Advertisement

ಭಕ್ತಿಯಿಂದ ಪರಮಾತ್ಮನ ಸಾನ್ನಿಧ್ಯ ಸಾಧ್ಯ

12:53 PM Apr 30, 2017 | Team Udayavani |

ಹೊನ್ನಾಳಿ: ಪರಮಾತ್ಮನ ಸಾನ್ನಿಧ್ಯ ಹೊಂದಲು ಅತಿ ಸಮೀಪದ ದಾರಿ ಭಕ್ತಿ ಮಾರ್ಗವಾಗಿದೆ ಎಂದು ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಹೇಳಿದರು. ತಾಲೂಕಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ತೀರ್ಥರಾಮೇಶ್ವರ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. 

Advertisement

ನೀನು ಎಲ್ಲಿ ವಾಸ ಮಾಡುತ್ತೀಯ ಎಂದು ಪಾರ್ವತಿ ಪರಮೇಶ್ವರ ಆವರನ್ನು ಕೇಳಿದಾಗ ಭಕ್ತರು ಪ್ರೀತಿಯಿಂದ ಎಲ್ಲಿ ನನ್ನನ್ನು ಭಜಿಸುತ್ತಾರೆಯೋ ಅಲ್ಲಿಯೇ ನಾನು ನೆಲೆಸಿರುತ್ತೇನೆ ಎಂದು ಪರಮೇಶ್ವರ ಉತ್ತರಿಸುತ್ತಾನೆ. ಆದ್ದರಿಂದ  ಪರಶಿವನ ಸಾûಾತ್ಕಾರಕ್ಕೆ ಪೂಜೆ, ಭಜನೆ ಇತ್ಯಾದಿಗಳೇ ಸಾಧನಗಳಾಗಿವೆ.

ಅವುಗಳನ್ನು ಮನುಷ್ಯರು ಬಳಸಿಕೊಂಡು ಮೋಕ್ಷ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಭಕ್ತಿಯಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ಎಂಬುದಾಗಿ ಮೂರು ವಿಧಗಳಿವೆ. ರಾಜಸ ಭಕ್ತಿಗೆ ರಾವಣ ಅನ್ವರ್ಥನಾಗಿದ್ದಾನೆ. ತಾಮಸ ಭಕ್ತಿಗೆ ಭಸ್ಮಾಸುರ ಅನ್ವರ್ಥನಾಗಿದ್ದಾನೆ. ಆದರೆ, ಈ ಮೂರು ವಿಧಗಳ ಭಕ್ತಿಯಲ್ಲಿ ಭಗವಂತನಿಗೆ ಪ್ರಿಯವಾದುದು ಸಾತ್ವಿಕ ಭಕ್ತಿಯಾಗಿದೆ.

ಆದ್ದರಿಂದ, ಎಲ್ಲರೂ ಆತನಿಗೆ ಪ್ರಿಯವಾಗಿರುವ ಸಾತ್ವಿಕ ಭಕ್ತಿ ಮಾರ್ಗದಲ್ಲಿ ನಡೆದು ಮುಕ್ತಿ ಹೊಂದೋಣ ಎಂದು ಹೇಳಿದರು. ಪರಮಾತ್ಮ ಮನುಷ್ಯರಿಗೆ ಎಲ್ಲವನ್ನೂ ದಯಪಾಲಿಸಿದ್ದಾನೆ. ಆದರೆ, ಮೂರು ಮ ಕಾರಗಳನ್ನು  ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ. ಮರಣ, ಮಾರುತ ಮತ್ತು ಮಳೆ ಎಂಬುವುಗಳೇ ಆ ಮೂರು ಕಾರಗಳಾಗಿವೆ.

ಒಂದು ವೇಳೆ ಮಳೆ-ಗಾಳಿ, ಮರಣಗಳು ಮನುಷ್ಯನ ನಿಯಂತ್ರಣದಲ್ಲಿದ್ದರೆ ಜಗತ್ತಿನಲ್ಲಿ ಅಲ್ಲೋಲ-ಕಲ್ಲೋಲವಾಗುತ್ತಿತ್ತು. ಆದ್ದರಿಂದ, ತನ್ನ ಇತಿ- ಮಿತಿಗಳನ್ನರಿತು ಮನುಷ್ಯ ಉತ್ತಮ ಬಾಳ್ವೆ ನಡೆಸಬೇಕು ಎಂದು ತಿಳಿಸಿದರು. ದೇವಸ್ಥಾನಕ್ಕೆ ಕಳಸ ಇದ್ದರೆ ಚೆನ್ನ. ಕಳಸದಿಂದ ದೇವಸ್ಥಾನ ಭಕ್ತರನ್ನು ಆಕರ್ಷಿಸುತ್ತದೆ.

Advertisement

ಅಧ್ಯಾತ್ಮಿಕವಾಗಿಯೂ ಕಳಸಕ್ಕೆ ವಿಶಿಷ್ಟ ಸ್ಥಾನ ಇದೆ. ಭಕ್ತರು-ದೇವರ ಮಧ್ಯೆ ಸಂಪರ್ಕ ಕೊಂಡಿಯಂತೆ ದೇವಸ್ಥಾನದ ಕಳಸ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು. ಭೀಕರ ಬರಗಾಲದಿಂದ ನಾಡಿನ ಜನತೆ-ಜಾನುವಾರುಗಳು ತತ್ತರಿಸಿಹೋಗಿವೆ. ನಾವೆಲ್ಲರೂ ಭಗವಂತನಲ್ಲಿ ಉತ್ತಮ ಮಳೆ-ಬೆಳೆ ಕರುಣಿಸುವಂತೆ ಪ್ರಾರ್ಥಿಸೋಣ.

ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ, ನಾಡಿನೆಲ್ಲೆಡೆ ಸಮೃದ್ಧಿ ನೆಲೆಸಲಿ ಎಂದರು. ತೀರ್ಥರಾಮೇಶ್ವರಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಜಗದೀಶ್‌, ಉಪಾಧ್ಯಕ್ಷ ಬಿ.ಎಚ್‌. ಪ್ರಕಾಶ್‌, ಕಾರ್ಯದರ್ಶಿ ಸೋಮಸುಂದರ್‌ರಾಜ್‌ ಅರಸ್‌, ಖಜಾಂಚಿ ಎ.ಕೆ. ನಾಗರಾಜ್‌, ಸದಸ್ಯರಾದ ಎಂ.ಎಸ್‌. ಪ್ರಕಾಶ್‌ ಒಡೆಯರ್‌, ರಾಜು ತಳವಾರ್‌, ಚಂದ್ರಪ್ಪ, ಕೃಷ್ಣಮೂರ್ತಿ, ಎ.ಕೆ. ರಾಜು, ಹಾಲಪ್ಪ, ಶಿವು, ಮಂಜು, ಎ.ಕೆ. ಕರಿಬಸಪ್ಪ, ಪ್ರಭು, ವ್ಯವಸ್ಥಾಪಕ ರಂಗನಾಥ್‌ರಾಜ್‌ ಅರಸ್‌, ಹನುಮಂತಯ್ಯ ಮತ್ತಿತರರು ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next