Advertisement

ರಾಜಧಾನಿಯಲ್ಲಿ ಶ್ರದ್ಧಾ-ಭಕ್ತಿಯ ಬಸವ ಜಯಂತಿ

12:52 AM May 08, 2019 | Lakshmi GovindaRaj |

ಬೆಂಗಳೂರು: ಹನ್ನೆರಡನೆ ಶತಮಾನದಲ್ಲಿಯೇ ಸಮಾನತೆ ಸಾರಿದ ಸಮಾಜ ಸುಧಾರಕ ಬಸವೇಶ್ವರರ ಜಯಂತಿಯನ್ನು ನಗರ ವಿವಿಧೆಡೆ ಶ್ರದ್ಧಾ- ಭಕ್ತಿಯಿಂದ ಆಚರಿಸಲಾಯಿತು.

Advertisement

ಬಸವ ಜಯಂತಿ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ವೃತ್ತ ಹಾಗೂ ವಿವಿಧ ಬಡಾವಣೆಯಲ್ಲಿರುವ ಬಸವೇಶ್ವವರರ ಪ್ರತಿಮೆ, ಪುತ್ಥಳಿಗಳನ್ನು ಹೂವುಗಳಿಂದ ಸಿಂಗರಿಸಲಾಗಿತ್ತು. ಜಯಂತಿ ಆಚರಣೆ ವೇಳೆ ವಚನಗಳ ಗಾಯನ ಮೊಳಗಿದವು. ಬಸವೇಶ್ವರ ಸೇರಿ ಇತ್ಯಾದಿ ಶರಣರ ವಿಚಾರಗಳ ಕುರಿತ ಭಾಷಣ, ಚರ್ಚೆಗಳು ನಡೆದವು.

ಬಸವ ಸಮಿತಿ ವತಿಯಿಂದ ನಡೆದ “ಬಸವ ಜಯಂತಿ ಮತ್ತು ವಾರ್ಷಿಕ ಪ್ರಶಸ್ತಿ ಸಮಾರಂಭ’ಕ್ಕೆ ಆಗಮಿಸಿದ್ದ ರಾಜ್ಯಪಾಲ ವಿ.ಆರ್‌.ವಾಲಾ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಬೆಳಗ್ಗೆ 9.30ಕ್ಕೆ ಚಾಲುಕ್ಯವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ನಂತರ ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ರಾಮಯ್ಯ ವೃತ್ತದ ಸಮೀಪದ ಗುರು ಬಸವಣ್ಣ ಉದ್ಯಾನದಲ್ಲಿನ ಪುತ್ಥಳಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಲ್ಲೇಶ್ವರದ ಶಾಸಕ ಸಿ.ಎನ್‌.ಅಶ್ವಥನಾರಾಯಣ್‌ ಅವರು ಮಾಲಾರ್ಪಣೆ ಮಾಡಿದರು.

ಅಖೀಲ ಭಾರತ ವೀರಶೈವ ಮಹಾಸಭೆಯ ಬೆಂಗಳೂರು ನಗರ ಜಿಲ್ಲಾ ಘಟಕ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಘಟಕ, ಮಹಿಳಾ ಮತ್ತು ಯುವ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸದಾಶಿವನಗರದ ವೀರಶೈವ-ಲಿಂಗಾಯತ ಭವನದ ಹಾನಗಲ್‌ ಕುಮಾರಸ್ವಾಮಿಗಳ ಸಭಾಂಗಣದಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಎಸ್‌.ಸಚ್ಚಿದಾನಂದಮೂರ್ತಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೇಯರ್‌ ಗಂಗಾಂಬಿಕೆ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಸವ ಜಯಂತಿ ಕುರಿತು ಉಪನ್ಯಾಸ ನೀಡಿದ ಡಾ. ಶಾಲಿನಿಯವರು, ಬಸವೇಶ್ವರರು ಹಾಗೂ ಸಮಕಾಲೀನ ಶರಣರು ವಚನ ಮಾಧ್ಯಮದ ಮೂಲಕ ಪ್ರತಿಪಾದಿಸಿದ ಜಾತ್ಯಾತೀತ ಭಾವನೆ, ಸ್ತ್ರೀ ಸ್ವಾತಂತ್ರ್ಯ, ಅಸ್ಪೃಶ್ಯತೆ ನಿವಾರಣೆ, ಸಮಾನತೆ, ಕಾಯಕದ ಗೌರವ ಹಾಗೂ ದಾಸೋಹ ತತ್ವಗಳ ಕುರಿತು ಪ್ರಸ್ತಾಪ ಮಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಘಟದಕ ಅಧ್ಯಕ್ಷ ಎಸ್‌.ಗುರುಸ್ವಾಮಿ, ಬಿಬಿಎಂಪಿ ವೀರಶೈವ ಮಹಾಸಭೆ ಅಧ್ಯಕ್ಷ ಎಸ್‌.ಚಂದ್ರಮೌಳಿಯವರು ಉಪಸ್ಥಿತರಿದ್ದರು.

ವಚನ ಜ್ಯೋತಿ ಬಳಗದ ವತಿಯಿಂದ ವಿಜಯನಗರದ ಬಸವೇಶ್ವರ ವಿದ್ಯಾರ್ಥಿ ನಿಲಯದಲ್ಲಿ ಬಸವ ಉತ್ಸವ ನಡೆಯಿತು. ಕಾರ್ಯಕ್ರಮವನ್ನು ವಿದ್ವಾಂಸ ಡಾ.ಗೊ.ರು. ಚನ್ನಬಸಪ್ಪ ಉದ್ಘಾಟಿಸಿದರು. ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಮಂಡಳಿ ಅಧ್ಯಕ್ಷ ಜಯವಿಭವ ಸ್ವಾಮಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬಸವಣ್ಣನ ವಚನಗಳ ಸಂದೇಶ ಸಾರಿದರು.

ಮಂಜುನಾಥ ಸ್ವಾಮಿ ಟೆಂಪಲ್‌ ಟ್ರಸ್ಟ್‌ ರಾಜಾಜಿನಗರದಲ್ಲಿ ಬಸವೇಶ್ವರ ಅವರ ಭಾವಚಿತ್ರ ಮೆರವಣಿಗೆ, ವಾದ್ಯಗೋಷ್ಠಿ, ಮಕ್ಕಳ ವೇಷ ಭೂಷಣ ಸ್ಪರ್ಧೆ, ವಚನ ಗಾಯನ ಆಯೋಜಿಸಿತ್ತು. ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನವು ಕನ್ನಲ್ಲಿಯಲ್ಲಿ ಶಿವರಾತ್ರಿ ನಾಟಕ ಪ್ರದರ್ಶನ ಆಯೋಜಿಸಿತ್ತು.

ವೀರಶೈವ ಲಿಂಗಾಯತ ಬಳಗ ವತಿಯಿಂದ ಮಲ್ಲತ್ತಹಳ್ಳಿಯ ಅಕ್ಷಯ ಪಾರ್ಟಿ ಹಾಲ್‌ನಲ್ಲಿ ಬಸವಜಯಂತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಐಟಿಐ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಪಾರ್ಥಸಾರಥಿ, ಎಂಪಿಎಂ ಬಡಾವಣೆ ಕ್ಷೇಮಾಭಿವೃದ್ಧಿ ಅಧ್ಯಕ್ಷ ಹರಿಪ್ರಸಾದ್‌ ಆಗಮಿಸಿದ್ದರು.

ನಗರದ ವಿವಿಧೆಡೆ ಕ್ರಾಂತಿ ಪುರುಷನ ಮೆರವಣಿಗೆ: ವಚನ ಜ್ಯೋತಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವ ಉತ್ಸವ’ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 7ಕ್ಕೆ ವಿಜಯ ನಗರ ಮೆಟ್ರೋ ನಿಲ್ದಾಣದಿಂದ ಬಸವೇಶ್ವರ ವಿದ್ಯಾರ್ಥಿ ನಿಲಯದ ವರೆಗೆ ಕನ್ನಡ ಜಾನಪದ ತಂಡಗಳ ಅದ್ಧೂರಿ ಮೆರವಣಿಗೆ ಸಾಗಿತು.

ಬೆಳಗ್ಗೆ 8ಕ್ಕೆ ವೀರಶೈವ ಲಿಂಗಾಯತ ಬಳಗ ವತಿಯಿಂದ ಐ.ಟಿ.ಐ ಬಡಾವಣೆಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಬಸವೇಶ್ವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ಅಖೀಲ ಭಾರತ ವೀರಶೈವ ಮಹಾಸಭೆ ವತಿಯಿಂದ ಮಧ್ಯಾಹ್ನ 2 ಗಂಟೆಗೆ ಸದಾಶಿವನಗರದ ಭಾಷ್ಯಂ ವೃತ್ತದಿಂದ ಸದಾಶಿವನಗರದ ಮಹಾಸಭೆಯ ಕೇಂದ್ರ ಕಚೇರಿವರೆಗೂ ಜಗಜ್ಯೋತಿ ಬಸವೇಶ್ವರ,

ಜಗದ್ಗುರು ರೇಣುಕಾಚಾರ್ಯರ, ಹಾನಗಲ್‌ ಕುಮಾರೇಶ್ವರ ಹಾಗೂ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ವೀರಗಾಸೆ ಹಾಗೂ ಡೊಳ್ಳುಕುಣಿತ ಕಲಾತಂಡಗಳೊಂದಿಗೆ ಸಾಥ್‌ ನೀಡಿದವು. ಇನ್ನು ಭಾಗವಹಿದ್ದ ಭಕ್ತರು ಜೈಕಾರ ಕೂಗುತ್ತಾ ಸಾಗಿದರು.

Advertisement

Udayavani is now on Telegram. Click here to join our channel and stay updated with the latest news.

Next