ಮಧುಗಿರಿ: ಐತಿಹಾಸಿಕ ಶ್ರೀ ದಂಡಿನ ಮಾರಮ್ಮ ದೇವರ ಜಾತ್ರೆಯಲ್ಲಿ ಕೋಣ ಬಲಿಗೆ ಒತ್ತಾಯಿಸಿ ಭಕ್ತರು ದೇಗುಲಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ದೇಗುಲದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ. ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಚಕ್ರ ಶಕ್ತಿಸ್ವರೂಪಿ ಶ್ರೀ ದಂಡಿನ ಮಾರಮ್ಮನ ಜಾತ್ರೆಯಲ್ಲಿ ಕೋಣ ಬಲಿ ಸಂಪ್ರದಾಯ ಹಿಂದಿನಿಂದಲೂ ಪಾಲಿಸಲಾಗುತಿತ್ತು. ದೇಗುಲ ಈಗ ಮುಜರಾಯಿ ಇಲಾಖೆಗೆ ಸೇರಿದ್ದು, ಧಾರ್ಮಿಕ ವಿಧಿಗಳು ಸರ್ಕಾರದ ಆದೇಶದಂತೆ ನಡೆಯುತ್ತಿದೆ.
ಆದರೂ ಗುಡಿಕಾರರು, ಪಣ್ಣೆ ರೈತರು ಹಾಗೂ ಸಾರ್ವಜನಿಕರ ನೆರವಿಲ್ಲದೆ ಜಾತ್ರೆ ನಡೆಯುವುದು ಕಷ್ಟ. ಕಳೆದ 3 ವರ್ಷದಿಂದ ಕೋಣ ಬಲಿಗೆ ಸರ್ಕಾರ ನಿರ್ಬಂಧ ಹೇರಿದೆ. ಇದರಿಂದ ಉಪವಿಭಾಗದಲ್ಲೇ ಮಳೆ, ಬೆಳೆಯಿಲ್ಲದೆ ಸಾಂಕ್ರಾಮಿಕ ರೋಗಗಳಿಂದ ಬಳಲುವಂತಾಗಿದೆ ಎಂಬುದು ಭಕ್ತರ ಅಭಿಪ್ರಾಯ. ಕೋಣ ಬಲಿಗೆ ಅವಕಾಶ ನೀಡುವಂತೆ ಕಳೆದ ಸಭೆಯಲ್ಲಿ ಒತ್ತಾಯಿಸಿದಾಗ ಸುಮ್ಮನಿದ್ದ ಅಧಿಕಾರಿಗಳು ಬುಧವಾರ ಮುಂಜಾನೆ ಕೋಣ ಬಲಿಗೆ ತಡೆಯೊಡ್ಡಿದ್ದು, ಇದರಿಂದ ರೋಸಿ ಹೋದ ಮಹಿಳಾ ಭಕ್ತರೇ ಜಾತ್ರೆ ನಡೆಸಲು ಬಿಡಲ್ಲ. ಇಲ್ಲೇ ಕೂರುವುದಾಗಿ ದೇಗುಲಕ್ಕೆ ಬೀಗ ಜಡಿದು ಕೂತರು.
ಅಧಿಕಾರಿಗಳು ತಬ್ಬಿಬ್ಬು: ಭಕ್ತರ ವರ್ತನೆಯಿಂದ ಅಧಿಕಾರಿಗಳು ತಬ್ಬಿಬ್ಟಾಗಿದ್ದು, ಕೋಣ ಹಿಡಿದು ಬಲಿಗೆ ಸಿದ್ಧಗೊಳಿಸಲು ಮುಂದಾದ ಭಕ್ತರನ್ನು ಚದುರಿಸಲು ಹರಸಾಹಸಪಟ್ಟರು. ಒಮ್ಮೆ ಲಾಠಿ ಬೀಸಲು ಮುಂದಾಗಿದ್ದು, ಮಹಿಳಾ ಭಕ್ತರೇ ರೊಚ್ಚಿಗೆದ್ದು, ದೇಗುಲಕ್ಕೆ ಬೀಗ ಜಡಿದರು.
ತಹಶೀಲ್ದಾರ್, ಡಿವೈಎಸ್ಪಿ ಮಾತಿಗೂ ಬಗ್ಗದ ಭಕ್ತರು: ಮುಂಜಾನೆ 4ಕ್ಕೆ ನಡೆಯಬೇಕಿದ್ದ ಬಲಿ ಧಾರ್ಮಿಕ ಕಾರ್ಯ ಬೆಳಗ್ಗೆ 9 ಗಂಟೆಯಾದರೂ ನಡೆದಿರಲಿಲ್ಲ. ಮಹಿಳಾ ಭಕ್ತರು ಬಲಿಗೆ ಅವಕಾಶ ನೀಡುವಂತೆ ಘೋಷಣೆ ಕೂಗುತ್ತಿದ್ದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಡಾ. ವಿಶ್ವನಾಥ್, ಡಿವೈಎಸ್ಪಿ ಸೂರ್ಯನಾರಾಯಣ್ ರಾವ್, ಭಕ್ತರನ್ನು ಮನವೊಲಿಸಲು ಮಾಡಿದ ಪ್ರಯತ್ನವೆಲ್ಲ ವಿಫಲವಾಯ್ತು. ಬಲಿಗೆ ಅವಕಾಶ ನೀಡದ ಮೇಲೆ ನಿತ್ಯ ಕಸಾಯಿಖಾನೆ ನಡೆಯಲು ಹೇಗೆ ಬಿಡುತ್ತೀರಾ?. ಎಲ್ಲರಿಗೂ ಒಂದೇ ನ್ಯಾಯ ಪಾಲಿಸಬೇಕು ಎಂದು ಆಗ್ರಹಿಸಿದರು. ಬಲಿಗೆ ಅವಕಾಶ ನೀಡದಂತೆ ಪಟ್ಟಣದ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎಂ.ವೈ.ಶಿವಕುಮಾರ್ ದೂರು ನೀಡಿದ್ದರಿಂದ ಅಧಿಕಾರಿಗಳು ಸಮ್ಮತಿ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಭಕ್ತರು ದೇವಿಯ ಉತ್ಸವ ಮೂರ್ತಿಯನ್ನೇ ರಸ್ತೆಯಲ್ಲಿಟ್ಟು ರಸ್ತೆ ತಡೆ ನಡೆಸಲು ಮುಂದಾದರು. ಭಕ್ತರ ಪ್ರಯತ್ನ ವಿಫಲಗೊಳಿಸಿದ ಪೊಲೀಸರು ಮನವೊಲಿಸಿ ವಾಪಸ್ ಕರೆತಂದರು.
ಭರವಸೆ ನೀಡಿದ ಉಪವಿಭಾಗಾಧಿಕಾರಿ: ಭಕ್ತರ ವರ್ತನೆಯಿಂದ ಕೊಂಚ ವಿಚಲಿತರಾದ ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ, ಬೆ.10.30ಕ್ಕೆ ಸ್ಥಳಕ್ಕೆ ಆಗಮಿಸಿ ಭಕ್ತರು ಹಾಗೂ ದೇಗುಲದ ಸಮಿತಿ ಮುಖ್ಯಸ್ಥರೊಂದಿಗೆ ಚರ್ಚಿಸಿದರು. ಕಾನೂನಾತ್ಮಕವಾಗಿ ಬಲಿಗೆ ಅವಕಾಶವಿಲ್ಲ. ನೀವೇ ಭಕ್ತರನ್ನು ಮನವೊಲಿಸಿ. ಮುಂದೆ ಈ ರೀತಿಯಾಗದಂತೆ ಕ್ರಮವಹಿಸುತ್ತೇನೆ. ಈ ಬಾರಿ ಜಾತ್ರಾ ಮಹೋತ್ಸವ ನಡೆಯಲು ಅವಕಾಶ ನೀಡುವಂತೆ ಭಕ್ತರಲ್ಲಿ ಎಂದು ಮನವಿ ಮಾಡಿದರು ನಂತರ ಭಕ್ತರು ದೇಗಲದ ಬೀಗ ತಗೆದು ಆರತಿ ಸೇವೆ ನೆರವೇರಿಸಲಾಯಿತು.
ಸಿಪಿಐ ನದಾಫ್, ಪಿಎಸ್ಸೆ„ ಕಾಂತರಾಜು, ಪಾಲಾಕ್ಷ ಪ್ರಭು, ಹನುಮಂತರಾಯಪ್ಪ, ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು. ಪುರಸಭೆ ಮಾಜಿ ಅಧ್ಯಕ್ಷ ಗೋವಿಂದರಾಜು, ಸದಸ್ಯ ನರಸಿಂಹಮೂರ್ತಿ, ಶೋಭಾ ರಾಮು, ಮಾಜಿ ಸದಸ್ಯ ರಮೇಶ್, ಶ್ರೀನಿವಾಸ್, ಹಳ್ಳಿಕಾರರ ಮುಖಂಡ ತಿಮ್ಮೇಗೌಡ, ಪ್ರಧಾನ ಅರ್ಚಕ ನಾಗಲಿಂಗಾಚಾರ್, ಲಕ್ಷ್ಮೀಕಾಂತಾಚಾರ್, ಕಂದಾಯಾಧಿಕಾರಿ ಜಯರಾಂ, ಪಣ್ಣೆ ರೈತರು, ಊರಿನ ಪ್ರಮುಖರು, ಸಾವಿರಾರು ಭಕ್ತರಿದ್ದರು.
ಈ ಬಾರಿಯ ಬರಗಾಲ ಬರದಂತೆ ದೇವಿಗೆ ಬಲಿಯ ಅವಶ್ಯಕತೆಯಿದ್ದು, ಇದು ನಮ್ಮ ನಂಬಿಕೆ. ಇತರೆಡೆ ಪ್ರಾಣಿಬಲಿ ನಡೆದರೂ ಕ್ರಮವಿಲ್ಲ. ಆದರೆ ನಮ್ಮ ಸಂಸ್ಕೃತಿಗೆ ಯಾಕೆ ಅಡ್ಡಿ. ಮುಂದೆ ಇದು ಮರುಕಳಿಸಬಾರದು. ನಮ್ಮ ಸಂಪ್ರದಾಯವನ್ನು ಸರ್ಕಾರ ಗೌರವಿಸಬೇಕು.
-ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಧಾರ್ಮಿಕ ಮುಖಂಡ, ಮಧುಗಿರಿ
ದೇಗುಲದಲ್ಲಿ ಬಲಿ ಸಂಪ್ರದಾಯ ಹಿಂದಿನಿಂದ ನಡೆಸಿಕೊಂಡು ಬರಲಾಗುತಿತ್ತು. ವರ್ಷದಲ್ಲಿ ಒಮ್ಮೆ ನಡೆಯುವ ಸಂಪ್ರದಾಯ ತಪ್ಪಿದ್ದರಿಂದಲೇ ವಿವಿಧ ರೋಗಗಳು, ಬರಗಾಲ ಬಂದಿದೆ. ಒಮ್ಮೆ ಅವಕಾಶ ನೀಡಿದರೆ ಉಪವಿಭಾಗವೇ ಸುಭಿಕ್ಷವಾಗಿರುತ್ತದೆ.
-ಎಂ.ಎಸ್.ಚಂದ್ರಶೇಖರಬಾಬು, ಮಧುಗಿರಿ ಪುರಸಭೆ ಸದಸ್ಯ