ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮೂಲ ಸೌಕರ್ಯ ಈಡೇರಿಕೆ ಜತೆಗೆ ಕ್ಷೇತ್ರಕ್ಕಾಗಮಿಸುವ ಭಕ್ತರ, ದೇವಸ್ಥಾನದ ನೌಕರರ, ವಿದ್ಯಾರ್ಥಿಗಳ ಹಿತಕಾಯಲು ದೇವಸ್ಥಾನದ ಆಡಳಿತ ಸಂಪೂರ್ಣ ಬದ್ಧವಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸುಮಾರು 2.37 ಕೋಟಿ ರೂ.ಗಳಿಗೂ ಮಿಕ್ಕಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆಯನ್ನು ಗುರುವಾರ ನೆರವೇರಿಸಿ ಮಾತನಾಡಿದರು.
ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದು, ಅವರಿಗೆ ಸೌಕರ್ಯ ಒದಗಿಸುವುದು ನಮ್ಮ ಕರ್ತವ್ಯ. ಜತೆಗೆ ಕ್ಷೇತ್ರದಲ್ಲಿ ಹಲವು ಮೂಲ ಸೌಕರ್ಯಗಳ ಕೊರತೆ ಇತ್ತು. ಡಿ ಗ್ರೂಪ್ ನೌಕರರ ವಾಸ್ತವ್ಯಕ್ಕೆ ಕೊಠಡಿಗಳಿರಲಿಲ್ಲ. ಸಾಮಾನ್ಯ ವರ್ಗಕ್ಕೆ ಅನುಕೂಲವಾಗುವ ಕಲ್ಯಾಣ ಮಂಟಪ ನಿರ್ಮಾಣ ಇವೆಲ್ಲವನ್ನು ಪರಿಹರಿಸುವಲ್ಲಿ ನಮ್ಮ ಆಡಳಿತ ಆರಂಭದಿಂದಲೂ ಹೆಚ್ಚು ಮುತುವರ್ಜಿ ವಹಿಸಿ ಅಭಿವೃದ್ಧಿ ನಡೆಸುತ್ತ ಬಂದಿದೆ ಎಂದರು.
ಸ.ಪ.ಪೂ. ಕಾಲೇಜು ಬಳಿ 20.68 ಲಕ್ಷ ರೂ. ವೆಚ್ಚದಲ್ಲಿ ಬಾಲಕರ ಶೌಚಾಲಯ ನಿರ್ಮಾಣ, ಕೆಎಸ್‌ಆರ್‌ಟಿಸಿ ಬಳಿ ಸಾರ್ವಜನಿಕ ಶೌಚಾಲಯ, ಸವಾರಿ ಮಂಟಪ ಬಳಿ ಶೌಚಾಲಯ, ಅರಣ್ಯ ಇಲಾಖೆ ಹಿಂಭಾಗ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ದೇಗುಲದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಚ್.ಎಂ., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲು, ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್, ಮಹೇಶ್ ಭಟ್ ಕರಿಕ್ಕಳ, ರಾಜೀವಿ ಆರ್. ರೈ, ರವೀಂದ್ರನಾಥ ಶೆಟ್ಟಿ, ಮಾಧವ ಡಿ., ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ದೇಗುಲದ ಬಾಲಸುಬ್ರಹ್ಮಣ್ಯ ಭಟ್, ಮಾಸ್ಟರ್ ಪ್ಲಾನ್ ಸಮಿತಿಯ ಕೆ.ಪಿ. ಗಿರಿಧರ, ಶಿವರಾಮ ರೈ, ಲೋಲಾಕ್ಷ, ಗ್ರಾ.ಪಂ. ಉಪಾಧ್ಯಕ್ಷ ರಾಜೇಶ್ ಎನ್.ಎಸ್., ಪಿಡಿಒ ಮುತ್ತಪ್ಪ, ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ., ದೇಗುಲದ ಎಂಜಿನಿಯರ್ ಉದಯಕುಮಾರ್, ಪ್ರಾಂಶುಪಾಲೆ ಸಾವಿತ್ರಿ, ನಿವೃತ್ತ ಪ್ರಾಂಶುಪಾಲ ಪ್ರೊ| ರಂಗಯ್ಯ ಶೆಟ್ಟಿಗಾರ್, ಮುಖ್ಯ ಶಿಕ್ಷಕ ಯಶವಂತ ರೈ, ಗ್ರಾ.ಪಂ. ಸದಸ್ಯರಾದ ದಿನೇಶ್ ಬಿ.ಎನ್., ಮೋಹನದಾಸ್ ರೈ, ಸೌಮ್ಯಾ ಬಿ., ಭವಾನಿಶಂಕರ ಪೂಂಬಾಡಿ, ಪ್ರಶಾಂತ ಭಟ್ ಮಾಣಿಲ, ಪ್ರಮುಖರಾದ ಯಜ್ಞೇಶ್ ಆಚಾರ್, ರವಿ ಕಕ್ಕೆಪದವು, ಗೋಪಾಲ ಎಣ್ಣೆಮಜಲು, ಉಪನ್ಯಾಸಕ ಸೋಮಶೇಖರ, ಪ್ರಕಾಶ್ ಕುಂದಾಪುರ, ಸುಬ್ರಹ್ಮಣ್ಯ ರಾವ್, ಗುತ್ತಿಗೆದಾರರು ಉಪಸ್ಥಿತರಿದ್ದರು.
ಯೋಜನೆ ಉದ್ಘಾಟನೆ
ಆದಿಸುಬ್ರಹ್ಮಣ್ಯದಲ್ಲಿ 9.82 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪ, ಇಂಜಾಡಿಯಲ್ಲಿ 43.04 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನದ ಡಿ ಗ್ರೂಪ್ ನೌಕರರಿಗೆ ವಸತಿಗೃಹ, ದೇವಸ್ಥಾನದ ವತಿಯಿಂದ ಇಂಜಾಡಿ ಬಳಿ 58.06 ಲಕ್ಷ ರೂ. ವೆಚ್ಚದ ಮುಕ್ತಿಧಾಮ, ಅಗ್ರಹಾರ ಬಳಿ ನಕ್ಷತ್ರ ವನದಲ್ಲಿ 26.10 ಲಕ್ಷ ರೂ. ವೆಚ್ಚದಲ್ಲಿ ನವೀಕೃತ ಗಾರ್ಡನ್, ಷಣ್ಮುಖ ಭೋಜನ ಶಾಲೆಗೆ 11.98 ಲಕ್ಷ ರೂ. ವೆಚ್ಚದಲ್ಲಿ ಡಿಶ್ ವಾಷಿಂಗ್ ಮೆಷಿನ್ ಅಳವಡಿಕೆ, ಆದಿಶೇಷ ವಸತಿಗೃಹದಲ್ಲಿ 13.54 ಲಕ್ಷ ರೂ. ವೆಚ್ಚ ದಲ್ಲಿ ಲಿಫ್ಟ್ ವ್ಯವಸ್ಥೆ, ಆದಿಶೇಷ ವಸತಿಗೃಹಕ್ಕೆ 12.58 ಲಕ್ಷ ರೂ. ವೆಚ್ಚದಲ್ಲಿ ಜನರೇಟರ್ ಅಳವಡಿಕೆ, ಆದಿಶೇಷ ಮುಂಭಾಗದ ನವೀಕೃತ ಗಾರ್ಡನ್‌ಗಳ ಉದ್ಘಾಟನೆ ನೆರವೇರಿತು.