Advertisement

ಡ್ರಗ್ಸ್ ವಿಚಾರದಲ್ಲಿ ನಮ್ಮದು ಜೀರೋ ಟಾಲರೆನ್ಸ್: DGP ಪ್ರವೀಣ್ ಸೂದ್

06:55 PM Sep 08, 2020 | Hari Prasad |

ಉಡುಪಿ: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಸೆಲೆಬ್ರಿಟಿಗಳ ಡ್ರಗ್ಸ್ ದಂಧೆ ವಿಚಾರದಲ್ಲಿ ಪೊಲೀಸ್ ಇಲಾಖೆ ‘ಶೂನ್ಯ ಸಹನೆ’ಯನ್ನು (ಝೀರೋ ಟಾಲೆರೆನ್ಸ್) ಪ್ರದರ್ಶಿಸುತ್ತಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಅವರು ಹೇಳಿದ್ದಾರೆ.

Advertisement

ಉಡುಪಿಯ ಎಸ್ಪಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವೀಣ್ ಸೂದ್ ಅವರು ಡ್ರಗ್ಸ್ ದಂಧೆ ಕುರಿತಾಗಿ ತೂರಿಬಂದ ಪ್ರಶ್ನೆಗಳಿಗೆ ಈ ರೀತಿಯಾಗಿ ಉತ್ತರಿಸಿದರು.

ಡ್ರಗ್ಸ್ ನಿಯಂತ್ರಣದ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಬೆಂಗಳೂರಲ್ಲಿ ಕಳೆದ ಹತ್ತು ದಿನಗಳಿಂದ ಅನೇಕ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ನಮ್ಮ ಕಾರ್ಯಾಚರಣೆ ಕೇವಲ ಬೆಂಗಳೂರಿಗೆ ಮಾತ್ರವೇ ಸೀಮಿತವಾಗಿಲ್ಲ ಬೆಳಗಾಂ ಹುಬ್ಬಳ್ಳಿ ಚಿತ್ರದುರ್ಗ ಕರಾವಳಿ ಭಾಗದಲ್ಲೂ ಕಾರ್ಯಚರಣೆ ನಡೆಸಿದ್ದೇವೆ.

ಆದರೆ ಈಗ ಆಗಿರುವ ಕಾರ್ಯಾಚರಣೆಗಳಿಂದ ನಮಗೆ ಸಮಾಧಾನವಾಗಿಲ್ಲ. ಸಾಫ್ಟ್ ಡ್ರಗ್ಸ್, ನ್ಯಾಚುರಲ್ ಡ್ರಗ್ಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಎಲ್ಲವನ್ನೂ ನಿಯಂತ್ರಣ ಮಾಡ್ತೇವೆ ಎಂದು ಪ್ರವೀಣ್ ಸೂದ್ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಚಾಕಲೇಟ್ ಡ್ರಿಂಕ್ಸ್ ಗಳಲ್ಲೂ ಡ್ರಗ್ಸ್ ಮಿಕ್ಸ್ ಮಾಡಿ ಕೊಡ್ತಾರೆ ಎಂಬ ಮಾಹಿತಿ ಇಲಾಖೆಗೆ ಲಭಿಸಿದೆ. ಆದರೆ, ಎಲ್ಲಾ ಬಗೆಯ ಡ್ರಗ್ಸ್ ಬಗೆಗೂ ಕ್ರಮ ತೆಗೆದುಕೊಳ್ಳಲು ಐಜಿ – ಎಸ್.ಪಿ.ಗೆ ಸೂಚನೆ ನೀಡಿದ್ದೇನೆ ಮತ್ತು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿ ಫಲಿತಾಂಶ ತೋರಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

Advertisement

ನಮ್ಮ ರಾಜ್ಯಕ್ಕೆ ಮಾದಕ ವಸ್ತುಗಳು ಸಮುದ್ರಮಾರ್ಗ, ವಾಯು ಮಾರ್ಗ ಅಥವಾ ಭೂ ಮಾರ್ಗ ಹೀಗೆ ಎಲ್ಲಿಂದ ಬಂದರೂ ಮಟ್ಟ ಹಾಕುತ್ತೇವೆ.

ಸದ್ಯ ಕೋವಿಡ್ 19 ಕಾರಣದಿಂದ ಕಾಲೇಜುಗಳು ಬಂದ್ ಇವೆ. ಆದರೆ ಈಗಲೂ ಡ್ರಗ್ಸ್ ದಂಧೆ  ನಡೆಯುತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಈ ಕುರಿತಾಗಿ ಮುಖ್ಯಮಂತ್ರಿಗಳು ನಿನ್ನೆ ಸಭೆ ನಡೆಸಿ ಸೂಚನೆಯನ್ನೂ ಸಹ ನೀಡಿದ್ದಾರೆ ಎಂದು ಪ್ರವೀಣ್ ಸೂದ್ ಅವರು ಹೇಳಿದ್ದಾರೆ.

ಈ ಕಾರ್ಯಚರಣೆ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು ಮತ್ತು ಈಗಾಗಲೇ ಬೇರೆ ಕಡೆಯೂ ಕಾರ್ಯಾಚರಣೆ ನಡೆಸಲಾಗುತ್ತಿದೆ ಆದರೆ ಅವೆಲ್ಲಾ ಅಷ್ಟೊಂದು ಸುದ್ದಿಯಾಗಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು.

ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳ ಬಂಧನ ಇತ್ಯಾದಿ ವಿಚಾರಗಳನ್ನು ಬೆಂಗಳೂರು ಕಮಿಷನರ್ ಮಾತನಾಡುತ್ತಾರೆ. ಮತ್ತು ಇದೀಗ ತನಿಖೆ ಪ್ರಗತಿಯಲ್ಲಿರುವುದರಿಂದ ಓರ್ವ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯಾಗಿ ನಾನು ಮಾತನಾಡುವುದು ಸರಿಯಲ್ಲ, ಆದರೆ ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಲು ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮುಕ್ತ ಅವಕಾಶ ನೀಡಿದೆ ಎಂದು ಪ್ರವೀಣ್ ಸೂದ್ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next