ಚಿಕ್ಕಬಳ್ಳಾಪುರ: ಊಟ, ತಿಂಡಿ ಬಿಡಿ ಕನಿಷ್ಠ ಕುಡಿಯುವ ನೀರಿಲ್ಲದೇ ತೀವ್ರ ಅಸ್ವಸ್ಥರಾಗಿದ್ದ ವಯೋವೃದ್ಧನನ್ನು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸ್ಥಳೀಯ ನಗರಸಭೆ ಅಧಿಕಾರಿಗಳ ನೆರವಿನೊಂದಿಗೆ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ ನಂತರ ಚಿಕ್ಕಬಳ್ಳಾಪುರ ನಗರಸಭೆ ನಿರ್ವಹಿಸುತ್ತಿರುವ ರಾತ್ರಿ ವಸತಿ ರಹಿತರ ಆಶ್ರಮಕ್ಕೆ ದಾಖಲು ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಆಸ್ಪತ್ರೆಗೆ ತಂದು ಚಿಕಿತ್ಸೆ: ನಗರಸಭೆ ಸಮುದಾಯ ಸಂಘಟಕರಾದ ಹನುಮಂತರಾಯಪ್ಪ ಹಾಗೂ ಸ್ಥಳೀಯ ನಗರಸಭೆ ಸಿಬ್ಬಂದಿ ಕೂಡಲೇ ಬಾಲಾಜಿ ಚಿತ್ರ ಮಂದಿರ ಹಿಂಭಾಗ ತೆರಳಿ ಮಲಗಿದ್ದ ವೃದ್ಧ ನಾರಾಯಣಪ್ಪನನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ನಗರದ ವಾರ್ಡ್ 12 ರ ಬಾಪೂಜಿ ನಗರದಲ್ಲಿ ನಗರಸಭೆ ವತಿಯಿಂದ ನಡೆಸುತ್ತಿರುವ ಆಶ್ರಯ ತಂಗುದಾಣಕ್ಕೆ ಬಿಟ್ಟು ಬಂದಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ: ಅಸ್ವಸ್ಥ ರಾಗಿದ್ದ ನಾರಾಯಣಪ್ಪರನ್ನು ಜಿಲ್ಲಾ ಆಸ್ಪತ್ರೆಯ ತುರ್ತು ಘಟಕದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡ ಲಾಗಿದೆ. ಚಿಕಿತ್ಸೆ ನಂತರ ಚಿಕ್ಕಬಳ್ಳಾಪುರ ನಗರ ಸಭೆಯಿಂದ ನಿರ್ವಹಿಸುತ್ತಿರುವ ರಾತ್ರಿ ನಗರ ವಸತಿ ರಹಿತರ ಆಶ್ರಯ ತಂಗುದಾಣದಲ್ಲಿ ಪುನ ರ್ವಸತಿ ಕಲ್ಪಿಸಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿ ವೃದ್ಧಿ ಅಧಿಕಾರಿ ವೆಂಕಟಾಚಲಪತಿ ತಿಳಿಸಿದ್ದಾರೆ.
Advertisement
ಹೆತ್ತ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ವಯೋ ವೃದ್ಧರೊಬ್ಬರು ನಗರದ ಬಾಲಾಜಿ ಚಿತ್ರ ಮಂದಿರ ಹಿಂಭಾಗ ಊಟ, ತಿಂಡಿ ಇಲ್ಲದೇ ಮಲಗಿರುವ ಕುರಿತು ಸಾರ್ವಜನಿಕರಾದ ವಸಂತ್ ರಾಜ್ ಎಂಬುವರು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರು. ಕೂಡಲೇ ಜಿಲ್ಲಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶಾ ಕಚೇರಿಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವ್ಯವಸ್ಥಾಪಕ ವೆಂಕಟಾಚಲಪತಿಗೆ ವಿಷಯ ಮುಟ್ಟಿಸಿದ್ದರು.