ಯಾದಗಿರಿ: ಕೋವಿಡ್ ಮೂರನೇ ಅಲೆ ಆತಂಕದಲ್ಲಿಯೂ ಅಮಾವಾಸ್ಯೆ ನಿಮಿತ್ತ ಮೈಲಾಪುರ ಮಲ್ಲಯ್ಯನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ರವಿವಾರ ಆಗಮಿಸಿದ್ದರು. ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಕೋವಿಡ್3ನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರದಂತೆ ಜಿಲ್ಲಾಡಳಿತ ಶ್ರಾವಣ ಮಾಸ ಅವಧಿಯಲ್ಲಿ ಪ್ರತಿ ರವಿವಾರ ಮತ್ತು ಸೋಮವಾರ ದೇವಸ್ಥಾನ ಮುಚ್ಚಲು ಆದೇಶ ನೀಡಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಯಾವುದನ್ನು ಲೆಕ್ಕಿಸದೇ ಭಕ್ತಿಯ ಪರಾಕಾಷ್ಠೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಅವಕಾಶವಿಲ್ಲ ಎನ್ನುವುದನ್ನು ಕೇಳಿ ನಿರಾಶೆಗೊಂಡರು.
ದೇವಸ್ಥಾನ ಬಾಗಿಲು ಮುಚ್ಚಿ, ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಿದ್ದರಿಂದ ಭಕ್ತರು ದೇವಸ್ಥಾನ ಕೆಳಗಿರುವ ಪಾದಗಟ್ಟೆಗೆ ಕಾಯಿ ಒಡೆದು, ಬಂಡಾರ ಹಚ್ಚಿಕೊಂಡು ಮರಳಿದರು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಮೈಲಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಒಂದೆಡೆ ಬ್ಯಾರಿಕೇಡ್, ಇನ್ನೊಂದೆಡೆ ಅಡ್ಡಲಾಗಿ ಮಣ್ಣು ಹಾಕಿ ವಾಹನ ಒಳ ಪ್ರವೇಶಿಸದಂತೆ ಎಚ್ಚರ ವಹಿಸಲಾಗಿತ್ತು.
ಕೊರೊನಾ ನಿಯಂತ್ರಣ ಹಿನ್ನೆಲೆ ಮೈಲಾಪುರದಲ್ಲಿ ಕಲಂ 144 ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು ನಿಯಮಗಳನ್ನು ಪಾಲಿಸಬೇಕು. ಸ್ಥಳದಲ್ಲಿಯೇ ಯಾದಗಿರಿ ಗ್ರಾಮೀಣ ಠಾಣೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಸಿ.ವೇದಮೂರ್ತಿ ತಿಳಿಸಿದ್ದಾರೆ.