ಹನೂರು (ಚಾಮರಾಜನಗರ): ಸಾಲೂರು ಬೃಹನ್ಮಠದ ಉತ್ತರಾಧಿಕಾರಿ ಆಯ್ಕೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಒಂದೆಡೆ ನಾಗೇಂದ್ರ ಎಂಬ ವಟುವಿಗೆ ಪಟ್ಟಾಭಿಷೇಕ ನಡೆಸಲು ಸಿದ್ಧತೆಗಳನ್ನು ಆರಂಭಿಸಿದ್ದರೆ ಮತ್ತೊಂದೆಡೆ ನಾಗೇಂದ್ರ ಆಯ್ಕೆಯನ್ನು ಖಂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುತ್ತಿದೆ.
ಏನಿದು ಸಮಸ್ಯೆ: ಶ್ರೀ ಕ್ಷೇತ್ರ ಮಲೆ ಮಹದೇಶ್ವರದ ಸಾಲೂರು ಬೃಹನ್ಮಠವು ಐತಿಹಾಸಿಕ ಹಿನ್ನೆಲೆಯುಳ್ಳ ಮಠವಾಗಿದ್ದು, ಈ ಮಠದಲ್ಲಿ ಹಿರಿಯ ಶ್ರೀಗಳಾಗಿ ಪಟ್ಟದ ಗುರುಸ್ವಾಮಿಗಳು ಮತ್ತು ಕಿರಿಯ ಶ್ರೀಗಳಾಗಿ ಇಮ್ಮಡಿ ಮಹದೇವ ಸ್ವಾಮಿ ಕಾರ್ಯನಿರ್ವಹಿಸುತ್ತಿದ್ದರು. ಈ ಪೈಕಿ ಇಮ್ಮಡಿ ಮಹದೇವ ಸ್ವಾಮಿ ಸುಳ್ವಾಡಿ ವಿಷಪ್ರಸಾದ ಪ್ರಕರಣದಲ್ಲಿ ಸಿಲುಕಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದಾನೆ. ಇತ್ತ ಹಿರಿಯ ಶ್ರೀಗಳಾದ ಪಟ್ಟದ ಗುರುಸ್ವಾಮಿಗಳ ಆರೋಗ್ಯದಲ್ಲಿ ಆಗಾಗ್ಗೆ ಏರುಪೇರಾಗುತ್ತಿರುವ ಹಿನ್ನೆಲೆ ಮಠದ ಜವಾಬ್ದಾರಿ ನಿರ್ವಹಿಸುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಮಾಡಬೇಕೆಂಬ ಪ್ರಸ್ತಾಪವಾದ ಹಿನ್ನೆಲೆ ಸುತ್ತೂರು ಶ್ರೀಗಳ ಮಾರ್ಗದರ್ಶನದಲ್ಲಿ ಉತ್ತರಾಧಿಕಾರಿ ಆಯ್ಕೆ ಸಂಬಂಧ 9 ಜನ ಸದಸ್ಯರ ಮೇಲುಸ್ತುವಾರಿ ಸಮಿತಿ ರಚಿಸಲಾಯಿತು. ಈ ಸಮಿತಿ 2-3ಬಾರಿ ಸಭೆ ನಡೆಸಿದರೂ ಮಠದ ಭಕ್ತಾದಿಗಳಲ್ಲಿ ಒಮ್ಮತ ಮೂಡದಿದ್ದ ಹಿನ್ನೆಲೆ ಮತ್ತು ಸುಳ್ವಾಡಿ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಉತ್ತರಾಧಿಕಾರಿ ಆಯ್ಕೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿತ್ತು.
ಉತ್ತರಾಧಿಕಾರಿಯಾಗಿ ನಾಗೇಂದ್ರ ಆಯ್ಕೆ: ಈ ಬೆನ್ನಲ್ಲೇ ಉತ್ತರಾಧಿಕಾರಿ ಆಯ್ಕೆ ಮತ್ತು ಮೇಲುಸ್ತುವಾರಿ ಸಮಿತಿಯು ಜುಲೈ 28ರಂದು ಸಭೆ ಸೇರಿ ಮಠದ ಉತ್ತರಾಧಿಕಾರಿಯಾಗಿ ಬಂಡಳ್ಳಿ ಗ್ರಾಮದ ಮಹದೇವಪ್ಪ ಮತ್ತು ಸುಂದ್ರಮ್ಮನವರ ಜೇಷ್ಠ ಪುತ್ರನಾದ ನಾಗೇಂದ್ರ ಎಂಬ ವಟುವಿನ ಆಯ್ಕೆಯನ್ನು ಅಂತಿಮಗೊಳಿಸಿ ವರದಿ ಸಲ್ಲಿಸಿತ್ತು. ಇದಾದ ಬಳಿಕ ಉತ್ತರಾಧಿಕಾರಿ ಆಯ್ಕೆ ಸಂಬಂಧ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನೂ ಸಹ ಆ.3ರಂದು ಘನ ನ್ಯಾಯಾಲಯ ರದ್ದುಗೊಳಿಸಿತ್ತು. ಈ ಹಿನ್ನೆಲೆ ಮಠದ ಉತ್ತರಾಧಿಕಾರಿಯಾಗಿ ನಾಗೇಂದ್ರ ಎಂಬ ವಟುವಿಗೆ ಪಟ್ಟಾಭಿಷೇಕ ನೆರವೇರಿಸಲು ಸಕಲ ಸಿದ್ಧತೆಗಳನ್ನೂ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.
ನಾಗೇಂದ್ರ ಆಯ್ಕೆ ಖಂಡಿಸಿ ಪ್ರತಿಭಟನೆಗೆ ತೀರ್ಮಾನ: ಅತ್ತ ಸಾಲೂರು ಮಠದಲ್ಲಿ ನಾಗೇಂದ್ರರ ಪಟ್ಟಾಭಿಷೇಕಕ್ಕೆ ಸಿದ್ಧತೆ ಕೈಗೊಂಡಿದ್ದರೆ ಇತ್ತ ಭಕ್ತರ ಗುಂಪೊಂದು ಮಠದ ಮುಂಭಾಗ ಪ್ರತಿಭಟನೆ ಕೈಗೊಂಡಿದ್ದಾರೆ. ಈ ಹಿಂದೆ ಉತ್ತರಾಧಿಕಾರಿ ಆಯ್ಕೆ ಸಂಬಂಧ ಸಭೆಗಳು ನಡೆದಿದ್ದಾಗ ಹಾಲಿ ಇರುವ ಇಬ್ಬರು ಶ್ರೀಗಳ ಸಂಬಂಧಿಕರನ್ನು ಹೊರತುಪಡಿಸಿ 3ನೇ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಇದೀಗ ಆಯ್ಕೆ ಸಮಿತಿಯವರು ಭಕ್ತರ ಮನವಿಯನ್ನು ಪರಿಗಣಿಸದೆ ನಾಗೇಂದ್ರ ಎಂಬಾತನಿಗೆ ಪಟ್ಟಾಭಿಷೇಕ ನಡೆಸಲು ಮುಂದಾಗಿರುವುದು ನಿಯಮ ಬಾಹಿರ. ಅಲ್ಲದೆ ಆಯ್ಕೆ ಸಮಿತಿಯು ನೀಡಿರುವ ವರದಿಯಲ್ಲಿ 9 ಸದಸ್ಯರ ಪೈಕಿ ಕೇವಲ 7 ಸದಸ್ಯರು ಮಾತ್ರ ಸಹಿಹಾಕಿದ್ದು ಗುಂಡ್ಲುಪೇಟೆ ಶಾಸಕ ನಿರಂಜನ್‍ಕುಮಾರ್ ಮತ್ತು ಹನೂರು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರು ಸಹಿ ಹಾಕಿಲ್ಲ, ಆದುದರಿಂದ ಕೂಡಲೇ ನಾಗೇಂದ್ರರ ಪಟ್ಟಾಭಿಷೇಕ ತೀರ್ಮಾನವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸಾಲೂರು ಮಠದ ಮುಂಭಾಗ ಪ್ರತಿಭಟನೆ ನಡೆಸಲು ಜಮಾಯಿಸಿದ್ದಾರೆ.