ಉಡುಪಿ: ದೇವಸ್ಥಾನಗಳಲ್ಲಿ ಭಕ್ತರ ಆಗಮನಕ್ಕೆ ಸರ್ಕಾರ ಇಂದಿನಿಂದ ಅವಕಾಶ ಮಾಡಿಕೊಟ್ಟಿದ್ದು, ಇಂದು ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಕೋವಿಡ್-19 ವೈರಸ್ ಕಾರಣದಿಂದ ದೇವಸ್ಥಾನಗಳಿಗೆ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿತ್ತು. ಸದ್ಯ ಬಹುತೇಕ ಲಾಕ್ ಡೌನ್ ನಿರ್ಬಂಧಗಳು ಸಡಿಲವಾದ ಕಾರಣ ಸರಕಾರ ಇಂದಿನಿಂದ ಅವಕಾಶ ನೀಡಿದೆ. ಆದರೆ ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ನೀಡಿದೆ.
ಕುಕ್ಕೆ ಸುಬ್ರಹ್ಮಣ್ಯ
ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ಇಂದು ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಗಾರಾಧನೆಗೆ ಪ್ರಸಿದ್ದಿ ಪಡೆದ ಕುಕ್ಕೆ ದೇಗುಲಕ್ಕೆ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಆದರೆ ಪ್ರವೇಶ ದ್ವಾರದಲ್ಲಿ ದೇಗುಲ ಸಿಬ್ಬಂದಿಗಳು, ಪೊಲೀಸರು ಭಕ್ತರನ್ನು ಸಾಮಾಜಿಕ ಅಂತರದ ಮೂಲಕ ಒಳ ಬಿಡುತ್ತಿದ್ದಾರೆ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರ
ಮಂಗಳೂರಿನ ಪ್ರಸಿದ್ದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದು ನಾಡು ಕೋವಿಡ್-19 ಸೋಂಕಿನಿಂದ ಮುಕ್ತಗೊಂಡು ಸುಭಿಕ್ಷೆಯಾಗಲೆಂದು ಲೋಕ ಕಲ್ಯಾಣಾರ್ಥವಾಗಿ ಧನ್ವಂತರಿ ಯಾಗ ನಡೆಯುತ್ತಿದೆ.
ಶೃಂಗೇರಿ ಶಾರದಾಂಬೆ ದೇವಾಲಯ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾಂಬೆ ದೇವಾಲಯದಲ್ಲೂ ಇಂದು ಬೆಳಗ್ಗೆ 6 ಗಂಟೆಯಿಂದಲೇ ಭಕ್ತರಿಗೆ ಶಾರದೆಯ ದರ್ಶನ ಅವಕಾಶ ನೀಡಿಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12, ಸಂಜೆ 5ರಿಂದ ರಾತ್ರಿ 8 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಭಕ್ತರಿಗೆ ಕೇವಲ ಕುಂಕುಮ ಪ್ರಸಾದ, ಬೇರೆ ಯಾವುದೇ ರೀತಿಯ ಪ್ರಸಾದ ನೀಡಲಾಗುವುದಿಲ್ಲ.
ಕೋವಿಡ್-19 ಕಾರಣದಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾರಣ ಒಂದು ಬಾರಿಗೆ ದೇವಸ್ಥಾನದ ಒಳಗೆ 20-25 ಭಕ್ತರಿಗಷ್ಟೆ ಅವಕಾಶ ನೀಡಲಾಗುತ್ತಿದೆ. ದೇವಾಲಯದಲ್ಲಿ ಮುಂದಿನ ತೀರ್ಮಾನದವರೆಗೂ ಅನ್ನಸಂತರ್ಪಣೆ ಇರುವುದಿಲ್ಲ ಎಂದು ದೇವಾಲಯ ಮಂಡಳಿ ಸ್ಪಷ್ಟಪಡಿಸಿದೆ.
ದತ್ತಪೀಠ: ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದಲ್ಲೂ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ದತ್ತಭಕ್ತರು ಮುಂಜಾನೆಯಿಂದಲೇ ಬಾಬಾಬುಡನ್ ಗಿರಿ ಗೆ ಆಗಮಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಭಕ್ತರಿಗೆ ಅವಕಾಶ ನೀಡಲಾಗುತ್ತಿದ್ದು, ದತ್ತಗುಹೆ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.
ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ
ಮಂಗಳೂರಿನ ಪುರಾಣ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ರಾಜ್ಯ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪೂಜೆ ಸಲ್ಲಿಸಿದರು.
ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನ:
ಕಾಪು ಬಳಿಯ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲೂ ಇಂದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅವಕಾಶವಿದ್ದರೂ ಇಂದು ದೇವಸ್ಥಾನದಲ್ಲಿ ಭಕ್ತರು ವಿರಳವಾಗಿ ಕಂಡರು.