ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಶಿಸ್ತು ಪ್ರಾಧಿಕಾರ ಕಾಯ್ದೆಯ ತಿದ್ದುಪಡಿ ವಿಚಾರದಲ್ಲಿ ಹೊರಡಿಸಿದ್ದ ರಾಜ್ಯ ಪತ್ರದಲ್ಲಿ ತಪ್ಪಾಗಿ ಪ್ರಕಟವಾಗಿದ್ದು, ಕೆಳದರ್ಜೆ ಪೊಲೀಸರಿಗೆ ಮೇಲ್ಮನವಿ ಸಲ್ಲಿಸದಂತೆ ಪ್ರಸ್ತಾವನೆಯಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಸಿಬ್ಬಂದಿ ಹಾಗೂ ಡಿವೈಎಸ್‌ಪಿ ಮಟ್ಟದ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳು ಶಿಸ್ತುಕ್ರಮ ಜರುಗಿಸಿದಾಗ ಮೇಲ್ಮನವಿ ಸಲ್ಲಿಸಿದಂತೆ ಗೃಹ ಇಲಾಖೆಯು ನಿಯಾಮಾವಳಿಯಲ್ಲಿ ತಿದ್ದುಪಡಿ ಮಾಡಿತ್ತು. ಇದಕ್ಕೆ ಪೊಲೀಸ್ ಸಿಬ್ಬಂದಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ ತನ್ನ ಆದೇಶಕ್ಕೆ ತಡೆ ನೀಡಿದೆ.
ಟ್ವೀಟ್‌ನಲ್ಲೇನಿದೆ ?: ಕರ್ನಾಟಕ ರಾಜ್ಯ ಪೊಲೀಸ್ ಕೆಎಸ್‌ಪಿ ಅಮೆಂಡ್‌ಮೆಂಟ್ ರೂಲ್ಸ್ -2022 ಡ್ರಾಫ್ಟ್ ರೂಲ್ಸ್ ಅನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ಮೇಲ್ಮನವಿ ಅವಕಾಶ ತೆಗೆದುಹಾಕುವ ಬಗ್ಗೆ ಹಲವು ಸಂದೇಶಗಳು ಓಡಾಡುತ್ತಿವೆ. ಕರಡು ಪ್ರತಿಯಲ್ಲಿ ಟೈಪಿಂಗ್ ದೋಷವಿರುವುದು ಕಂಡು ಬಂದಿದ್ದು, ಅದನ್ನು ಸರಿಪಡಿಸಲಾಗುತ್ತಿದೆ. ದೊಡ್ಡ ಹಾಗೂ ಸಣ್ಣ ಶಿಕ್ಷೆಗಳಿಗೆ ಮೇಲ್ಮನವಿ ತೆಗೆದುಹಾಕುವಂತಹ ಯಾವುದೇ ಪ್ರಸ್ತಾಪವಿಲ್ಲ. ಸರ್ಕಾರವು ಮುಂದಿನ ದಿನಗಳಲ್ಲಿ ಸರಿಯಾದ ಆವೃತ್ತಿಯನ್ನು ಪ್ರಕಟಿಸುವವರೆಗೆ ಕಾಯುವಂತೆ ವಿನಂತಿಸಲಾಗಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ.