ವಾಡಿ: ಸಮಾಜಮುಖೀಯಾಗಿ ಶ್ರಮಿಸಿದ ಮಹಾತ್ಮರ ಶರೀರ ಮಾಯವಾಗಬಹುದು, ಆದರೆ ಭಕ್ತರ ಮನದಾಳದಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದು ಮುಗುಳನಾಗಾಂವ ಕಟ್ಟಿಮನಿ ಹಿರೇಮಠದ ಉತ್ತರಾಧಿಕಾರಿ ಶ್ರೀ ಸಿದ್ಧಲಿಂಗ ದೇವರು ನುಡಿದರು.
ಶುಕ್ರವಾರ ರಾವೂರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಲಿಂ. ಸಿದ್ಧಲಿಂಗ ಶ್ರೀಗಳ ಪ್ರಥಮ ಪುಣ್ಯಸ್ಮರಣೆ ಹಾಗೂ ಶ್ರೀಗಳ ಗದ್ದುಗೆ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಸಾಹಿತ್ಯ ಪ್ರೇಮಿಯಾಗಿದ್ದ ಲಿಂ. ಸಿದ್ಧಲಿಂಗ ಸ್ವಾಮೀಜಿ ಇತಿಹಾಸ ಓದುವುದರ ಜತೆಗೆ ಸಹನೆ, ಶಾಂತಿ, ಸದ್ಗುಣಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವ ಮೂಲಕ ಜಡವಸ್ತುಗಳಿಗೂ ಅಧ್ಯಾತ್ಮದ ಜೀವ ತುಂಬಿದ್ದಾರೆ. ಲಕ್ಷಾಂತರ ಮಕ್ಕಳ ಬಾಳಲ್ಲಿ ಅಕ್ಷರ ಕೃಷಿ ಮಾಡಿದ್ದಾರೆ. ಹೀಗಾಗಿ ರಾವೂರಿನ ಪ್ರತಿಯೊಂದು ಮನಸ್ಸು ಶ್ರೀಗಳ ಅಗಲಿಕೆಯಿಂದ ನೊಂದಿವೆ ಎಂದರು.
ಚಿತ್ತಾಪುರ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ, ರಾವೂರ ಮಠದ ಲಿಂ. ಸಿದ್ಧಲಿಂಗ ಶ್ರೀಗಳು ಪುಸ್ತಕ ಪ್ರೇಮಿಯಾಗಿದ್ದರು. ಸಾಹಿತ್ಯ ಸಮ್ಮೇಳನಗಳಿಗೆ ಹೋಗಿ ರಾಶಿಗಟ್ಟಲೇ ಪುಸ್ತಕ ತಂದು ಅಧ್ಯಯನ ಮಾಡುತ್ತಿದ್ದರು ಎಂದು ಸ್ಮರಿಸಿಕೊಂಡರು. ರಾಜ್ಯ ದ್ವಿದಳ ಧಾನ್ಯ ನಿಗಮ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ ಉದ್ಘಾಟಿಸಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಶ್ರೀಗಳ ಗದ್ದುಗೆಗೆ ಅಡಿಗಲ್ಲು ನೆರವೇರಿಸಿದರು.
ಭರತನೂರ ವಿರಕ್ತ ಮಠದ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಅಧ್ಯಕ್ಷತೆ, ಹಜರತ್ ಸೈಯ್ಯದ್ ಮೂಸಾ ಖ್ವಾದ್ರಿ, ಮಾಲಗತ್ತಿ ಚೆನ್ನಪ್ಪ ಶರಣರು ಸಾನ್ನಿಧ್ಯ ವಹಿಸಿದ್ದರು. ತಾಲೂಕು ವೈದ್ಯಾಧಿ ಕಾರಿ ಡಾ| ದೀಪಕ ಪಾಟೀಲ, ಡಾ| ರಾಜಕುಮಾರ ಕುಲಕರ್ಣಿ, ಜಿಪಂ ಸದಸ್ಯರಾದ ಅಶೋಕ ಸಗರ, ಅರವಿಂದ ಚವ್ಹಾಣ, ಪ್ರಾಚಾರ್ಯ ಕಾಂತಪ್ಪ ಬಡಿಗೇರ, ಮುಖಂಡರಾದ ಚೆನ್ನಣ್ಣ ಬಾಳಿ, ಅಬ್ದುಲ್ ಅಜೀಜಸೇಠ, ಶಿವಲಿಂಗಪ್ಪ ವಾಡೇದ, ಅಣ್ಣಾರಾವ ಬಾಳಿ, ಶರಣು ಜ್ಯೋತಿ, ಸಿದ್ಧಲಿಂಗ ಬಾಳಿ, ರಾಮಚಂದ್ರ ರಾಠೊಡ, ತಿಪ್ಪಣ್ಣ ವಗ್ಗರ, ಗುರುನಾಥ ಗುದಗಲ್ ಪಾಲ್ಗೊಂಡಿದ್ದರು. ಡಾ| ಗುಂಡಣ್ಣ ಬಾಳಿ ಸ್ವಾಗತಿಸಿದರು, ರಘುನಾಥ ಕರದಾಳ ನಿರೂಪಿಸಿದರು.
ಗುರುಗಳು ದೈಹಿಕವಾಗಿ ಅಗಲಿರಬಹುದು. ಅವರು ಹಾಕಿಕೊಟ್ಟ ಮಾರ್ಗ ಸ್ಪಷ್ಟವಾಗಿದೆ. ಮಠದ ಉತ್ತರಾಧಿಕಾರಿ ಯಾಗಿ ಬರುವ ಮರಿ ಹೆಚ್ಚು ಓದದಿದ್ದರೂ ಚಿಂತೆಯಿಲ್ಲ. ತಂದೆ-ತಾಯಿ, ಬಂಧು-ಬಳಗದ ಸಂಪರ್ಕವಿಲ್ಲದ ಸಮಚಿಂತಕ, ಜನಸೇವಕ ಮಠಕ್ಕೆ ಬರಬೇಕು ಎನ್ನುವುದು ಶ್ರೀಗಳ ಆಸೆಯಾಗಿತ್ತು. ಮಠದ ಕಾಗದ ಪತ್ರಗಳ ಮೇಲೆ ನಾನು ಹೀಗೆ ಕಣ್ಣಾಡಿಸುವಾಗ ಪೂಜ್ಯರು ಬರೆದಿಟ್ಟ ಸಂಗತಿ ಬಹಿರಂಗವಾಗಿದೆ. ಕಾಕತಾಳಿಯ ಎನ್ನುವಂತೆ ತಂದೆ, ತಾಯಿ ಯಾರು? ನಾನು ಹುಟ್ಟಿದ ಊರು ಯಾವುದು? ಎನ್ನುವುದನ್ನು ಅರಿಯದೇ ನೋವು ಪಡುತ್ತಿದ್ದ ನಾನು ಗದುಗಿನ ಮಠದಲ್ಲಿ ಓದಿದೆ. ನನ್ನನ್ನು ರಾವೂರ ಮಠದ ಉತ್ತರಾಧಿ
ಕಾರಿಯನ್ನಾಗಿ ನೀವು ಆಯ್ಕೆ ಮಾಡಿದ್ದೀರಿ.ನನಗೆ ಭಕ್ತರೇ ತಂದೆ-ತಾಯಿ. ಹೀಗಾಗಿ ನನ್ನ ಊರು ರಾವೂರು ಎಂದು ಈಗ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಬರುವ ಮೇ 5ರಂದು ಶ್ರೀ ಸಿದ್ಧಲಿಂಗೇಶ್ವರ ಜಾತ್ರೆ ನಡೆಯಲಿದೆ.ಅಷ್ಟರೊಳಗಾಗಿ ಶ್ರೀಗಳ ಗದ್ದುಗೆ ನಿರ್ಮಿಸಿ ಗದಗಿನ ಪೂಜ್ಯರ ಹಸ್ತದಿಂದ ಉದ್ಘಾಟಿಸುವ ಪಣ ತೊಟ್ಟಿದ್ದೇನೆ.
ಶ್ರೀ ಸಿದ್ಧಲಿಂಗ ದೇವರು, ಉತ್ತರಾಧಿಕಾರಿ,
ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠ