Advertisement

‘ಭಕ್ತರ ಹಣ ದೇವಸ್ಥಾನದ ಅಭಿವೃದ್ಧಿಗೆ ವಿನಿಯೋಗ’

03:05 AM Jul 05, 2017 | Team Udayavani |

ವೇಣೂರು: ಸರಕಾರದ ಆದೇಶದಂತೆ ದೇಗುಲದ ಆಡಳಿತವನ್ನು ಯಾವುದೇ ಭತ್ತೆ ಇಲ್ಲದೆ ಕಳೆದ 2 ವರ್ಷದಿಂದ ನಡೆಸಿದ್ದೇನೆ. ಈ ಪುಣ್ಯದ ಕೆಲಸದಿಂದ ನೆಮ್ಮದಿಯೂ ದೊರಕಿದೆ. ಇಲ್ಲಿನ ದೇಗುಲದ ಯಾವುದೇ ಆದಾಯ ಸರಕಾರದ ಖಜಾನೆಗೆ ಸೇರಿಲ್ಲ. ಭಕ್ತರ ಹಣವನ್ನು ದೇಗುಲದ ಅಭಿವೃದ್ಧಿಗಾಗಿಯೇ ವಿನಿಯೋಗಿಸಲಾಗುತ್ತಿದೆ ಎಂದು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿಕಟಪೂರ್ವ ಆಡಳಿತಾಧಿಕಾರಿ ಕೆ. ಜಯಕೀರ್ತಿ ಜೈನ್‌ ಧರ್ಮಸ್ಥಳ ಹೇಳಿದರು. ಅವರು ಸೋಮವಾರ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಯ್ಕೆಯಾದ ನೂತನ ವ್ಯವಸ್ಥಾಪನ  ಸಮಿತಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.

Advertisement

ಕ್ಷೇತ್ರದ ಅಭಿವೃದ್ಧಿಗೆ ರಾಜಕೀಯರಹಿತವಾಗಿ ಸಹಕಾರ ನೀಡುವವರು ಇಲ್ಲಿದ್ದಾರೆ. ಇದರಿಂದ ದೇಗುಲದ ಸುಧಾರಣೆಗೆ ಅವಕಾಶ ಸಿಕ್ಕಿದೆ. ಸರಕಾರದ ಸೂಚನೆಯಂತೆ ಸಿಸಿಟಿವಿ, ಸಿಡಿಲು ನಿರೋಧಕ ಉಪಕರಣ ಅಳವಡಿಸಲಾಗಿದೆ. ವ್ಯವಸ್ಥಿತ ಕಚೇರಿ, ಅಡುಗೆ ಪಾತ್ರೆ, ಅಡುಗೆ ಶೆಡ್‌ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಮುಂದಿನ ವ್ಯವಸ್ಥಾಪನ ಸಮಿತಿ ದೇಗುಲದ ಜೀರ್ಣೋದ್ಧಾರ ಸಮಿತಿ ರಚನೆಗೆ ಒತ್ತು ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಳದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಮಾತನಾಡಿ, ದೇಗುಲದ  ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದವರೇ ವ್ಯವಸ್ಥಾಪನ ಸಮಿತಿಗೆ ಆಯ್ಕೆಯಾಗಿರುವುದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದವರು ತಿಳಿಸಿದರು.

ಸಮ್ಮಾನ
ಕಳೆದ ಎರಡು ವರ್ಷಗಳಿಗೆ ದೇಗುಲದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕೆ. ಜಯಕೀರ್ತಿ ಜೈನ್‌ ಧರ್ಮಸ್ಥಳ ಅವರನ್ನು ನೂತನ ವ್ಯವಸ್ಥಾಪನ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು. ವ್ಯವಸ್ಥಾಪನ ಸಮಿತಿ ನೂತನ ಅಧ್ಯಕ್ಷ ಭಾಸ್ಕರ ಬಲ್ಯಾಯ, ಪ್ರಧಾನ ಅರ್ಚಕ ಟಿ. ವಿಷ್ಣುಮೂರ್ತಿ ಭಟ್‌, ಸದಸ್ಯರಾದ ಸತೀಶ್‌ ಹೆಗ್ಡೆ, ಶಶಿಧರ ಶೆಟ್ಟಿ, ಶಿವಪ್ರಭಾ ರಾವ್‌, ವಿಮಲಾ ಚಂದ್ರ ಕೋಟ್ಯಾನ್‌ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯ ಅಶೋಕ್‌ ಪಾಣೂರು ಸ್ವಾಗತಿಸಿ ದೇಗುಲದ ಸಿಬಂದಿ ಕೊರಗಪ್ಪ ಎಂ. ವಂದಿಸಿದರು. ಭಾಸ್ಕರ  ಪೂಜಾರಿ ನಾಯರ್ಮೆರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next