Advertisement

ಭಂಡಾರು ಜಾತ್ರೆಗೆ ಭಕ್ತರ ದಂಡು

02:10 PM Mar 06, 2020 | Suhan S |

ಚಿಕ್ಕೋಡಿ: ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಪ್ರಸಿದ್ಧ ಭಂಡಾರು ಜಾತ್ರೆ ಎಂದೇ ಕರೆಯಿಸಿಕೊಳ್ಳುವ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಶ್ರೀ ಅರಣ್ಯಸಿದ್ದೇಶ್ವರ-ಮಲಕಾರಿಸಿದ್ದೇಶ್ವರ ದೇವರ ಜಾತ್ರೆ ಅದ್ದೂರಿಯಿಂದ ಜರುಗಿತು. ಗುರುವಾರ ನಿವ್ವಾಳಕಿ ಮತ್ತು ದೇವವಾಣಿ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಭಂಡಾರ ಹಾರಿಸುವ ಮೂಲಕ ಭಕ್ತಿಭಾವ ಸಮರ್ಪಿಸಿದರು.

Advertisement

ಹಂಡ ಕುದರಿ ಪುಂಡ ಅರಣ್ಯಸಿದ್ಧಗ ಚಾಂಗಭಲೋ ಎಂಬ ದೇವವಾಣಿ ಸದ್ದಿನ ಮಧ್ಯೆ ಭಕ್ತರು ತಮ್ಮ ಆರಾಧ್ಯದೇವನಿಗೆ ಸಡಗರ ಸಂಭ್ರಮದಿಂದ ಹರಕೆ ತೀರಿಸಿದರು. ಜಾತ್ರೆಯ ಕೊನೆಯ ದಿನವಾದ ಗುರುವಾರ ನಿವ್ವಾಳಕಿ ಮತ್ತು ದೇವವಾಣಿ ಕಾರ್ಯಕ್ರಮದಲ್ಲಿ ಭಕ್ತಾದಿ ಗಳು ಆರಾಧ್ಯದೇವನಿಗೆ ಭಕ್ತಿಭಾವ ಸಮರ್ಪಿಸಿ ಭಂಡಾರದಲ್ಲಿ ಮಿಂದೆದ್ದರು.

ಬೃಹತ್‌ ಭಂಡಾರು ಜಾತ್ರೆಯಲ್ಲಿ ಶ್ರೀ ಅರಣ್ಯ ಸಿದ್ದೇಶ್ವರ ದೇವರ ಸನ್ನಿಧಿಗೆ ಗಡಿ ಭಾಗದ ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಮತ್ತು ದೇವರ ಪಲ್ಲಕ್ಕಿಗೆ ಭಂಡಾರ ಹಾಗೂ ಉತ್ತತ್ತಿ ಹಾರಿಸುವ ಮೂಲಕ ಹರಕೆ ತೀರಿಸಿ ಭಕ್ತಿಭಾವ ಮೆರೆದರು.

ಭಕ್ತರು ಶ್ರೀ ಅರಣ್ಯಸಿದ್ದೇಶ್ವರನಿಗೆ ಮಹಾಭೀಷೇಕ ಮಾಡಿ ಉಡಿ ತುಂಬಿದರು. ಕಳೆದ ನಾಲ್ಕು ದಿನಗಳಿಂದ ಡೊಳ್ಳುಗಾಯನ, ಮಹಾಪ್ರಸಾದ, ನಾಟಕ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪಲ್ಲಕ್ಕಿ ಉತ್ಸವ ಜನಮನ ಸೆಳೆಯಿತು. ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಎತ್ತಿನ ಗಾಡಿ ಶರ್ಯತ್ತು, ಜೋಡುಕುದುರೆ ಶರ್ಯತ್ತು ಜನರನ್ನು ರಂಜಿಸುವ ಜೊತೆಗೆ ಹಲವಾರು ಕೃಷಿ ಪ್ರಧಾನ ಕ್ರೀಡೆಗಳು ನಡೆದವು.

ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ, ಜಿ.ಪಂ ಮಾಜಿ ಸದಸ್ಯ ಮಲ್ಲಪ್ಪ ಬಾಗಿ, ತಾಪಂ ಸದಸ್ಯ ವೀರೇಂದ್ರ ಪಾಟೀಲ, ಧುರೀಣ ರವಿ ಪಾಟೀಲ, ವಿಠಲ ವಾಳಕೆ, ಪ್ರಕಾಶ ಬ್ಯಾಳಿ, ಮಲ್ಲಿಕಾರ್ಜುನ ಹಿರೇಮಠ, ಸಿದ್ದು ನಾವಿ, ಎಂ.ಎ.ಪಾಟೀಲ, ಚನಗೌಡ ಪಾಟೀಲ, ಸುರೇಶ ಬಾಡಕರ, ಬಾಳಗೌಡ ರೇಂದಾಳೆ, ಬಾಬಾಸಾಹೇಬ ಕೆಂಚನ್ನವರ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next