Advertisement

ಬಿಸಿಲ ಧಗೆಗೆ ಹಸಿರು ತಂಬುಳಿಗಳು

03:50 AM Mar 24, 2017 | |

ಇನ್ನೇನು ಬೇಸಿಗೆ ಪ್ರಾರಂಭವಾಯಿತು. ತಡೆಯಲಾರದ ಬಿಸಿಲ ಧಗೆಗೆ ದೇಹ ಮನಸ್ಸು ತಂಪಿಗಾಗಿ ಹಪಾಹಪಿಸುವಂತಾಗುತ್ತದೆ. ಹಿತ್ತಲಲ್ಲೇ ಇರುವ ಹಸಿರು ಸೊಪ್ಪುಗಳು, ಜೀರಿಗೆ, ಮಜ್ಜಿಗೆ ಇತ್ಯಾದಿ ಬಳಸಿ ತಯಾರಿಸುವ ಹಸಿರು ತಂಬುಳಿಗಳ ಸೇವನೆ ನಾಲಗೆಯ ರುಚಿಯನ್ನು ವೃದ್ಧಿಸುವುದರ ಜೊತೆಗೆ ಶರೀರವನ್ನೂ ತಂಪಾಗಿಸುತ್ತದೆ.

Advertisement

ಸಾಂಬಾರು ದೊಡ್ಡಪತ್ರೆ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: ಹೆಚ್ಚಿದ  ಸೊಪ್ಪು- ಅರ್ಧ ಕಪ್‌, ತೆಂಗಿನ ತುರಿ – ಒಂದು ಕಪ್‌, ಜೀರಿಗೆ – ಒಂದು ಚಮಚ, ಕಾಳುಮೆಣಸು – ಎಂಟು,  ಮಜ್ಜಿಗೆ – ಒಂದು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಬಾಣಲೆಗೆ ಒಂದು ಚಮಚ ತುಪ್ಪಹಾಕಿ ಕಾಳುಮೆಣಸನ್ನು ಹುರಿದುಕೊಂಡು ನಂತರ ಇದೇ ಬಾಣಲೆಯಲ್ಲಿ ಸಾಂಬಾರು ಸೊಪ್ಪನ್ನು  ಬಾಡಿಸಿಕೊಳ್ಳಿ. ಆರಿದ ಮೇಲೆ ಬಾಡಿಸಿದ ಸೊಪ್ಪನ್ನು  ಕಾಳುಮೆಣಸು, ಜೀರಿಗೆ, ತೆಂಗಿನತುರಿ, ಉಪ್ಪು$ ಹಾಗೂ ಸ್ವಲ್ಪ ಮಜ್ಜಿಗೆ ಜೊತೆ ಮಿಕ್ಸಿಜಾರಿನಲ್ಲಿ ನುಣ್ಣಗೆ ರುಬ್ಬಿ ಮಿಕ್ಸಿಂಗ್‌ ಬೌಲ್‌ನಲ್ಲಿ ಹಾಕಿ ಬೇಕಷ್ಟು ನೀರು ಹಾಗೂ ಉಳಿದ ಮಜ್ಜಿಗೆ ಸೇರಿಸಿ ತಂಬುಳಿಯ ಹದ ಮಾಡಿಕೊಂಡು ತುಪ್ಪದಲ್ಲಿ ಜೀರಿಗೆ ಒಗ್ಗರಣೆ ನೀಡಿ.

ಕಫ‌ ಕಡಿಮೆ ಮಾಡುವ ಕ್ರಿಮಿಹರವಾದ ಈ ತಂಬುಳಿಯ ಸೇವನೆ ಚಿಣ್ಣರಿಗಂತೂ ಬಹಳ ಉತ್ತಮ.

ನೆಲನೆಲ್ಲಿ ಸೊಪ್ಪು ತಂಬುಳಿ

Advertisement

ಬೇಕಾಗುವ ಸಾಮಗ್ರಿ: ನೆಲನೆಲ್ಲಿ ಸೊಪ್ಪು- ಒಂದು ಹಿಡಿ, ಕಾಳುಮೆಣಸು – ಆರು, ತೆಂಗಿನತುರಿ – ಅರ್ಧ ಕಪ್‌, ಮಜ್ಜಿಗೆ – ಒಂದು ಕಪ್‌, ಉಪ್ಪು ರುಚಿಗೆ. 

ತಯಾರಿಸುವ ವಿಧಾನ: ಸ್ವತ್ಛಗೊಳಿಸಿದ ಸೊಪ್ಪನ್ನು ಹೆಚ್ಚಿಕೊಂಡು ಸ್ವಲ್ಪ$ಮಜ್ಜಿಗೆ, ಉಪ್ಪು , ತೆಂಗಿನ ತುರಿ, ಕಾಳುಮೆಣಸಿನ ಜೊತೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಬೇಕಷ್ಟು ನೀರು ಹಾಗೂ ಉಳಿದ ಮಜ್ಜಿಗೆ ಬೆರೆಸಿ ತುಪ್ಪದಲ್ಲಿ ಕೆಂಪುಮೆಣಸು, ಜೀರಿಗೆ ಸೇರಿಸಿದ ಸಾಸಿವೆ ಒಗ್ಗರಣೆ ನೀಡಿದರೆ ತಂಬುಳಿ ರೆಡಿ.

      ಪಿತ್ತಶಮನಕಾರಿಯಾದ ಇದರ ಸೇವನೆಯಿಂದ ಹಸಿವು ವೃದ್ಧಿಸುವುದು ಹಾಗೂ ಕಾಮಾಲೆಗೆ ಬಹಳ ಉತ್ತಮ.

ದಾಸವಾಳ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ : ದಾಸವಾಳ ಸೊಪ್ಪು- ಒಂದು ಹಿಡಿ, ತೆಂಗಿನ ತುರಿ- ಅರ್ಧ ಕಪ್‌, ಜೀರಿಗೆ- ಒಂದು ಚಮಚ, ಮಜ್ಜಿಗೆ- ಒಂದು ಕಪ್‌, ಉಪ್ಪು  ರುಚಿಗೆ.

ತಯಾರಿಸುವ ವಿಧಾನ: ಹೆಚ್ಚಿದ ದಾಸವಾಳ ಸೊಪ್ಪನ್ನು ಬಾಣಲೆಯಲ್ಲಿ ಸ್ವಲ್ಪ ತುಪ್ಪಹಾಕಿಕೊಂಡು ಬಾಡಿಸಿಕೊಳ್ಳಿ. ಆರಿದಮೇಲೆ ಇದಕ್ಕೆ ತೆಂಗಿನ ತುರಿ, ಜೀರಿಗೆ, ಉಪ್ಪು ಮತ್ತು ಸ್ವಲ್ಪ ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು, ಮಜ್ಜಿಗೆ ಸೇರಿಸಿ ತಂಬುಳಿ ಹದ ಮಾಡಿಕೊಂಡು ಸಾಸಿವೆ ಒಗ್ಗರಣೆ ನೀಡಿ.

ವಾತ, ಪಿತ್ತಹರವಾದ ತಂಪು ಗುಣದ ಈ ತಂಬುಳಿಯ ಸೇವನೆ ಬೇಸಿಗೆಗೆ ಬಹಳ ಹಿತ ನೀಡುವುದು. ಉಷ್ಣದಿಂದಾಗಿ ಪದೇಪದೆ ಕುರ, ಬೊಕ್ಕೆಗಳು ಬೀಳುವವರಿಗಂತೂ ಇದರ ಸೇವನೆ ಬಹಳ ಉತ್ತಮ

ಕೊತ್ತಂಬರಿ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: ಕೊತ್ತಂಬರಿ ಸೊಪ್ಪು- ಒಂದು ಹಿಡಿ, ತೆಂಗಿನ ತುರಿ – ಅರ್ಧ ಕಪ್‌, ಮಜ್ಜಿಗೆ – ಒಂದು ಕಪ್‌, ಕಾಳುಮೆಣಸು – ಆರು, ಜೀರಿಗೆ- ಒಂದು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಹೆಚ್ಚಿಕೊಂಡ ಸೊಪ್ಪನ್ನು ತೆಂಗಿನ ತುರಿ, ಕಾಳುಮೆಣಸು, ಉಪ್ಪು ಹಾಗೂ ಸ್ವಲ್ಪ ಮಜ್ಜಿಗೆ ಜೊತೆ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಉಳಿದ ಮಜ್ಜಿಗೆ ಸೇರಿಸಿ ಹದ ಮಾಡಿಕೊಂಡು ಜೀರಿಗೆ ಒಗ್ಗರಣೆ ನೀಡಿ.

ಸುವಾಸನಾಯುಕ್ತವಾದ ತಂಪುಗುಣದ ಈ ತಂಬುಳಿಯ ಸೇವನೆ ರಕ್ತಶುದ್ಧಿಗೆ, ಅಜೀರ್ಣಕ್ಕೆ ಬಹಳ ಉತ್ತಮ.

ಗೀತಸದಾ

Advertisement

Udayavani is now on Telegram. Click here to join our channel and stay updated with the latest news.

Next