ, ಈಗಾಗಲೇ ಸಿನಿಮಾ ಮಾಡಿ, ಸೈ ಎನಿಸಿಕೊಂಡಿದ್ದೂ ಇದೆ. ಈಗ ಹೊಸ ವಿಷಯವೆಂದರೆ, “ಧೈರ್ಯಂ’ ಕೂಡ ಅಂಥದ್ದೇ ಮಾಸ್ ಅಂಶಗಳಿರುವ ಪಕ್ಕಾ ಆ್ಯಕ್ಷನ್ ಸಿನಿಮಾ.
ಸದ್ದಿಲ್ಲದೆಯೇ “ಧೈರ್ಯಂ’ ಚಿತ್ರವನ್ನು ಮುಗಿಸಿದ್ದಾರೆ ನಿರ್ದೇಶಕ ಶಿವತೇಜಸ್. “ಮಳೆ’ ಬಳಿಕ ಇದು ಅವರ ಎರಡನೇ ನಿರ್ದೇಶನದ ಸಿನಿಮಾ. ಇದೇ ಮೊದಲ ಸಲ ಸಿನಿಮಾ ಪೂರ್ತಿ ಆ್ಯಕ್ಷನ್ ಹೀರೋ ಆಗಿಯೇ ಮಿಂಚಿರುವ ಅಜೇಯ್ ರಾವ್‌ಗೆ ಈ ಸಿನಿಮಾ ಮೇಲೆ ನಂಬಿಕೆ ಇದೆ. ಕಾರಣ, ಗಟ್ಟಿ ಕಥೆ. ಈಗಾಗಲೇ ಬೆಂಗಳೂರು ಮತ್ತು ರಾಮನಗರದಲ್ಲಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ ನಿರ್ದೇಶಕ ಶಿವತೇಜಸ್.
ಇತ್ತೀಚೆಗೆ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.ಅಂದಹಾಗೆ, ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಎನ್ನುವ ನಿರ್ದೇಶಕರು, ಯುವಕರನ್ನು ಆಧಾರವಾಗಿಟ್ಟುಕೊಂಡು ಕತೆ ಬರೆದಿದ್ದಾರಂತೆ. “ಹಣಕ್ಕಾಗಿ ಏನೇ ಕೆಲಸವಿದ್ದರೂ ಮಾಡಲು ಹಿಂದೆ ಮುಂದೆ ನೋಡದ ಹುಡುಗನಾಗಿ ಇಲ್ಲಿ ಅಜೇಯ್‌ರಾವ್ ಕಾಣಿಸಿಕೊಂಡಿದ್ದಾರಂತೆ. ಹಾಗೆ ಹೇಳುವುದಾದರೆ, ಅದೊಂದು ಪಕ್ಕಾ ರಾ ಲುಕ್ ಇರುವಂತಹ ರಗಡ್ ಆಗಿ ಕಾಣುವ ಪಾತ್ರವಂತೆ.
ಸಿನಿಮಾದಲ್ಲಿ ಖಡಕ್ ಡೈಲಾಗ್ ಹೇಳುವುದರೊಂದಿಗೆ ಪಕ್ಕಾ ಖದರ್ ಇರುವ ಹೀರೋ ಆಗಿ ಅವರು ತೆರೆಯ ಮೇಲೆ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂಬುದು ನಿರ್ದೇಶಕರ ಮಾತು. ಅದೇನೆ ಇರಲಿ, ಅಜೇಯ್ ಅವರಿಗೆ ಶಿವತೇಜಸ್ ಹೇಳಿದ ಕಥೆ, ಪಾತ್ರ ಇಷ್ಟವಾಗಿದ್ದರಿಂದ ಒಪ್ಪಿ, ಕೆಲಸ ಮಾಡಿದ್ದಾರೆ. ಸಿನಿಮಾ ಕೂಡ ಅವರು ಅಂದುಕೊಂಡಂತೆಯೇ ಮೂಡಿಬಂದಿದೆಯಂತೆ.
ಇನ್ನು, ದಾವಣಗೆರೆ ಮೂಲದ ಅಧಿತಿ ಪ್ರಭುದೇವ ಅಜೇಯ್‌ರಾವ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಇಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಅವರಿಗೆ ಇದು 1004 ನೇ ಸಿನಿಮಾ ಎಂಬುದು ವಿಶೇಷ. ಡಾ.ರಾಜುಗೆ ಇದು ಮೊದಲ ನಿರ್ಮಾಣದ ಸಿನಿಮಾವಂತೆ. ಹಾಡುಗಳಿಗೆ ಎಮಿಲ್ ಸಂಗೀತ ಸಂಯೋಜಿಸಿದ್ದಾರೆ. ಶೇಖರ್ ಚಂದ್ರ ಕ್ಯಾಮೆರಾ ಹಿಡಿದಿದ್ದಾರೆ.