Advertisement

ಭಕ್ತಿ, ಶ್ರದ್ಧೆ, ವಿಶ್ವಾಸದಿಂದ ದೇವರ ಅನುಗ್ರಹ: ಹೆಗ್ಗಡೆ

03:45 AM Feb 05, 2017 | Team Udayavani |

ಪುಂಜಾಲಕಟ್ಟೆ: ತುಳುನಾಡಿನಲ್ಲಿ ಕಳೆದ 25 ವರ್ಷಗಳಲ್ಲಿ ಅತಿಹೆಚ್ಚು ದೈವ-ದೇವಸ್ಥಾನಗಳು ಪುನರುತ್ಥಾನಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ.ದೇವರ ಮೇಲಿನ ಭಕ್ತಿ,ಶ್ರದ್ಧೆ,ವಿಶ್ವಾಸದಿಂದ ದೇವರ ಅನುಗ್ರಹ ವಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ನುಡಿದರು.

Advertisement

ಅವರು ಶನಿವಾರ ಬಂಟ್ವಾಳ ತಾಲೂಕಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ಧಾರ್ಮಿಕ ಮಾರ್ಗದರ್ಶನ ನೀಡಿದರು.
ಶ್ರದ್ಧಾ ಕೇಂದ್ರಗಳ ಉನ್ನತಿಯಾದಾಗ ಸಮಾಜದ ಉನ್ನತಿಯಾಗುತ್ತದೆ.

ದೇವರ ಮೇಲಿನ ವಿಶ್ವಾಸ,ಶ್ರದ್ಧೆ,ಭಕ್ತಿಯಿಂದ ಸತ್ಯ-ಧರ್ಮದ ಮಾರ್ಗದಲ್ಲಿ ಜೀವನ ನಡೆಸಿದಾಗ ದೇವರು ನಮ್ಮನ್ನು ರಕ್ಷಿಸುತ್ತಾರೆ.ದೃಢ ಸಂಕಲ್ಪ ಮತ್ತು ಅನಿಶ್ಚಿತತೆಯ ನಡುವೆ ಇರುವ ಅಂತರ ತೊಲಗಬೇಕು.ಗ್ರಾಮೀಣ ಪ್ರದೇಶದ ಜನರ ದಾನ ಧರ್ಮದ ಗುಣದ ಹೃದಯ ವೈಶಾಲ್ಯತೆ,ಶ್ರದ್ಧೆ,ಅಚಲ ವಿಶ್ವಾಸ ಅನನ್ಯವಾದುದು ಎಂದು ಹೇಳಿದರು.

ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿ ಮನುಷ್ಯನಲ್ಲಿರುವ ಸತ್ವ,ರಜ,ತಮೋ ಗುಣಗಳಲ್ಲಿ ಸತ್ವ ಗುಣ ಹೆಚ್ಚಾಗಿ ಉತ್ತಮ ಗುಣ ಹೊಂದುವಂತಾಗಲು ಮತ್ತು ತಮೋ ಗುಣ ಕಡಿಮೆಯಾಗಲು ಪ್ರತಿನಿತ್ಯ ಭಗವಂತನ ಪ್ರಾರ್ಥನೆ ಅಗತ್ಯಎಂದು ಹೇಳಿದರು.

ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದಲ್ಲಿ ಈ ಹಿಂದೆ ರಾಜಾಶ್ರಯ ಕೊನೆಗೊಂಡ ಬಳಿಕ ಕೇವಲ ಆರ್ಥಿಕ ಸ್ಥಿತಿವಂತರು ಮತ್ತು ಬಲಾಡ್ಯರಿಗೆ ಸೀಮಿತವಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇದೀಗ ಸಾಮಾಜಿಕ ಬದಲಾವಣೆಯಿಂದ ಜನಸಾಮಾನ್ಯರೂ ಆರ್ಥಿಕವಾಗಿ ಸ್ಥಿತಿವಂತರಾಗಿ ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಮಾಡಿ ಕೊಟ್ಟಿದೆ. ತುಳುನಾಡಿನಲ್ಲಿ ಜನರಿಗೆ ಅತಿ ಹೆಚ್ಚು ಭೂಮಿ ಹಂಚಿಕೆಯಾಗಿರುವ ಪ್ರದೇಶವಾಗಿದೆ.ಇದರಿಂದಾಗಿ ಇಲ್ಲಿನ ಧಾರ್ಮಿಕ ಕ್ಷೇತ್ರಗಳ ಪುನುರುತ್ಥಾನ ಸಾಧ್ಯವಾಗಿದೆ ಎಂದರು.

Advertisement

ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘು ಎಲ್‌.ಶೆಟ್ಟಿ ಅವರು ಮುಖ್ಯ ಅತಿಥಿಯಾಗಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ  ಎನ್‌.ಎಂ.ಅಡ್ಯಂತಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ಎ.ರಾಜೇಂದ್ರ ಶೆಟ್ಟಿ,ಕ್ಷೇತ್ರದ ತಂತ್ರಿ ಉದಯ ಪಾಂಗಣ್ಣಾಯ, ಪ್ರ.ಅರ್ಚಕ ಎ.ರಾಜಭಟ್‌ ಹುಣ್ಸೆಯಡಿ, ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಅಂತರ್ಜಾಲ(ವೆಬ್‌ಸೈಟ್‌)ನ್ನು ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಅನಾವರಣಗೊಳಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಜಗದೀಶ್‌ ಆಳ್ವ ಅಗ್ಗೊಂಡೆ ಅವರು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಲಕ್ಷ್ಮೀಧರ ಶೆಟ್ಟಿ ವಂದಿಸಿದರು. ಶರತ್‌ ಶೆಟ್ಟಿ ಪಡುಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next