ಮಂಡ್ಯ/ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಇದೇ ಮೊದಲ ಬಾರಿ ನಡೆದ ಮಹಾ ಪುಷ್ಕರಕ್ಕೆ ಸಾಧು ಸಂತರು ಸೇರಿದಂತೆ ಸಹಸ್ರಾರು ಭಕ್ತರು ನದಿಯಲ್ಲಿ ಮಿಂದೇಳುವ ಮೂಲಕ ಸಾಕ್ಷಿಯಾದರು. ಮಂಗಳವಾರ ಬೆಳಗ್ಗೆ 7.20ರ ವೇಳೆಗೆ ಗುರು ತುಲಾ ರಾಶಿಗೆ ಪ್ರವೇಶ ಮಾಡುವ ಕಾವೇರಿ ಪುಷ್ಕರ ಕಾಲದಲ್ಲಿ ವಿವಿಧ ಮಠಾಧೀಶರು, ಸಾಧು-ಸಂತರು, ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಬಳಿಕ ವಿಶೇಷ ಆರತಿ ಮಾಡಿ ಬಾಗಿನ ಸಮರ್ಪಿಸಿದರು. ಈ ಪುಣ್ಯ ಕಾಲದಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ ಪಾಪನಾಶವಾಗುತ್ತದೆ ಎಂಬ ನಂಬಿಕೆ ಮೇರೆಗೆ ಸಾವಿರಾರು ಭಕ್ತರು ನದಿಯಲ್ಲಿ ಮಿಂದೆದ್ದು ಪುನೀತರಾದರು.
12 ವರ್ಷಗಳಿಗೊಮ್ಮೆ ತುಲಾ ರಾಶಿಗೆ ಗುರು ಪ್ರವೇಶ ಮಾಡುತ್ತಿರುವುದರಿಂದ ಐತಿಹಾಸಿಕ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಮಹಾ ಪುಷ್ಕರ ಮಹೋತ್ಸವದಲ್ಲಿ ಒಂದೇ ದಿನ 50 ಸಾವಿರಕ್ಕೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದರು. ಮಂಗಳವಾರ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾವೇರಿ ನದಿಗೆ ಆರತಿ ಪೂಜೆ ನಡೆಯಿತು.
ಬೆಂಗಳೂರು, ತುಮಕೂರು, ಮಂಡ್ಯ ಮತ್ತಿತರ ಜಿಲ್ಲೆಗಳು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶದಿಂದ ಭಕ್ತರು ಸೋಮವಾರ ಸಂಜೆಯೇ ಶ್ರೀರಂಗಪಟ್ಟಣಕ್ಕೆ ಆಗಮಿಸಿ ಠಿಕಾಣಿ ಹೂಡಿದ್ದರು. ಪುಷ್ಕರ ಸ್ನಾನಕ್ಕೆ ಶ್ರೀರಂಗಪಟ್ಟಣದ ಗೋಸಾಯಿಘಾಟ್, ಶ್ರೀ ನಿಮಿಷಾಂಬ ದೇವಸ್ಥಾನ, ಶ್ರೀರಂಗನಾಥ ಸ್ವಾಮಿ ದೇವಾಲಯ ಮುಂಭಾಗದ ಸ್ನಾನಘಟ್ಟ ಮತ್ತು ಪಶ್ಚಿಮವಾಹಿನಿಯ ಸ್ನಾನ ಘಟ್ಟಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ವಿವಿಧೆಡೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಬ್ರಹ್ಮಕುಂಡಕ್ಕೆ ವಿಶೇಷ ಪೂಜೆ:
ಕೊಡಗಿನ ಭಾಗಮಂಡಲದಿಂದ ಶ್ರೀರಂಗಪಟ್ಟಣಕ್ಕೆ ಕಮಂಡಲದಿಂದ ತರಲಾಗಿದ್ದ ಕಾವೇರಿ ಪೂರ್ಣಕುಂಭವನ್ನು ಶ್ರೀರಂಗನಾಥ ಸ್ವಾಮಿ ದೇವಾಲಯದ ಸ್ನಾನಘಟ್ಟದ ವೇದಿಕೆಗೆ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಅವಿಚಿನ್ನ ಪರಂಪರೆ, ಪೂರಿ ಮತ್ತು ದ್ವಾರಕಾ ಶಿಷ್ಯರು, ಶ್ರೀ ಆನಂದ ಸರಸ್ವತಿ, ಗಣೇಶ ಧನಪಾಠಿ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಗೋಪಾಲ್, ಗೋವಿಂದ ಭಟ್ ಸೇರಿದಂತೆ ಪ್ರಮುಖರು ಪುಷ್ಕರ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕಾವೇರಿ ನದಿಯಲ್ಲಿ ಇದೇ ಮೊದಲ ಬಾರಿ ನಡೆದ ಮಹಾ ಪುಷ್ಕರದಲ್ಲಿ ಸಾಧು ಸಂತರು ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.