ಚಿಕ್ಕಬಳ್ಳಾಪುರ: ಕಳೆದ ಎರಡೂವರೆ ತಿಂಗಳಿಂದ ನಾಲಿಗೆ ರುಚಿಗೆ ತಕ್ಕಂತೆ ಊಟ ಇಲ್ಲದೇ ಚಡಪಡಿಸುತ್ತಿದ್ದ ಗ್ರಾಹಕರು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಜಮಾಯಿಸಿದ್ದರು. ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಭಕ್ತಗಣ ವಿರಳ. ಕೈವಾರ ಮಠದಲ್ಲಿ ಮೊದಲ ದಿನವೇ ಅನ್ನ ದಾಸೋಹಕ್ಕೆ ಚಾಲನೆ.
ಎಲ್ಲೆಲ್ಲೂ ಸಾಮಾಜಿಕ ಅಂತರದ ಪಾಠ, ಮುಖಕ್ಕೆ ಮಾಸ್ಕ್, ಕೈಗೆ ಸ್ಯಾನಿಟೈಸರ್ ಬಳಕೆ ಕಡ್ಡಾಯ. ಹೌದು, ಮಹಾಮಾರಿ ಕೋವಿಡ್ 19 ಸೋಂಕು ನಿಯಂತ್ರಿಸುವ ದಿಸೆಯಲ್ಲಿ ಮಾ.24ರಿಂದ ಸತತವಾಗಿ ಜಾರಿ ಮಾಡಿದ್ದ ಲಾಕ್‌ಡೌನ್ ಜೂ.8ರಿಂದ ಕೇಂದ್ರ ಸರ್ಕಾರ ಸಡಿಲಿಸಿದ್ದರಿಂದ ಸೋಮವಾರ ಜಿಲ್ಲೆಯ ಹೋಟೆಲ್, ರೆಸ್ಟೋರೆಂಟ್ ದೇಗುಲಗಳ ಸಮೀಪ ಕಂಡು ಬಂದ ದೃಶ್ಯಗಳು ಇವು.
ಭಕ್ತ ವೃಂದದ ಕೊರತೆ: ಕೋವಿಡ್ 19 ಸೋಂಕು ದೇಶವನ್ನು ಬೆಚ್ಚಿಬೀಳಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಗಳು ಲಾಕ್‌ಡೌನ್ ತೆರವು ಮಾಡಿದ್ದು, ರೆಸ್ಟೋರೆಂಟ್, ಹೋಟೆಲ್‌ಗಳ ಪ್ರವೇಶಕ್ಕೆ ಹಾಗೂ ದೇವಾಲಯಗಳ ದರ್ಶನಕ್ಕೆ ಅವಕಾಶ ನೀಡಿದ್ದು, ಜಿಲ್ಲೆಯಲ್ಲಿ ದೇವರ ದರ್ಶನಕ್ಕೆ ಭಕ್ತ ವೃಂದದ ಕೊರತೆ ಎದ್ದು ಕಾಣುತ್ತಿತ್ತು.
ಥರ್ಮಲ್ ಸ್ಕ್ರೀನಿಂಗ್: ಅಪರೂಪಕ್ಕೆ ಬರುತ್ತಿದ್ದ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಯಾವುದೇ ಪೂಜೆ, ವಿಶೇಷ ಧಾರ್ಮಿಕ ಸೇವೆಗಳಿಗೆ ಅವಕಾಶ ಇರಲಿಲ್ಲ. ಭಕ್ತರಿಗೆ ಅರ್ಚಕರೇ ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ಉಷ್ಣಾಂಶ ತಪಾಸಣೆ ನಡೆಸಿ, ಕೈಗೆ ಸ್ಯಾನಿಟೈಸರ್ ಕೊಟ್ಟು ಒಳಗೆ ಬಿಡುತ್ತಿದ್ದರು. ಕೆಲವು ದೇವಾಲಯಗಳಲ್ಲಿ ಭಕ್ತರೇ ತೆಂಗಿನ ಕಾಯಿ ಹೊಡೆದು ಮಹಾಮಾರಿ ತೊಲಗಲಿ ಎಂದು ಪ್ರಾರ್ಥಿಸಿದರು. ನಂದಿ, ರಂಗಸ್ಥಳ, ನಗರದ ಜಾಲಾರಿ ಗಂಗಮ್ಮ ದೇವಾಲಯ, ಸಾಯಿ ಬಾಬಾ ಮಂದಿರಕ್ಕೆ ಭಕ್ತರು ವಿರಳವಾಗಿ ಆಗಮಿಸಿ ಭಕ್ತಿಭಾವ ಮೆರೆದರು.
ಕೈವಾರ ಮಠದಲ್ಲಿ ತಾತಯ್ಯನ ದರ್ಶನ ಬಳಿಕ ಅನ್ನದಾಸೋಹಕ್ಕೆ ಅವಕಾಶ ನೀಡಲಾಯಿತು. ಹೋಟೆಲ್, ರೆಸ್ಟೋರೆಂಟ್‌ಗಳು ಸೇವೆಗೆ ತೆರೆದುಕೊಳ್ಳುತ್ತಿದ್ದಂತೆ ಗ್ರಾಹಕರು ಊಟ, ತಿಂಡಿ, ಕಾಫಿ ಮತ್ತಿತರ ತಿಂಡಿ, ತಿನಿಸುಗಳಿಗೆ ಮುಗಿ ಬಿದ್ದಿದ್ದರು. ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಹೋಟೆಲ್ ಮಾಲೀಕರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಗ್ರಾಹಕರಿಗೆ ಟೇಬಲ್ ವ್ಯವಸ್ಥೆ ಮಾಡಿದ್ದರು. ಹೋಟೆಲ್ ಪ್ರವೇಶ ಮುನ್ನ ಗ್ರಾಹಕರಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ಬಳಿಕ ಕೈಗೆ ಸ್ಯಾನಿಟೈಸರ್ ಹಾಕುವ ದೃಶ್ಯಗಳು ಸಾಮಾನ್ಯವಾಗಿತ್ತು.
ಮೊದಲ ದಿನ ಗ್ರಾಹಕರು ನಿರೀಕ್ಷೆಯಂತೆ ಬಂದಿದ್ದರು. ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಹಾಕಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರಿಗೆ ಊಟ ಕೊಡಲಾಗಿದೆ.
-ಶ್ರೀಧರ್ ಕುಮಾರ್, ಹೋಟೆಲ್ ಅಂಬಾ ಭವಾನಿ