Advertisement

ಭಕ್ತಿ ಉದ್ದೀಪನಗೊಳಿಸುವುದು ಶ್ರಾವಣ: ಅನ್ನಪೂರ್ಣತಾಯಿ

10:27 AM Jul 26, 2017 | |

ಬೀದರ: ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನದಿಂದ ಶ್ರಾವಣದ ಮೊದಲನೆ ಸೋಮವಾರ ಬೆಳಗ್ಗೆ “ಸಾಮೂಹಿಕ ಇಷ್ಟಲಿಂಗ’ ಪೂಜೆಯೊಂದಿಗೆ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು.

Advertisement

ವಚನ ಪಠಣ ಅಭಿಯಾನಕ್ಕೆ ಚಾಲನೆ ನೀಡಿದ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ಭಾರತೀಯ ಹಬ್ಬಗಳಲ್ಲಿ ಶ್ರಾವಣ ಸಂಭ್ರಮ ವಿಶೇಷ. ಉಳಿದೆಲ್ಲ ಹಬ್ಬಗಳು ಉಂಡು ಉಟ್ಟು ಸಂಭ್ರಮಿಸುವ ಹಬ್ಬಗಳಾದರೆ ಶ್ರಾವಣ ಭಕ್ತಿಯನ್ನು
ಉದ್ದೀಪನಗೊಳಿಸುವ ಮತ್ತು ಸತ್ಪಥದತ್ತ ಮುನ್ನಡೆಸುವ ಹಬ್ಬವಾಗಿದೆ. ಒಬ್ಬ ವ್ಯಕ್ತಿ ಶರಣನಾಗಿ ವಿಕಾಸ ಹೊಂದಲು ಈ ಮಾಸ ಪೂರಕ ಎಂದು ಹೇಳಿದರು.

ಶರಣನಾಗಲು ಮೂರು ಸೂತ್ರಗಳನ್ನು  ಳವಡಿಸಿಕೊಳ್ಳಬೇಕು. ಪ್ರತಿದಿನ ಲಿಂಗಪೂಜೆಯೇ ಸಂಭ್ರಮವಾಗಬೇಕು. ಜಂಗಮ (ಸಮಾಜಕ್ಕಾಗಿ) ದಾಸೋಹ ಗೈಯುವ ಸಂಭ್ರಮಿಯಾಗಬೇಕು. ಮತ್ತು ಅನುಭಾವ ಓದುವ ಮೂಲಕ ಭವ ಗೆಲ್ಲಬೇಕು. ಅಂತೆಯೇ 12ನೇ ಶತಮಾನದ ಶರಣರ ಅನುಭಾವ ಪೂರ್ಣವಾದ ವಚನಗಳನ್ನು ನಿರಂತರವಾಗಿ ಓದುವುದನ್ನು ರೂಢಿಗೊಳಿಸಲು 1999-2000 ರಿಂದ “ವಚನ ಪಠಣ ಅಭಿಯಾನ’ ಆರಂಭಿಸಲಾಗಿದೆ ಎಂದರು.

ಶ್ರಾವಣ ಮಾಸದಲ್ಲಿ ನಿತ್ಯ 108 ವಚನಗಳನ್ನು ಪಠಿಸುವ ನಿಯಮಕ್ಕೊಳಪಟ್ಟು ವಚನಗಳ ಅಧ್ಯಯನ ಮಾಡಬೇಕೆಂದು ಕರೆ ನಿಡಿದರು. ಅದರಂತೆ ಈಗಾಗಲೇ ಸಾವಿರಾರು ಕುಟುಂಬಗಳು ವಚನ ಪಠಣ ಅಧ್ಯಯನದಲ್ಲಿ ತೊಡಗಿವೆ.
ಕುಟುಂಬದ ಪ್ರತಿ ಸದಸ್ಯರು ಕಡ್ಡಾಯವಾಗಿ ವಚನಗಳನ್ನು ಓದಬೇಕು. ಇನ್ನು ವರ್ಷದ 365 ದಿನಗಳ ಕಾಲವೂ ಪ್ರತಿದಿನ ಐದು ವಚನ ಕಡ್ಡಾಯವಾಗಿ ಓದಬೇಕು. ಬದುಕಿನಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳಿಗೆ ವಚನಗಳಲ್ಲಿ
ಪರಿಹಾರವಿದೆ. ಅಂಥ ವಚನ ಓದಿ, ಅದರಂತೆ ಆಚರಿಸಿದವರ ಬದುಕು ಬಂಗಾರವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಪ್ರಾಣಲಿಂಗಾರ್ಚನೆಯ ವಿಧಾನವನ್ನು ರಮೇಶ ಮಠಪತಿಯವರು ತೋರಿಸಿಕೊಟ್ಟರು. ಪ್ರಭುದೇವರು ನೇತೃತ್ವ ವಹಿಸಿದ್ದರು. ಡಾ| ವಿಜಯಶ್ರೀ ಬಶೆಟ್ಟಿ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಕಾಂತ ಮಿರ್ಚೆ ಮತ್ತು ಬೀಜ ನಿಮಗದ ಸಹಾಯಕ ನಿರ್ದೇಶಕ ಶರಣಪ್ಪ ಚಿಮಕೊಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಲ್ಪನಾ ಬೀದೆ ವಚನ ಗಾಯನ ನಡೆಸಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next