Advertisement

ಭಕ್ತಿ, ಶ್ರದ್ಧೆಯಿಂದ ದೈವಾನುಗ್ರಹ: ಡಾ|ಹೆಗ್ಗಡೆ

04:30 AM May 18, 2019 | Sriram |

ಪುಂಜಾಲಕಟ್ಟೆ: ಮನುಷ್ಯನ ಭಕ್ತಿ, ಶ್ರದ್ಧೆಯ ಸಂಕಲ್ಪದೊಟ್ಟಿಗೆ ದೈವ, ದೇವರ ಅನುಗ್ರಹ ಇದ್ದಾಗ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ. ಕಕ್ಯಪದವಿನಲ್ಲಿ ವಿಶಿಷ್ಟ, ಸುಂದರ ಗರಡಿ ನಿರ್ಮಾಣವಾಗಿರುವುದು ಇಲ್ಲಿನ ಜನರ ಸಂಕಲ್ಪ ಶಕ್ತಿ ಮತ್ತು ದೈವಾನುಗ್ರಹಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಶುಕ್ರವಾರ 3 ಕೋಟಿ ರೂ. ವೆಚ್ಚದಲ್ಲಿ ತೌಳವ ದ್ರಾವಿಡ ಶೈಲಿಯಲ್ಲಿ, ಶಿಲಾಮಯವಾಗಿ ಪುನರ್ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಮೇ 17ರಿಂದ ಮೇ 22ರ ವರೆಗೆ ನಡೆಯಲಿರುವ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಪುರಾಣದ ದುಷ್ಟ-ಶಿಷ್ಟ ಪಾತ್ರಗಳು ನಮ್ಮ ವ್ಯಕ್ತಿತ್ವದೊಳಗಿದ್ದು, ಉತ್ತಮವಾದುದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು, ಧರ್ಮಕ್ಕೆ ವ್ಯತಿರಿಕ್ತರಾಗಿ ನಡೆಯುವವರು ಸಮಾಜ ಘಾತಕರಾಗುತ್ತಾರೆ. ಧರ್ಮನಿಷ್ಟರಾಗಿ ಸಮಾಜಮುಖೀ ಕಾರ್ಯಗಳ ಮೂಲಕ ಜನಪ್ರೀತಿ ಗಳಿಸಬಹುದು ಎಂದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ದೈವ, ದೇವಸ್ಥಾನಗಳಲ್ಲಿ ನಿತ್ಯ ಅನುಷ್ಠಾನಗಳಲ್ಲಿ ತೊಡಗಿಸಿಕೊಳ್ಳು ವುದರಿಂದ ಪುಣ್ಯ ಸಂಚಯವಾಗಿ ಉತ್ತಮ ಜ್ಞಾನ ದೊರೆಯುತ್ತದೆ ಎಂದರು.

ಮಾಜಿ ಸಚಿವ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ ಪ್ರಸ್ತಾವನೆಗೈದು, ದೈವ ದೇವಸ್ಥಾನಗಳ ಪುನರುತ್ಥಾನದಲ್ಲಿ ತೊಡಗುವುದು ಪುಣ್ಯ ಕಾರ್ಯ ಎಂದು ತಿಳಿಸಿದರು.

Advertisement

ಡಾ| ಹೆಗ್ಗಡೆ, ಬಿ. ರಮನಾಥ ರೈ ಮತ್ತು ವಾಸ್ತುಶಿಲ್ಪಿ ಪ್ರಮಲ್ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್‌, ಮೊಕ್ತೇಸರ ರಾಜವೀರ್‌ ಜೈನ್‌ ಬಾರ್ದಡ್ಡು ಗುತ್ತು, ಸಂಚಾಲಕರಾದ ಚಿತ್ತರಂಜನ್‌ ಕಂಕನಾಡಿ, ರೋಹಿನಾಥ ಪಾದೆ, ಕಾರ್ಯಾಧ್ಯಕ್ಷ ಬಿ. ಪದ್ಮಶೇಖರ ಜೈನ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್‌, ಪಾಂಡವರಕಲ್ಲು ಗರಡಿಯ ರತ್ನಕುಮಾರ್‌ ಆರಿಗ ನಾಯಿಲ, ಕಕ್ಯಬೀಡು ದುರ್ಗಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ಜಾರಪ್ಪ ಶೆಟ್ಟಿ ಖಂಡಿಗ ವೇದಿಕೆಯಲ್ಲಿದ್ದರು.

ಸಮಿತಿ ಉಪಾಧ್ಯಕ್ಷ ಕೆ. ಮೋನಪ್ಪ ಪೂಜಾರಿ ಕಂಡೆತ್ಯಾರು ಸ್ವಾಗತಿಸಿದರು, ರಾಜೀವ ಕೆ. ಸಮ್ಮಾನ ಪತ್ರ ವಾಚಿಸಿದರು, ಡಾ| ರಾಜರಾಂ ಕೆ.ಬಿ. ವಂದಿಸಿದರು, ಶಿಕ್ಷಕ ಬಿ. ರಾಮಚಂದ್ರ ರಾವ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next