Advertisement

ಭೀಮನಕೊಳ್ಳದಲ್ಲಿ ಭಕ್ತರಿಗೆ ತಪ್ಪದ ಭೀತಿ!

12:14 PM Apr 01, 2022 | Team Udayavani |

ಬಾಗಲಕೋಟೆ: ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯಲ್ಲಿರುವ ಸುಕ್ಷೇತ್ರ ಶ್ರೀಶೈಲಕ್ಕೆ ತೆರಳುವ ಮಾರ್ಗದಲ್ಲಿ ಬರುವ ಭೀಮನಕೊಳ್ಳ ಎಂಬ ಅದ್ಭುತ ತಾಣದ ಹಿಂದೆ ಇರುವ ಇತಿಹಾಸವೊಮ್ಮೆ ಕೇಳಿದರೆ ನೀವೆಲ್ಲ ಬೆರಗಾಗುತ್ತೀರಿ.

Advertisement

ಹೌದು. ಪಾಂಡವರು ವನವಾಸಕ್ಕೆ ಹೋದಾಗ ದ್ರೌಪತಿ ಬಾಯಾರಿಕೆಯಿಂದ ನಲುಗಿದ್ದಳು. ಈ ವೇಳೆ ಬಲಭೀಮನಿಗೆ ನೀರು ಕೇಳಿದಾಗ ಸುತ್ತಲೂ ಕಣ್ಣಾಡಿಸಿದರೂ ಎಲ್ಲೂ ನೀರು ಕಾಣಲಿಲ್ಲ. ಆಗ ಬಲಭೀತ ನೆಲಕ್ಕೆ ಗುದ್ದಿದಾಗ ದೊಡ್ಡ ತಗ್ಗು ಬಿದ್ದಿತ್ತು. ಆಗ ಅಲ್ಲಿಂದ ನೀರು ಚಿಮ್ಮಿದಾಗ ದ್ರೌಪತಿ ಸಹಿತ ಎಲ್ಲರೂ ಅಲ್ಲಿನ ನೀರು ಸೇವಿಸಿದರೆಂಬ ಪ್ರತೀತಿ ಇದೆ.

ವೆಂಕಟಾಪುರದಿಂದ ಶ್ರೀಶೈಲಕ್ಕೆ ತೆರಳುವ ಮಾರ್ಗದಲ್ಲಿ ಈ ಭೀಮನಕೊಳ್ಳವಿದ್ದು, ಸುತ್ತಲೂ ದೊಡ್ಡ ಬೆಟ್ಟ-ಗುಡ್ಡಗಳಿವೆ. ಇದನ್ನಳಿದು-ಹತ್ತಿ ಮುಂದೆ ಸಾಗಿದಾಗಲೇ ಶ್ರೀಶೈಲಕ್ಕೆ ತಲುಪಲು ಸಾಧ್ಯ. ಆದರೆ ಸುಮಾರು 60 ಕಿ.ಮೀ ಅಧಿಕವಾಗಿರುವ ಈ ಭೀಮನಕೊಳ್ಳ ದೇಶದಲ್ಲೇ ಪ್ರಸಿದ್ಧ ಪಡೆದ ನಲ್ಲ-ಮಲ್ಲ ಅರಣ್ಯ ಪ್ರದೇಶದಲ್ಲಿದೆ. ಇಲ್ಲಿ ಕಾಡು ಪ್ರಾಣಿಗಳ ಸಂಖ್ಯೆಯೂ ಅಧಿಕ. ಬೆಟ್ಟಗಳ ಮಧ್ಯೆ ಚಿಕ್ಕದಾದ ಕಾಲು ದಾರಿಯಲ್ಲೇ ಭಕ್ತರು, ಪ್ರತಿವರ್ಷ ಕಾಲ್ನಡಿಗೆಯಲ್ಲಿ ಶ್ರೀಶೈಲಕ್ಕೆ ತೆರಳುತ್ತಾರೆ.

ಈ ಪ್ರದೇಶದಲ್ಲಿ ಕುಡಿಯುವ ನೀರಾಗಲಿ, ತಿನ್ನಲು ಆಹಾರವಾಗಲಿ ಸಿಗಲ್ಲ. ಆಂಧ್ರದ ವ್ಯಾಪಾರಸ್ಥರು ಅಲ್ಲಲ್ಲಿ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ. ಅವರು ಹೇಳುವ ಬೆಲೆಗೇ ಎಲ್ಲ ವಸ್ತು ಖರೀದಿಸಬೇಕು. ಇಲ್ಲದಿದ್ದರೆ ಕುಡಿಯಲು ಹನಿ ನೀರೂ ಇಲ್ಲಿ ಸಿಗಲ್ಲ. ಇದಕ್ಕಾಗಿ ಭೀಮನಕೊಳ್ಳ ಮಾರ್ಗದಲ್ಲಿ ಕರ್ನಾಟಕ-ಆಂಧ್ರಪದೇಶ ಸರ್ಕಾರ ಜಂಟಿಯಾಗಿ ಹಲವು ಸುಧಾರಣಾ ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಶ್ರೀಶೈಲಕ್ಕೆ ತೆರಳುವ ಲಕ್ಷಾಂತರ ಉತ್ತರ ಕರ್ನಾಟಕ ಭಕ್ತರಿಗಾಗಿ ಈ ಭಾಗದ ಜನಪ್ರತಿನಿಧಿಗಳ ಗಟ್ಟಿ ಧ್ವನಿ ಎತ್ತಬೇಕಿದೆ ಎಂಬುದು ಹಲವು ಭಕ್ತರ ಒತ್ತಾಯ.

ಕೋಟಿ ಕೋಟಿ ಭಕ್ತರು: ಪ್ರತಿವರ್ಷ ಯುಗಾದಿಯಂದು ನಡೆಯುವ ಶ್ರೀಶೈಲ ಜಾತ್ರೆಗೆ ಕರ್ನಾಟಕ ಸೇರಿದಂತೆ ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳಿಂದ ಕೋಟ್ಯಂತರ ಭಕ್ತರು ಬರುತ್ತಾರೆ. ಪಾದಯಾತ್ರೆ ಮೂಲಕ ತೆರಳುವ ಪ್ರತಿಯೊಬ್ಬ ಭಕ್ತರೂ ನಲ್ಲ-ಮಲ್ಲ ದಟ್ಟಾರಣ್ಯ ಪ್ರದೇಶದಲ್ಲೇ ಸಾಗಬೇಕು.

Advertisement

ಕರ್ನಾಟಕದ ಭಕ್ತರು ತುಂಗಭದ್ರಾ ನದಿ ದಾಟಿ ಆಂಧ್ರ ಪ್ರವೇಶಿಸುತ್ತಿದ್ದಂತೆ ಕುಡಿಯುವ ನೀರಿಗಾಗಿ ತುಂಬಾ ಕಷ್ಟಪಡಬೇಕಾಗುತ್ತದೆ. ಅಲ್ಲಿ ದುಪ್ಪಟ್ಟು ಹಣ ಕೊಟ್ಟು ನೀರು ಖರೀದಿಸಬೇಕು. ಯಾವುದೇ ವಸ್ತು ಖರೀದಿಸಿದರೂ ದುಪ್ಪಟ್ಟು ಹಣ ಕೊಡಲೇಬೇಕು. ಪ್ರಶ್ನಿಸಿದರೆ ಅಲ್ಲಿನ ವ್ಯಾಪಾರಸ್ಥರು ನಿಂದಿಸುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿ, ಆಂಧ್ರದ ಸರ್ಕಾರ, ಕರ್ನೂಲ್‌ದ ಜಿಲ್ಲಾಧಿಕಾರಿ, ಎಸ್ಪಿ ಸಹಿತ ಎಲ್ಲರಿಗೂ ಇದು ಗೊತ್ತಿದೆ. ಇದಕ್ಕಾಗಿ ಎರಡೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಪಾದಯಾತ್ರಿಗಳು ಹಾಯ್ದು ಹೋಗುವಾಗ ಈರಣ್ಣ ದೇವಸ್ಥಾನ, ಭೀಮನಕೊಳ್ಳಿ, ಕೈಲಾಸ ಬಾಗಿಲು ತಲುಪುವ ಬೆಟ್ಟ ಅತ್ಯಂತ ದುರ್ಗಮ ಪ್ರದೇಶ. ಇಲ್ಲಿ ಸೂಕ್ತ ಬೆಳಕು, ಕುಡಿಯುವ ನೀರು, ವೈದ್ಯಕೀಯ ತುರ್ತು ಸೇವೆ ವ್ಯವಸ್ಥೆ ಮಾಡಬೇಕಿದೆ. ವೆಂಕಟಾಪುರ ಗ್ರಾಮದಿಂದ ಶ್ರೀಶೈಲಕ್ಕೆ ನಲ್ಲ-ಮಲ್ಲ ಅಭಯಾರಣ್ಯದ ಮದ್ಯ ಹಾಯ್ದು ಪಾದಯಾತ್ರಿಕರಿಗಾಗಿ ದಾರಿ ಮದ್ಯ ಇಚಲಕರಂಜಿ, ವಿಜಯಪುರ, ಜಮಖಂಡಿ ಮಲ್ಲಿಕಾರ್ಜುನ ಸೇವಾ ಸಮಿತಿಯವರು ಊಟ, ವಸತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಾರೆ. ಆದರೆ ಆಂಧ್ರಪ್ರದೇಶ ಸರ್ಕಾರ ಅರಣ್ಯದ ಮಧ್ಯ ಹೋಗುವ ಲಕ್ಷಾಂತರ ಭಕ್ತರಿಗೆ ಸೂಕ್ತ ಕುಡಿಯುವ ನೀರು, ಬೆಳಕು, ವೈದ್ಯಕೀಯ ಸೇವೆಗಳ ಮುಂತಾದ ಮೂಲಭೂತ ವ್ಯವಸ್ಥೆ ಮಾಡದೆ ತುಂಬಾ ಬೇಜಬ್ದಾರಿಯಿಂದ ನಡೆದುಕೊಳ್ಳುತ್ತದೆ ಎಂಬುದು ಹಲವು ಭಕ್ತರ ಆರೋಪ.

ಅರಣ್ಯದ ಮದ್ಯಯಾತ್ರಿಗಳಿಗೆ ರಾತ್ರಿ ತಂಗಲು ವ್ಯವಸ್ಥೆಯಾಗಬೇಕು. ಸ್ಥಳೀಯ ವ್ಯಾಪಾರಸ್ಥರು ಕನ್ನಡಿಗರ ಜತೆ ಸೌಜನ್ಯದಿಂದ ನಡೆದುಕೊಳ್ಳುವಂತೆ ಸ್ಥಳೀಯ ಆಡಳಿತ ಮತ್ತು ದೇವಸ್ಥಾನ ಆಡಳಿತ ತಾಕೀತು ಮಾಡಬೇಕು. ನಿಗದಿತ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವಂತೆ ಸೂಚಿಸಬೇಕು. ಭೂಕುಸಿತ, ಭಾರಿ ಮಳೆಗೆ ಯಾತ್ರಿಗಳು ಸಿಲುಕಿದಲ್ಲಿ ರಕ್ಷಣೆಗೆ ಹೆಲಿಕಾಪ್ಟರ್‌ ಮತ್ತು ಸೇನಾಪಡೆ ನಿಯೋಜಿಸಬೇಕು. ಪಾದಯಾತ್ರೆಯಿಂದ ಬಂದ ಭಕ್ತರಿಗೆ ಉಚಿತ 24/7 ವೈದ್ಯಕೀಯ ಸೇವೆ ನೀಡಬೇಕು. ಕರ್ನಾಟಕ ರಾಜ್ಯ ಸಾರಿಗೆ ಮತ್ತು ಆಂಧ್ರ ಸಾರಿಗೆಗಳ ಮದ್ಯ ಸಮನ್ವಯ ಸಾಧಿಸಬೇಕು. ಎರಡೂ ರಾಜ್ಯದವರು, ಯಾತ್ರಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುವುದು ನಿಲ್ಲಿಸಬೇಕು. ಆಂಧ್ರಪ್ರದೇಶದಲ್ಲಿ ಪಾದಯಾತ್ರಿಗಳು ಹಾಯ್ದು ಹೋಗುವ ಮಾರ್ಗ ಮಧ್ಯದಲ್ಲಿ ಊಟ, ವಸತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಎನ್‌ ಜಿಒಗಳಿಗೆ ಅನುಮತಿ ಕೊಡಲು ವಿವಿಧ ಇಲಾಖೆಯ ಅಧಿಕಾರಿಗಳು ಪರದಾಡಿಸುತ್ತಾರೆ. ಇದು ನಿಲ್ಲಬೇಕು.

ಶ್ರೀಶೈಲ ಕ್ಷೇತ್ರದಲ್ಲಿ ಸ್ಥಳೀಯ ಒಂದು ಗುಂಪು ಉದ್ದೇಶಪೂರ್ವಕವಾಗಿ ಕನ್ನಡಿಗರ ಜತೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ, ಉದ್ವಿಗ್ನ ವಾತಾವರಣ ನಿರ್ಮಿಸುವ ಷಡ್ಯಂತ್ರ ಪ್ರತಿವರ್ಷವೂ ಮಾಡುತ್ತದೆ. ಇದು ಸ್ಥಳೀಯ ಪೊಲೀಸ್‌ ಮತ್ತು ದೇವಸ್ಥಾನ ಆಡಳಿತ ಮಂಡಳಿಗೆ ತಿಳಿದಿದೆ. ಯುಗಾದಿ ಜಾತ್ರೆಗೆ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂಬುದು ಭಕ್ತರ ಒತ್ತಾಯ. ಕರ್ನಾಟಕದಿಂದ ಶ್ರೀಶೈಲಕ್ಕೆ ಹೋಗುವ ಭಕ್ತರು ಕೂಡ ಶಾಂತರೀತಿಯಿಂದ ನಡೆದುಕೊಳ್ಳಬೇಕು.

 

ನಾನು ಕಳೆದ 2018ರಿಂದ ಕುಟುಂಬ ಸಮೇತ ಶ್ರೀಶೈಲಕ್ಕೆ ಪಾದಯಾತ್ರೆಗೆ ತೆರಳುತ್ತಿದ್ದು, ಭೀಮನಕೊಳ್ಳ ಸಹಿತ ಶ್ರೀಶೈಲದಲ್ಲಿ ಕನ್ನಡಿಗ ಭಕ್ತರು ಬಹಳಷ್ಟು ತೊಂದರೆ ಅನುಭವಿಸುತ್ತಾರೆ. ಈ ಕುರಿತು ನಾನು ಸ್ವತಃ ಶ್ರೀಶೈಲ ಜಗದ್ಗುರುಗಳು, ಅಲ್ಲಿನ ಆಡಳಿತ ಮಂಡಳಿಗೆ ಒತ್ತಾಯಿಸುತ್ತಲೇ ಬಂದಿದ್ದೇವೆ. ಮೂರು ವರ್ಷಗಳಲ್ಲಿ ಕೆಲ ಬದಲಾವಣೆಯಾಗಿದ್ದು, ಇನ್ನೂ ಹಲವು ಅಗತ್ಯ ಬೇಡಿಕೆ-ಭದ್ರತೆ-ಅಗತ್ಯತೆಗೆ ಈಡೇರಿಕೆಗೆ ಎರಡೂ ಸರ್ಕಾರ ಮುಂದಾಗಬೇಕು.

ನಾಗರಾಜ ಕಲ್ಲಕುಟಕರ, ಶ್ರೀಶೈಲಕ್ಕೆ ತೆರಳಿದ ಭಕ್ತ, ಸಾಮಾಜಿಕ ಹೋರಾಟಗಾರ, ಬಾಗಲಕೋಟೆ

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next