ಜೇವರ್ಗಿ: ಧರ್ಮದ ಹೆಸರಿನಲ್ಲಿ ನಡೆಯುವ ಜಾತ್ರೆ, ವಿಶೇಷ ಪೂಜೆ, ಆಚರಣೆಗಳು ಮತ್ತು ಸಾಂಪ್ರದಾಯಗಳು ಜನರಲ್ಲಿ
ಭಕ್ತಿಭಾವ ಮತ್ತು ಸ್ನೇಹ ಸಂಬಂಧ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಆಂದೋಲಾದ ವಾಸುದೇವ
ಶಿವಯೋಗಿ ಸ್ವಾಮೀಜಿ ಹೇಳಿದರು.
ತಾಲೂಕಿನ ಆಂದೋಲಾ ಗ್ರಾಮದ ಶ್ರೀಲಿಂಗೇಶ್ವರರ 6ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಧರ್ಮಸಭೆ ಸಾನ್ನಿದ್ಯ ವಹಿಸಿ ಸ್ವಾಮೀಜಿ ಮಾತನಾಡಿದರು. ದೇವರು, ಧರ್ಮದ ಬಗ್ಗೆ ಇಲ್ಲಸಲ್ಲದ ಮಾತುಗಳು ಕೇಳಿಬರುತ್ತಿವೆ. ಇವರಿಗೆ ದೇವರ ಬಗ್ಗೆ ನಂಬಿಕೆ ಇಲ್ಲದಿದ್ದರೇ ಪರವಾಗಿಲ್ಲ. ಆದರೆ ಇನ್ನೊಬ್ಬರ ಭಾವನೆಗೆ ಧಕ್ಕೆ ತರುವುದು ತರವಲ್ಲ. ಯಾವುದೇ ವಿಚಾರಗಳನ್ನು ಒತ್ತಾಯ ಇಲ್ಲವೆ ಒತ್ತಡದಿಂದ ಅವರ ಮೇಲೆ ಹೇರುವುದು ಸೂಕ್ತವಲ್ಲ.
ಪ್ರತಿಯೊಬ್ಬ ಮನುಷ್ಯನ ಸಂಸಾರದಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೆ ಮಠ-ಮಂದಿರಗಳಿಗೆ ಹೋಗಿ ಶಾಂತಿ ಪಡೆಯುತ್ತಾರೆ. ಅಲ್ಲದೇ ಹಿರಿಯ ದಾರ್ಶನಿಕರು, ಸಂತರು, ಶರಣರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ನಡೆಯಬೇಕು. ಆದರ್ಶಗಳನ್ನು ತಮ್ಮ ಜೀವನದಲ್ಲಿ ಆಚರಣೆಗೆ ತಂದುಕೊಂಡರೆ ಸಹಜವಾಗಿಯೇ ಶಾಂತಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತದೆ.
ಆಂದೋಲಾದ ಲಿಂಗೇಶ್ವರರು ನೀಡಿರುವ ಸಂದೇಶ ಎಲ್ಲರೂ ಪಾಲಿಸಬೇಕು ಎಂದು ಹೇಳಿದರು. ಶಾಸಕ ಡಾ. ಅಜಯಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ, ಅಶೋಕ ಸಾಹು ಗೋಗಿ, ರಾಜಶೇಖರ ಸೀರಿ, ಗೌಡಪ್ಪಗೌಡ ಪೊಲೀಸ್ ಪಾಟೀಲ, ಸಂಗನಗೌಡ ಪಾಟೀಲ, ಯಶ್ವಂತ ಹೋತಿನಮಡು, ಚಂದ್ರಶೇಖರ ಬಡಿಗೇರ, ಗೋವಿಂದರೆಡ್ಡಿ ತುಳೇರ, ಮಲ್ಲಣ್ಣ ಲಕ್ಕಣ್ಣಿ, ಮಲ್ಲಿಕಾರ್ಜುನ ಹೊಸೂರ, ಅಲಿಮ್‌ಸಾಬ ಟಪ್ಪಾ, ಶಂಕರಗೌಡ ಪಾಟೀಲ, ಧನಲೀಮಗಯ್ಯ ಹಿರೇಮಠ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.